ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಧೋನಿಯ ವಿಕೆಟ್‌ ಕಬಳಿಸಿ ಕನಸು ನನಸು ಮಾಡಿಕೊಂಡ ಡೆಲ್ಲಿ ವೇಗಿ ಆವೇಶ್ ಖಾನ್‌ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮುಂಬೈ(ಏ.12): ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ವಿಕೆಟ್‌ ಕಬಳಿಸಿದ್ದರ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಯುವ ವೇಗಿ ಆವೇಶ್‌ ಖಾನ್‌ ಸಂತಸ ವ್ಯಕ್ತಪಡಿಸಿದ್ದಾರೆ. ಮಹಿ ವಿಕೆಟ್‌ ಡ್ರೀಮ್‌ ವಿಕೆಟ್‌ ಎಂದು ಆವೇಶ್‌ ಖಾನ್ ಬಣ್ಣಿಸಿದ್ದಾರೆ.

ಏಪ್ರಿಲ್‌ 10ರಂದು ನಡೆದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಎರಡನೇ ಪಂದ್ಯದಲ್ಲಿ ಉಮೇಶ್ ಯಾದವ್‌, ಇಶಾಂತ್ ಶರ್ಮಾ ಅವರನ್ನು ಹಿಂದಿಕ್ಕಿ ಆವೇಶ್‌ ಖಾನ್‌ ಡೆಲ್ಲಿ ಕ್ಯಾಪಿಟಲ್ಸ್‌ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದರು. ಬಳಿಕ ಆರಂಭದಲ್ಲೇ ಫಾಫ್‌ ಡುಪ್ಲೆಸಿಸ್‌ ಹಾಗೂ ಕೊನೆಯಲ್ಲಿ ಮಹೇಂದ್ರ ಸಿಂಗ್ ಧೋನಿ ವಿಕೆಟ್‌ ಕಬಳಿಸುವ ಮೂಲಕ ಸಿಎಸ್‌ಕೆ ರನ್‌ ಗಳಿಕೆಯ ವೇಗಕ್ಕೆ ತಡೆಹಾಕುವಲ್ಲಿ ಯಶಸ್ವಿಯಾಗಿದ್ದರು.

3 ವರ್ಷಗಳ ಹಿಂದೆ ಅಂದರೆ 2018ರಲ್ಲಿ ನನ್ನ ಬೌಲಿಂಗ್‌ನಲ್ಲಿ ಧೋನಿಯವರ ಕ್ಯಾಚನ್ನು ಕಾಲಿನ್‌ ಮನ್ರೋ ಕೈಚೆಲ್ಲಿದ್ದರು. ಮಹಿ ಅಣ್ಣನ ವಿಕೆಟ್‌ ಪಡೆಯುವುದು ನನ್ನ ಕನಸಾಗಿತ್ತು. ಅಂತೂ 3 ವರ್ಷಗಳ ಬಳಿಕ ಧೋನಿ ವಿಕೆಟ್‌ ಕಬಳಿಸಿ ನನ್ನ ಕನಸು ನನಸಾಗಿಸಿಕೊಂಡೆ. ಧೋನಿಯವರ ವಿಕೆಟ್ ಕಬಳಿಸಿದ್ದು ನನಗೆ ಖುಷಿ ಕೊಟ್ಟಿದೆ ಎಂದು ಡೆಲ್ಲಿ ಫ್ರಾಂಚೈಸಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ. ಮುಂದುವರೆದು, ಧೋನಿ ಸಾಕಷ್ಟು ಸಮಯದಿಂದ ಕ್ರಿಕೆಟ್‌ ಆಡಿಲ್ಲ. ಹೀಗಾಗಿ ಧೋನಿ ಮೇಲೆ ಒತ್ತಡ ಹೇರಬೇಕು ಎನ್ನುವ ಪ್ಲಾನ್ ನಮ್ಮದಾಗಿತ್ತು. ಅದರಂತೆಯೇ ಧೋನಿ ರನ್‌ ಗಳಿಸುವ ಒತ್ತಡದಲ್ಲಿ ವಿಕೆಟ್ ಕೈಚೆಲ್ಲಿದರು ಎಂದು ಆವೇಶ್ ಖಾನ್‌ ಹೇಳಿದ್ದಾರೆ.

Scroll to load tweet…

ಡೆಲ್ಲಿ ವಿರುದ್ಧದ ಸೋಲಿನ ಬೆನ್ನಲ್ಲೇ ಧೋನಿಗೆ 12 ಲಕ್ಷ ರೂ ದಂಡ ಹಾಕಿದ ಬಿಸಿಸಿಐ!

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 7 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದು, ಏಪ್ರಿಲ್ 15ರಂದು ಮುಂಬೈನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.