ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಜಯ ಸಾಧಿಸಿದೆ.

ಚೆನ್ನೈ, (ಏ.14):  ಐಪಿಎಲ್​ನ 6ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸನ್​​ ರೈಸರ್ಸ್​​ ಹೈದ್ರಾಬಾದ್ ವಿರುದ್ಧ 6 ರನ್‌ಗಳ ರೋಚಕ ಗೆಲುವು ಸಾಧಿಸಿದೆ.​​

ಇಂದು (ಬುಧವಾರ) ಚೆನ್ನೈನ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 149 ರನ್ ದಾಖಲಿಸಿತು. 

IPL 2021 ಆರ್‌ಸಿಬಿ ಮ್ಯೂಸಿಕ್‌ ಬ್ಯಾಂಡ್‌ ಫೋಟೋ ವೈರಲ್‌

ಆರ್​ಸಿಬಿ ಪರ ನಾಯಕ ವಿರಾಟ್ ಕೊಹ್ಲಿ 33(29) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ 59(41) ಹೊರತುಪಡಿಸಿ ಉಳಿದ ಆಟಗಾರರು ಇನ್ನಿಂಗ್ಸ್ ಕಟ್ಟುವ ಆಟ ಆಡಿಲ್ಲ. ಸನ್​ರೈಸರ್ಸ್ ಹೈದರಾಬಾದ್ ಪರ ಬೌಲರ್​ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ರಶೀದ್ ಖಾನ್ 4 ಓವರ್​ನಲ್ಲಿ 18 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಬಳಿಸಿದ್ದಾರೆ. ಜೇಸನ್ ಹೋಲ್ಡರ್ 4 ಓವರ್​ನಲ್ಲಿ 30 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ.

150 ರನ್‌ಗಳ ಸವಾಲು ಬೆನ್ನಟ್ಟಿದ ಸನ್‌ರೈಸರ್ಸ್, ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ಗೆಲುವಿನ ಆಸೆಯಲ್ಲಿತ್ತು. ನಾಯಕ ಡೇವಿಡ್ ವಾರ್ನೆರ್ ಹಾಗೂ ಮನೀಶ್ ಪಾಂಡೆ ಉತ್ತಮ ಆಟವಾಡಿ ಗೆಲ್ಲುವ ಸೂಚನೆ ನೀಡಿದ್ದರು. ಆದರೆ, ಅವರಿಬ್ಬರು ಔಟ್ ಆದ ಬಳಿಕ ಆರ್‌ಸಿಬಿಯ ಬೌಲಿಂಗ್ ದಾಳಿಗೆ ವಾರ್ನರ್ ಪಡೆ ಪೆವಿಲಿಯನ್ ಪರೇಡ್ ನಡೆಸಿತು.

ಡೆತ್ ಓವರ್​ಗಳಲ್ಲಿ ಮಿಂಚಿದ ಬೌಲರ್ಸ್
ಹೌದು... ಆರ್​ಸಿಬಿ ಬೌಲರ್​ಗಳು ಡೆತ್ ಓವರ್​ಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರು. ಸನ್​ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಲೈನ್​ಅಪ್ ಧೂಳಿಪಟ ಮಾಡಿದರು. ಆರ್​ಸಿಬಿ ಪರ ಶಹಬಾಜ್ ಅಹ್ಮದ್ 2 ಓವರ್ ಬೌಲ್ ಮಾಡಿ ಕೇವಲ 7 ರನ್ ನೀಡಿ 3 ವಿಕೆಟ್ ಕಬಳಿಸಿದರು. ಒಂದೇ ಓವರ್​ನಲ್ಲಿ ಶಹಬಾಜ್ 3 ವಿಕೆಟ್ ಪಡೆದಿದ್ದು ಪಂದ್ಯದ ದಿಕ್ಕನ್ನೇ ಬದಲಿಸಿತು. ಅಲ್ಲದೇ ಇದು ಮ್ಯಾಚ್‌ ಟರ್ನಿಂಗ್ ಪಾಯಿಂಟ್ ಆಯ್ತು.

ಅಂತಿಮವಾಗಿ ಹೈದ್ರಾಬಾದ್ ತಂಡ 20 ಓವರ್‌ಗಳಲ್ಲಿ 143 ರನ್‌ಗಳಿಸಲಷ್ಟೇ ಶಕ್ತವಾಯ್ತು. ಇದರೊಂದಿಗೆ ಕೊಹ್ಲಿ ಪಡೆ 6 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್ 2, ಜಮ್ಮಿಸನ್ 1, ಹರ್ಷಲ್ ಪಟೇಲ್ 2 ಹಾಗೂ ಶಹಬಾಜ್ ಅಹ್ಮದ್ 3 ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವಾದರು.