ಕೋವಿಡ್ ಕಾರಣದಿಂದ ಅರ್ಧದಲ್ಲೇ ಮುಂದೂಡಲ್ಪಟ್ಟಿರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಆತಿಥ್ಯ ವಹಿಸಲು ಆಸಕ್ತಿ ತೋರಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಕೊಲಂಬೊ(ಮೇ.07): ಕೋವಿಡ್ ಎರಡನೇ ಅಲೆಗೆ ತಬ್ಬಿಬ್ಬಾದ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಇದೀಗ ಶ್ರೀಲಂಕಾ ಕ್ರಿಕೆಟ್ ಮಂಡಳಿಯು 2021ನೇ ಸಾಲಿನ ಇನ್ನುಳಿದ ಐಪಿಎಲ್‌ ಪಂದ್ಯಗಳಿಗೆ ಆತಿಥ್ಯವಹಿಸುವ ಆಸಕ್ತಿಯನ್ನು ತೋರಿದೆ.

ಬಯೋ ಬಬಲ್‌ನೊಳಗಿದ್ದ ಕೆಕೆಆರ್ ಆಟಗಾರರಾದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್‌ಗೆ ಮೊದಲು ಕೋವಿಡ್‌ ದೃಢಪಟ್ಟಿತ್ತು. ಇದಾದ ಮರುದಿನವೇ ಅಮಿತ್ ಮಿಶ್ರಾ ಹಾಗೂ ವೃದ್ದಿಮಾನ್ ಸಾಹಗೆ ಕೋವಿಡ್ ತಗುಲಿದ್ದು ದೃಢಪಟ್ಟ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಬಿಸಿಸಿಐ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಸದ್ಯ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ 29 ಪಂದ್ಯಗಳು ಮಾತ್ರ ಜರುಗಿವೆ. ಇನ್ನು 31 ಪಂದ್ಯಗಳು ನಡೆಯಬೇಕಿದೆ.

ಇದರ ನಡುವೆ ಯಾವಾಗ ಇನ್ನುಳಿದ ಪಂದ್ಯಗಳನ್ನು ಆಯೋಜಿಸಬೇಕು ಎನ್ನುವ ಗೊಂದಲ ಬಿಸಿಸಿಐಗೆ ಕಾಡತೊಡಗಿದೆ. ಒಂದು ವೇಳೆ ಐಪಿಎಲ್ ಟೂರ್ನಿ ರದ್ದಾದರೆ ಬಿಸಿಸಿಐಗೆ ಸುಮಾರು 2,500 ಕೋಟಿ ನಷ್ಟವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಹೀಗಾಗಿ ಶತಾಯಗತಾಯ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ನಡೆಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ.

ಇಂಗ್ಲೆಂಡ್‌/ಆಸ್ಪ್ರೇಲಿಯಾದಲ್ಲಿ ಐಪಿಎಲ್‌ 14ರ ಭಾಗ-2?

ಸೆಪ್ಟೆಂಬರ್‌ ತಿಂಗಳಿನಲ್ಲಿ ನಾವು ಐಪಿಎಲ್‌ಗೆ ಆತಿಥ್ಯವಹಿಸಲು ಸಿದ್ದರಿದ್ದೇವೆ. ನಮಗೆ ಬಂದ ಮಾಹಿತಿ ಪ್ರಕಾರ ಅವರು ಯುಎಇಯನ್ನು ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡಿದ್ದಾರೆ. ಹಾಗಂತ ಶ್ರೀಲಂಕಾವನ್ನು ಆಯ್ಕೆ ಮಾಡದೇ ಇರುವುದಕ್ಕೆ ಯಾವುದೇ ಕಾರಣಗಳಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವ್ಯವಸ್ಥಾಪಕ ಸಮಿತಿಯ ಮುಖ್ಯಸ್ಥ ಅರ್ಜುನ್ ಡಿ ಸಿಲ್ವಾ ಹೇಳಿದ್ದಾರೆ.

ನಾವು ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಲಂಕಾ ಪ್ರೀಮಿಯರ್ ಲೀಗ್ ಆಯೋಜಿಸಲು ಎಲ್ಲಾ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಹೀಗಾಗಿ ಸೆಪ್ಟೆಂಬರ್ ವೇಳೆಗೆ ಮೈದಾನ ಹಾಗೂ ಮೂಲ ಸೌಕರ್ಯಗಳು ಐಪಿಎಲ್‌ ಆಯೋಜಿಸಲು ಸಿದ್ದವಿರಲಿದೆ ಎಂದು ಅರ್ಜುನ್ ಡಿ ಸಿಲ್ವಾ ಹೇಳಿದ್ದಾರೆ.

ಈಗಾಗಲೇ ಇಂಗ್ಲೆಂಡ್‌ನ ಮಿಡ್ಲ್‌ಸೆಕ್ಸ್‌, ಸರ್ರೆ, ವಾರ್ವಿಕ್‌ಶೈರ್‌ ಹಾಗೂ ಲಂಕಾಶೈರ್‌ ಕೌಂಟಿಗಳು ಐಪಿಎಲ್‌ ಆಯೋಜಿಸಲು ಆಸಕ್ತಿ ತೋರಿವೆ.