ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌ ಹೊಸ ನಾಯಕನೊಂದಿಗೆ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದು ತಂಡದ ಬಲ ಹಾಗೂ ದೌರ್ಬಲ್ಯದ ವಿಶ್ಲೇಷಣೆ ನೋಡಿ.

ಬೆಂಗಳೂರು(ಏ.04): ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌ ಪ್ರತಿ ವರ್ಷವೂ ಬಲಿಷ್ಠ ಆಟಗಾರರನ್ನು ಒಟ್ಟುಗೂಡಿಸಿ ಕಣಕ್ಕಿಳಿದರೂ ಅದೃಷ್ಟ ಮಾತ್ರ ಕೈ ಹಿಡಿಯುತ್ತಿಲ್ಲ. ದೊಡ್ಡ ಮೊತ್ತ ಖರ್ಚು ಮಾಡಿ ಖರೀದಿಸಿದ ಆಟಗಾರರು ಪೂರ್ಣ ಪ್ರಮಾಣದಲ್ಲಿ ಪ್ರದರ್ಶನ ತೋರಿಲ್ಲ. ಇವೆಲ್ಲದರ ಹೊರತಾಗಿಯೂ ಸಂಜು ಸ್ಯಾಮ್ಸನ್‌ಗೆ ರಾಜಸ್ಥಾನ ರಾಯಲ್ಸ್‌ ಪಟ್ಟ ಕಟ್ಟಲಾಗಿದೆ. ರಾಜಸ್ಥಾನ ರಾಯಲ್ಸ್‌ನ ಬಲ ಹಾಗೂ ದೌರ್ಬಲ್ಯದ ವಿಶ್ಲೇಷಣೆ ಇಲ್ಲಿದೆ ನೋಡಿ.

ಮೋರಿಸ್‌, ಸ್ಟೋಕ್ಸ್‌ ಬದಲಿಸ್ತಾರಾ ಲಕ್‌?

ಬರೋಬ್ಬರಿ 16.25 ಕೋಟಿ ರು. ಖರ್ಚು ಮಾಡಿ ಆಲ್ರೌಂಡರ್‌ ಕ್ರಿಸ್‌ ಮೋರಿಸ್‌ರನ್ನು ರಾಜಸ್ಥಾನ ಖರೀದಿಸಿದೆ. ಈ ಹಿಂದೆ ದುಬಾರಿ ಮೊತ್ತಕ್ಕೆ ಖರೀದಿಸಿದ್ದ ಬೆನ್‌ ಸ್ಟೋಕ್ಸ್‌ ಆಗೊಮ್ಮೆ ಈಗೊಮ್ಮೆ ಅಬ್ಬರಿಸಿದ್ದನ್ನು ಬಿಟ್ಟರೆ ಸ್ಥಿರ ಪ್ರದರ್ಶನ ತೋರಿಲ್ಲ. ಈ ಇಬ್ಬರು ದುಬಾರಿ ಆಲ್ರೌಂಡರ್‌ಗಳ ಮೇಲೆ ಕ್ರಿಕೆಟ್‌ ಅಭಿಮಾನಿಗಳು ಈ ಬಾರಿ ಕಣ್ಣಿಟ್ಟಿದ್ದಾರೆ.

IPL 2021: ಕಿಂಗ್‌ ಆಗುತ್ತಾ ಪಂಜಾಬ್‌..?

ಪ್ರಾಬಲ್ಯ: ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ರಾಜಸ್ಥಾನ ರಾಯಲ್ಸ್‌ ಈ ವರ್ಷ ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿದೆ. ಸಂಜು ಸ್ಯಾಮ್ಸನ್‌ ತಂಡವನ್ನು ಮುನ್ನಡೆಸಲಿದ್ದು, ಜೋಸ್‌ ಬಟ್ಲರ್‌, ಸ್ಟೋಕ್ಸ್‌, ಮೋರಿಸ್‌, ತೆವಾಟಿಯಾರಂತಹ ಘಟಾನುಘಟಿ ಆಟಗಾರರನ್ನು ತಂಡ ಹೊಂದಿದೆ. ಬ್ಯಾಟಿಂಗ್‌ ವಿಭಾಗದಲ್ಲಿ ರಾಯಲ್ಸ್‌ ಅತ್ಯಂತ ಬಲಿಷ್ಠವಾಗಿ ತೋರುತ್ತಿದೆ. ತಂಡದಿಂದ ದೊಡ್ಡ ಮೊತ್ತಗಳನ್ನು ನಿರೀಕ್ಷಿಸಬಹುದು.

ದೌರ್ಬಲ್ಯ: ವೇಗಿ ಜೋಫ್ರಾ ಆರ್ಚರ್‌ ಈ ಆವೃತ್ತಿಯಲ್ಲಿ ಆಡುವುದು ಅನುಮಾನ. ಇದು ತಂಡಕ್ಕೆ ಹಿನ್ನಡೆ ಉಂಟು ಮಾಡಲಿದೆ. ಜೊತೆಗೆ ಸ್ಯಾಮ್ಸನ್‌ಗೆ ನಾಯಕತ್ವದ ಅನುಭವ ಕಡಿಮೆ. ಅಲ್ಲದೇ ಬಹಳ ಆತುರದ ಆಟಗಾರ. ಹೀಗಾಗಿ ಸ್ಟೋಕ್ಸ್‌ ಹಾಗೂ ಮೋರಿಸ್‌ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಟಾಪ್‌ ಕ್ಲಾಸ್‌ ಆಟ ಆಡಬೇಕಿದೆ. ಮೋರಿಸ್‌ ಪದೇ ಪದೇ ಗಾಯಗೊಳ್ಳುವ ಆಟಗಾರ. ಇದು ಸಹ ರಾಯಲ್ಸ್‌ ಬಲ ಕುಗ್ಗಿಸಬಹುದು.

ಬಲಿಷ್ಠ ಪ್ಲೇಯಿಂಗ್‌ ಇಲೆವೆನ್‌

ಜೋಸ್‌ ಬಟ್ಲರ್‌, ಬೆನ್‌ ಸ್ಟೋಕ್ಸ್‌, ಮನನ್‌ ವೋಹ್ರಾ, ಸಂಜು ಸ್ಯಾಮ್ಸನ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ಶಿವಂ ದುಬೆ, ಕ್ರಿಸ್‌ ಮೋರಿಸ್‌, ರಾಹುಲ್‌ ತೆವಾಟಿಯಾ, ಶ್ರೇಯಸ್‌ ಗೋಪಾಲ್‌, ರಿಯಾನ್‌ ಪರಾಗ್‌, ಜಯದೇವ್‌ ಉನಾದ್ಕತ್‌.