ಮುಂಬೈ(ಮೇ.29): ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಯುಎಇ ಆತಿಥ್ಯ ವಹಿಸಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಖಚಿತಪಡಿಸಿದ್ದಾರೆ. ಈ ಮೂಲಕ ಬಿಸಿಸಿಐ ಹಲವು ಊಹಾಪೋಹಗಳಿಗೆ ತೆರೆ ಎಳೆದಿದೆ.

ಇಂದು(ಮೇ.29) ವಿಶೇಷ ಸಾಮಾನ್ಯ ಸಭೆ ನಡೆಸಿದ ಬಿಸಿಸಿಐ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಈ ಹಿಂದೆ 13ನೇ ಆವೃತ್ತಿಯ ಸಂಪೂರ್ಣ ಐಪಿಎಲ್‌ ಟೂರ್ನಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌(ಯುಎಇ) ಆತಿಥ್ಯವನ್ನು ವಹಿಸಿತ್ತು. ಭಾರತದಲ್ಲಿ ಸದ್ಯ ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಇನ್ನುಳಿದ 31 ಐಪಿಎಲ್‌ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲು ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮುಂಬರುವ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಐಪಿಎಲ್‌ ಭಾಗ-2 ಯುಎಇನಲ್ಲಿ ನಡೆಯಲಿದೆ.

ಈ ಮೊದಲು ಐಪಿಎಲ್‌ ಭಾಗ-2 ಟೂರ್ನಿಯು ಇಂಗ್ಲೆಂಡ್, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಬಿಸಿಸಿಐ ಈ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದೆ. 

ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ IPL 2021; ದುಬೈನಲ್ಲಿ ಆಯೋಜಿಸಲು BCCI ಪ್ಲಾನ್!

ಇನ್ನು ಇದೇ ವೇಳೆ ಭಾರತದಲ್ಲಿ ನಡೆಯಬೇಕಿರುವ 2020ರ ಟಿ20 ವಿಶ್ವಕಪ್ ಆಯೋಜನೆಯ ಕುರಿತಂತೆ ಬಿಸಿಸಿಐ, ಐಸಿಸಿಗೆ ಮತ್ತಷ್ಟು ಕಾಲಾವಕಾಶವನ್ನು ಕೇಳಿದೆ. ಭಾರತದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಅಯೋಜಿಸಬೇಕೇ ಅಥವಾ ಬೇಡವೇ ಎನ್ನುವ ಕುರಿತಂತೆ ಐಸಿಸಿ ಜೂನ್‌ 01ರಂದು ಸಭೆ ಸೇರಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ. ಆದರೆ ಭಾರತದಲ್ಲೇ ಟೂರ್ನಿ ಆಯೋಜಿಸಲು ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಎದುರು ನೋಡುತ್ತಿರುವ ಬಿಸಿಸಿಐ, ಇದೀಗ ಐಸಿಸಿ ಬಳಿ ಮತ್ತಷ್ಟು ಸಮಯಾವಕಾಶವನ್ನು ಕೇಳಿದೆ.

ಐಪಿಎಲ್‌ ಟೂರ್ನಿ ಯುಎಇಯಲ್ಲಿ ನಡೆಯುವುದು ಖಚಿತವಾದಂತೆ ಆಯಿತು. ಆದರೆ ಟಿ20 ವಿಶ್ವಕಪ್ ಟೂರ್ನಿಯು ಭಾರತದಲ್ಲೇ ನಡೆಯಲಿದೆಯೇ ಅಥವಾ ಬೇರೆಡೆಗೆ ಸ್ಥಳಾಂತರಗೊಳ್ಳಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

"