ನವದೆಹಲಿ(ಮೇ.11): ಇಡೀ ದೇಶವೇ ಕೋವಿಡ್ ಎರಡನೇ ಅಲೆಯ ವಿರುದ್ದ ಹೋರಾಡುತ್ತಿದೆ. ಹಲವೆಡೆ ಆಕ್ಸಿಜನ್‌ ಸಿಲಿಂಡರ್, ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನು ದೇಶ ಎದುರಿಸುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿ ಬರೋಬ್ಬರಿ 30 ಕೋಟಿ ರುಪಾಯಿ ಹಣವನ್ನು ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ರೂಪದಲ್ಲಿ ನೀಡಿದೆ.

ದೇಶಾದ್ಯಂತ ಪ್ರತಿನಿತ್ಯ ಮೂರುವರೆ ಲಕ್ಷಕ್ಕೂ ಅಧಿಕ ಹೊಸ ಕೋವಿಡ್ 19 ಕೇಸ್‌ಗಳು ಪತ್ತೆಯಾಗುತ್ತಿದ್ದು, ದಿನಂಪ್ರತಿ 4  ಸಾವಿರಕ್ಕೂ ಅಧಿಕ ಸಾವುಗಳು ಸಂಭವಿಸುತ್ತಿವೆ. ಹೀಗಿರುವಾಗ ಸನ್‌ರೈಸರ್ಸ್ ಹೈದರಾಬಾದ್ ಮಾಲೀಕರಾದ ಸನ್‌ ಟಿವಿ ನೆಟ್‌ವರ್ಕ್‌ ಕೋವಿಡ್‌ ಎರಡನೇ ಅಲೆಗೆ ತತ್ತರಿಸಿರುವ ಜನರಿಗೆ ನೆರವಾಗಲು 30 ಕೋಟಿ ರುಪಾಯಿ ದೇಣಿಗೆಯನ್ನು ಸೋಮವಾರ(ಮೇ.10) ನೀಡಿದೆ. ಈ ವಿಚಾರವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಪ್ರಕಟಣೆಯನ್ನು ತಿಳಿಸಿದೆ.

ಈ ಹಣವು ಭಾರತ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸ್ವಯಂ ಸೇವಕ ಸಂಘಗಳ ಮೂಲಕ ಜನರಿಗೆ ನೆರವಾಗಲಿದೆ ಎಂದು ಸನ್‌ರೈಸರ್ಸ್‌ ಹೈದರಾಬಾದ್ ತಿಳಿಸಿದೆ. ಈ ಪೈಕಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿವಿಧ ಕೋವಿಡ್ ಪರಿಹಾರ ಕಾರ್ಯಕ್ರಮಗಳಿಗೆ ನೆರವಾಗಲಿದೆ. ಅದೇ ರೀತಿ ಎನ್‌ಜಿಓಗಳು ಆಕ್ಸಿಜನ್ ಸಿಲಿಂಡರ್ ಹಾಗೂ ಮೆಡಿಸಿನ್‌ಗಳನ್ನು ಪೂರೈಸಲು ನೆರವಾಗುವ ನಿಟ್ಟಿನಲ್ಲಿ ಸನ್‌ರೈಸರ್ಸ್‌ ದೇಣಿಗೆ ನೀಡಿದೆ.

ಐಪಿಎಲ್ ರದ್ದು: ಈ ಸಲ ಕಪ್ ಕೊರೋನಾದ್ದು!

ಇದೇ ವೇಳೆ 2016ರ ಐಪಿಎಲ್ ಚಾಂಪಿಯನ್‌ ಸನ್‌ರೈಸರ್ಸ್ ಹೈದರಾಬಾದ್‌, ತನ್ನ ಮಾಧ್ಯಮ ಸಂಸ್ಥೆಗಳ ಮೂಲಕ ಭಾರತ ಹಾಗೂ ಜಗತ್ತಿನಾದ್ಯಂತ ಇರುವ ವೀಕ್ಷಕರಲ್ಲಿ ಕೋವಿಡ್‌ ಸುರಕ್ಷತೆಯ ಕುರಿತಂತೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಿದೆ ಎಂದು ಟ್ವೀಟ್‌ ಮೂಲಕ ತಿಳಿಸಿದೆ.

14ನೇ ಆವೃತ್ತಿಯ ಐಪಿಎಲ್‌ನಲ್ಲಿ ನೀರಸ ಪ್ರದರ್ಶನ ತೋರಿರುವ ಸನ್‌ರೈಸರ್ಸ್‌: ಹೌದು, ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಿಂದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿಲ್ಲ. ಮೊದಲ 7 ಪಂದ್ಯಗಳ ಪೈಕಿ ಸನ್‌ರೈಸರ್ಸ್ ಹೈದರಾಬಾದ್‌ 6 ಪಂದ್ಯಗಳನ್ನು ಸೋತು, ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವಿನ ಸಿಹಿ ಕಂಡಿದೆ. 

ಟೂರ್ನಿಯ ಮಧ್ಯದಲ್ಲೇ ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಕೇನ್‌ ವಿಲಿಯಮ್ಸನ್‌ಗೆ ನಾಯಕತ್ವ ಪಟ್ಟ ಕಟ್ಟಿದರೂ ಆರೆಂಜ್ ಆರ್ಮಿಯ ಅದೃಷ್ಟ ಮಾತ್ರ ಬದಲಾಗಿರಲಿಲ್ಲ. ಹೀಗಿರುವಾಗಲೇ ಬಯೋ ಬಬಲ್‌ನೊಳಗಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ವೃದ್ದಿಮಾನ್ ಸಾಹಗೆ ಕೋವಿಡ್ ದೃಢಪಟ್ಟ ಬೆನ್ನಲ್ಲೇ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಒಟ್ಟಿನಲ್ಲಿ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಆರ್ಮಿ ನೀರಸ ಪ್ರದರ್ಶನ ತೋರಿದ್ದರೂ ಸಹಾ ದೇಶ ಕೋವಿಡ್ ಸಂಕಷ್ಟದಲ್ಲಿರುವಾಗ ನೆರವಿನ ಮಹಾಪೂರವನ್ನೇ ಹರಿಸಿದೆ. ಈ ಮೂಲಕ ಹೈದರಾಬಾದ್‌ ಫ್ರಾಂಚೈಸಿ ಅಭಿಮಾನಿಗಳ ಹಾಗೂ ದೇಶದ ಹೃದಯ ಗೆದ್ದಿದೆ ಎಂದರೆ ಅದು ಅತಿಶಯೋಕ್ತಿಯಾಗಲಾರದು.