ಮುಂಬೈ(ಏ.20): ರಾಜಸ್ಥಾನ ರಾಯಲ್ಸ್‌ ಯುವ ವೇಗಿ ಚೇತನ್‌ ಸಕಾರಿಯಾ ದಿಗ್ಗಜ ಕ್ರಿಕೆಟಿಗ ಎಂ.ಎಸ್. ಧೋನಿಯನ್ನು ಭೇಟಿಯಾಗುವ ತಮ್ಮ ಜೀವಮಾನದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಧೋನಿಯನ್ನು ಭೇಟಿಯಾದ ಕ್ಷಣ ಚಿರಕಾಲ ನೆನಪಿನಲ್ಲಿ ಉಳಿಯಲಿದೆ ಎಂದು ಸಕಾರಿಯಾ ಹೇಳಿದ್ದಾರೆ.

ಯುವ ವೇಗಿ ಸಕಾರಿಯಾ ಧೋನಿ ಜತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಧೋನಿ ಕುರಿತಂತೆ ಹೃದಯ ಸ್ಪರ್ಶಿ ಸಾಲುಗಳನ್ನು ಬರೆದಿದ್ದಾರೆ. ನಾನು ಚಿಕ್ಕವನಿದ್ದಾಗಿನಿಂದ ಇಲ್ಲಿಯವರೆಗೂ ನಿಮ್ಮನ್ನು ಭೇಟಿಯಾಗಬೇಕು ಎಂದು ಬಯಸಿದ್ದೆ. ಆದರೆ ಇಂದು ಅದ್ಭುತ ಘಳಿಗೆ ಕೂಡಿ ಬಂದಿದೆ. ಇದು ನನ್ನ ಜೀವನದ ಅತ್ಯಂತ ಅವಿಸ್ಮರಣೀಯ ಕ್ಷಣವಾಗಿದ್ದು, ಸದಾಕಾಲ ಈ ಕ್ಷಣವನ್ನು ನೆನಪಿನಲ್ಲಿಟ್ಟುಕೊಳ್ಳತ್ತೇನೆ. ನಿಮ್ಮಂತೆ ಯಾರೂ ಇಲ್ಲ. ನಮ್ಮಂತಹ ಯುವ ಕ್ರಿಕೆಟಿಗರಿಗೆ ಸ್ಪೂರ್ತಿಯ ಚಿಲುಮೆಯಾರುವ ನಿಮಗೆ ಅನಂತ ಧನ್ಯವಾದಗಳು ಎಂದು ಸಕಾರಿಯಾ ಬರೆದುಕೊಂಡಿದ್ದಾರೆ.

22 ವರ್ಷದ ಯುವ ವೇಗಿ ಚೇತನ್‌ ಸಕಾರಿಯಾ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದದ ಪಂದ್ಯದಲ್ಲಿ ಮೊನಚಾದ ದಾಳಿ ನಡೆಸುವ ಮೂಲಕ ಗಮನ ಸೆಳೆದರು. ಸಕಾರಿಯಾ 4 ಓವರ್‌ ಬೌಲಿಂಗ್‌ ಮಾಡಿ 36 ರನ್‌ ನೀಡಿ ಪ್ರಮುಖ 3 ವಿಕೆಟ್‌ ಕಬಳಿಸಿ ರಾಯಲ್ಸ್‌ ಪಾಲಿಗೆ ಆಸರೆಯಾದರು. ಸುರೇಶ್ ರೈನಾ, ಅಂಬಟಿ ರಾಯುಡು ಹಾಗೂ ಎಂ ಎಸ್ ಧೋನಿ ವಿಕೆಟ್‌ ಕಬಳಿಸುವಲ್ಲಿ ಸಕಾರಿಯಾ ಯಶಸ್ವಿಯಾಗಿದ್ದರು. 

IPL 2021 ಧೋನಿ ವಿಕೆಟ್‌ ಕಬಳಿಸಿ ಕನಸು ನನಸಾಗಿಸಿಕೊಂಡ ಯುವ ವೇಗಿ..!

ಸಕಾರಿಯಾ ಅದ್ಭುತ ಪ್ರದರ್ಶನದ ಹೊರತಾಗಿಯೂ ರಾಜಸ್ಥಾನ ರಾಯಲ್ಸ್‌ ತಂಡವು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ 45 ರನ್‌ಗಳ ಆಘಾತಕಾರಿ ಸೋಲು ಕಂಡಿದೆ. ಇದೀಗ ರಾಜಸ್ಥಾನ ರಾಯಲ್ಸ್‌ ತಂಡವು ಏಪ್ರಿಲ್‌ 22ರಂದು ಮುಂಬೈನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಎದುರಿಸಲಿದೆ.