ಬೆಂಗಳೂರು(ಏ.15): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಆರನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 6 ರನ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಕಳೆದ ಆವೃತ್ತಿಯ ಎಲಿಮಿನೇಟರ್‌ ಪಂದ್ಯದ ಸೋಲಿಗೆ ಆರ್‌ಸಿಬಿ ತಕ್ಕೆ ಪ್ರತ್ಯುತ್ತರ ನೀಡಿದೆ.

ಹೌದು, ಗೆಲ್ಲಲು 150 ರನ್‌ಗಳ ಸಾಧಾರಣ ಗುರಿ ಪಡೆದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಒಂದು ಹಂತದಲ್ಲಿ 11 ಓವರ್‌ ಅಂತ್ಯದ ವೇಳೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡು 87 ರನ್‌ಗಳಿಸಿ ಗೆಲುವಿನತ್ತ ದಾಪುಗಾಲಿಡುತ್ತಿತ್ತು. ಇನ್ನೇನು ಹೈದರಾಬಾದ್‌ ತಂಡ ಸುಲಭವಾಗಿ ಗೆಲುವು ದಾಖಲಿಸಲಿದೆ ಎಂದು ಊಹಿಸಿದ್ದ ಕ್ರಿಕೆಟ್‌ ಪಂಡಿತರ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದ್ದು ಆರ್‌ಸಿಬಿ ಡೆತ್ ಓವರ್‌ ಸ್ಪೆಷಲಿಸ್ಟ್ ಬೌಲರ್‌ಗಳು. ಅದರಲ್ಲೂ 17ನೇ ಓವರ್‌ ಬೌಲಿಂಗ್‌ ಮಾಡಿದ ಶಹಬಾಜ್ ಅಹಮದ್ ಕೇವಲ ಒಂದು ರನ್‌ ನೀಡಿ ಹೈದ್ರಾಬಾದ್‌ ತಂಡದ ಪ್ರಮುಖ 3 ವಿಕೆಟ್‌ ಕಬಳಿಸುವ ಪಂದ್ಯದ ದಿಕ್ಕನ್ನೇ ಬದಲಿಸಿಬಿಟ್ಟರು.

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ 26 ವರ್ಷದ ಶಹಬಾಜ್ ಅಹಮದ್, ನಾಯಕ ವಿರಾಟ್‌ ಕೊಹ್ಲಿ ಕಠಿಣ ಪರಿಸ್ಥಿತಿಯಲ್ಲೂ ನನ್ನ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟು ಅವಕಾಶ ನೀಡಿದ್ದರಿಂದ ಈ ಪ್ರದರ್ಶನ ಸಾಧ್ಯವಾಯಿತು ಎಂದು ಎಡಗೈ ಸ್ಪಿನ್ನರ್‌ ಹೇಳಿದ್ದಾರೆ. 

ಐಪಿಎಲ್ 2021: ಸನ್‌ರೈಸರ್ಸ್ ವಿರುದ್ಧ ಆರ್‌ಸಿಬಿಗೆ ರೋಚಕ ಜಯ

ಇದೊಂದು ರೀತಿ ಕಠಿಣ ಪರಿಸ್ಥಿತಿ ಎನ್ನುವಂತಾಗಿತ್ತು. ಆದರೆ ನಾಯಕ ನನ್ನ ಮೇಲೆ ವಿಶ್ವಾಸವಿಟ್ಟು ಬೌಲಿಂಗ್‌ ನೀಡಿದರು. ಹಾಗಾಗಿ ನಾನು ಆತ್ಮವಿಶ್ವಾಸದಿಂದ ಬೌಲಿಂಗ್‌ ಮಾಡಲು ಸಾಧ್ಯವಾಯಿತು. ಹೀಗಾಗಿ ನಾಯಕ ವಿರಾಟ್ ಕೊಹ್ಲಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪಿಚ್ ಪರಿಸ್ಥಿತಿ ನೋಡಿ ನಾಯಕ ನನಗೆ 17ನೇ ಓವರ್‌ ಬೌಲಿಂಗ್‌ ಮಾಡಲು ಅವಕಾಶ ನೀಡಿದರು. ಹೀಗಾಗಿ ನನಗೆ ವಿಕೆಟ್‌ ಕಬಳಿಸಲು ಸಾಧ್ಯವಾಯಿತು. ಇನ್ನು 19ನೇ ಓವರ್‌ ನಾನೇ ಬೌಲಿಂಗ್‌ ಮಾಡಲು ಸಿದ್ದನಿದ್ದೆ. ಅದರೆ ಸಿರಾಜ್ ನಮ್ಮ ತಂಡದ ಒಳ್ಳೆಯ ಡೆತ್ ಬೌಲರ್‌ ಆಗಿದ್ದರಿಂದ ಕೊಹ್ಲಿ ಸಿರಾಜ್‌ ಮೇಲೆ ವಿಶ್ವಾಸವಿಟ್ಟು ಅವರಿಗೆ ಬೌಲಿಂಗ್ ನೀಡಿದರು ಎಂದು ಶಹಬಾಜ್‌ ಅಹಮದ್ ಹೇಳಿದ್ದಾರೆ.

ಈ ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿದ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆರಿದೆ. ಇನ್ನು ಏಪ್ರಿಲ್‌ 18ರಂದು ನಡೆಯಲಿರುವ ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಯಾನ್ ಮಾರ್ಗನ್‌ ನೇತೃತ್ವದ ಕೋಲ್ಕತ ನೈಟ್‌ ರೈಡರ್ಸ್‌ ತಂಡವನ್ನು ಎದುರಿಸಲಿದೆ.