ಮುಂಬೈ(ಏ.22): ಐಪಿಎಲ್‌ನಲ್ಲಿ ಮೊದಲ ಬಾರಿಗೆ ಮೊದಲ 3 ಪಂದ್ಯ ಗೆದ್ದು ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಆರ್‌ಸಿಬಿ, ಗುರುವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೆಣಸಲಿದ್ದು, ಮತ್ತೊಂದು ಜಯದ ವಿಶ್ವಾಸದಲ್ಲಿದೆ. 

ಚೆನ್ನೈ ಚರಣದಲ್ಲಿ ಅಸಾಧಾರಣ ಯಶಸ್ಸು ಕಂಡ ಕೊಹ್ಲಿ ಪಡೆ, ಮುಂದಿನ 2 ಪಂದ್ಯಗಳನ್ನು ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಆಡಲಿದ್ದು, ಇಲ್ಲಿಯೂ ಗೆಲುವಿನ ಓಟ ಮುಂದುವರಿಸಲು ಕಾತರಿಸುತ್ತಿದೆ. ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್‌ ಹಾಗೂ ಕೋಲ್ಕತ ನೈಟ್‌ ರೈಡರ್ಸ್‌ ವಿರುದ್ದ ಸಂಘಟಿತ ಪ್ರದರ್ಶನ ತೋರಿರುವ ಆರ್‌ಸಿಬಿ ಮತ್ತೊಮ್ಮೆ ಅಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.

ಮತ್ತೊಂದೆಡೆ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ಸ್ಥಿರ ಪ್ರದರ್ಶನ ತೋರಲು ಪರದಾಡುತ್ತಿದೆ. ಮೊದಲ ಪಂದ್ಯದಲ್ಲಿ ಪಂಬಾಜ್ ವಿರುದ್ದ ರೋಚಕ ಸೋಲು ಕಂಡಿದ್ದ ರಾಯಲ್ಸ್‌ ಅದಾದ ಬಳಿಕ ಡೆಲ್ಲಿ ವಿರುದ್ದ 3 ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಆದರೆ 3ನೇ ಪಂದ್ಯದಲ್ಲಿ ಚೆನ್ನೈ ವಿರುದ್ದ 45 ರನ್‌ಗಳ ಅಂತರದ ಸೋಲು ಕಂಡಿರುವ ರಾಜಸ್ಥಾನಕ್ಕೆ ಇದೀಗ ಮತ್ತೊಂದು ಕಠಿಣ ಸವಾಲು ಎದುರಾಗಲಿದೆ  

ಪ್ಯಾಟ್ ಕಮಿನ್ಸ್ ಹೋರಾಟ ವ್ಯರ್ಥ; ಚೆನ್ನೈ ಸೂಪರ್‌ಕಿಂಗ್ಸ್‌ಗೆ ಹ್ಯಾಟ್ರಿಕ್ ಗೆಲುವು!

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಕೊಹ್ಲಿ(ನಾಯಕ), ಪಡಿಕ್ಕಲ್‌, ಆ್ಯಲೆನ್‌, ಮ್ಯಾಕ್ಸ್‌ವೆಲ್‌, ಡಿವಿಲಿಯ​ರ್ಸ್‌, ಜೇಮಿಸನ್‌, ವಾಷಿಂಗ್ಟನ್‌, ಶಾಬಾಜ್‌, ಹರ್ಷಲ್‌, ಸಿರಾಜ್‌, ಚಹಲ್‌.

ರಾಜಸ್ಥಾನ: ಬಟ್ಲರ್‌, ವೋಹ್ರಾ, ಸ್ಯಾಮ್ಸನ್‌, ದುಬೆ, ಮಿಲ್ಲರ್‌, ಪರಾಗ್‌, ತೆವಾಟಿಯಾ, ಮೋರಿಸ್‌, ಉನಾದ್ಕತ್‌, ಸಕಾರಿಯಾ, ಮುಸ್ತಾಫಿಜುರ್‌.

ಪಿಚ್‌ ರಿಪೋರ್ಟ್‌: ಈ ಆವೃತ್ತಿಯಲ್ಲಿ ವಾಂಖೇಡೆಯಲ್ಲಿ ನಡೆದ ಮೊದಲ 6 ಪಂದ್ಯಗಳಲ್ಲಿ 4ರಲ್ಲಿ ಚೇಸ್‌ ಮಾಡಿದ ತಂಡ ಗೆದ್ದಿದೆ. 180-190 ರನ್‌ ಸಹ ಇಲ್ಲಿ ಸುರಕ್ಷಿತವಲ್ಲ. ಹೀಗಾಗಿ, ಮೊದಲು ಬ್ಯಾಟ್‌ ಮಾಡುವ ತಂಡ 200ಕ್ಕಿಂತ ಹೆಚ್ಚು ರನ್‌ ಗಳಿಸುವ ಒತ್ತಡದಲ್ಲಿರಲಿದೆ.

ಸ್ಥಳ: ಮುಂಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್