14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಐಪಿಎಲ್‌ ಟ್ರೋಫಿಯ ಕನವರಿಕೆಯಲ್ಲಿರುವ ಪಂಜಾಬ್‌ ಕಿಂಗ್ಸ್‌ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಪಂಜಾಬ್‌(ಏ.05): ಕಿಂಗ್ಸ್‌ ಇಲೆವೆನ್‌ ಪಂಜಾಬ್‌ನಿಂದ ಪಂಜಾಬ್‌ ಕಿಂಗ್ಸ್‌ ಎಂದು ಹೆಸರು ಬದಲಾಯಿಸಿಕೊಂಡಿರುವ ಪ್ರೀತಿ ಜಿಂಟಾ ಮಾಲಿಕತ್ವದ ತಂಡ, ಹೆಸರು ಬದಲಾದಂತೆ ಅದೃಷ್ಟ ಸಹ ಬದಲಾಗುವ ಕನಸು ಕಾಣುತ್ತಿದೆ. 

ಸಾಕಷ್ಟು ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದರೂ ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲೇ ನೀರಸ ಪ್ರದರ್ಶನ ತೋರುವ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದ್ದು ಪಂಜಾಬ್‌ ತಂಡ ಇದೀಗ ತನ್ನ ಹಳೆಯ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ

ಟಿ20 ತಜ್ಞ ಬ್ಯಾಟ್ಸ್‌ಮನ್‌ಗಳ ದಂಡು:

ಪಂಜಾಬ್‌ ತಂಡದ ಬ್ಯಾಟಿಂಗ್‌ ಪಡೆಯನ್ನು ನೋಡಿದರೆ ಯಾವುದೇ ಎದುರಾಳಿಗಾದರೂ ನಡುಕ ಹುಟ್ಟಲಿದೆ. ಟಿ20 ಕ್ರಿಕೆಟ್‌ನ ತಜ್ಞ ಬ್ಯಾಟ್ಸ್‌ಮನ್‌ಗಳೆಲ್ಲಾ ಒಂದೇ ತಂಡದಲ್ಲಿದ್ದಾರೆ. ಈ ವರ್ಷ ಕೆಲ ಕುತೂಹಲಕಾರಿ ಖರೀದಿಗಳನ್ನೂ ತಂಡ ಮಾಡಿದೆ. ಕನ್ನಡಿಗರಾದ ನಾಯಕ ಕೆ.ಎಲ್‌.ರಾಹುಲ್‌, ಕೋಚ್‌ ಅನಿಲ್‌ ಕುಂಬ್ಳೆ, ಪಂಜಾಬ್‌ಗೆ ಕಪ್‌ ಗೆಲ್ಲಿಸಿಕೊಡ್ತಾರಾ? ಎನ್ನುವ ಕುತೂಹಲ ಅಭಿಮಾನಿಗಳದ್ದು.

IPL 2021 ಸನ್‌ರೈಸರ್ಸ್‌ಗೆ ಬ್ಯಾಟಿಂಗ್ ಕಾಂಬಿನೇಷನ್ ಚಿಂತೆ..!

ಪ್ರಾಬಲ್ಯ: ತಂಡದ ಬ್ಯಾಟಿಂಗ್‌ ಅತ್ಯಂತ ಬಲಿಷ್ಠವಾಗಿದೆ. ರಾಹುಲ್‌, ಕ್ರಿಸ್‌ ಗೇಲ್‌, ಮಯಾಂಕ್‌ ಅಗರ್‌ವಾಲ್‌, ನಿಕೋಲಸ್‌ ಪೂರನ್‌ ಜೊತೆ ಈ ಬಾರಿ ಐಸಿಸಿ ವಿಶ್ವ ನಂ.1 ಟಿ20 ಬ್ಯಾಟ್ಸ್‌ಮನ್‌ ಇಂಗ್ಲೆಂಡ್‌ನ ಡೇವಿಡ್‌ ಮಲಾನ್‌ ಸಹ ತಂಡ ಸೇರಿಕೊಂಡಿದ್ದಾರೆ. ತಮಿಳುನಾಡಿನ ಸ್ಫೋಟಕ ಬ್ಯಾಟ್ಸ್‌ಮನ್‌ ಶಾರುಖ್‌ ಖಾನ್‌ ಎಲ್ಲರ ಕುತೂಹಲ ಕೆರಳಿಸಿದ್ದಾರೆ.

ದೌರ್ಬಲ್ಯ: ಪಂಜಾಬ್‌ನ ಬೌಲಿಂಗ್‌ ತುಸು ದುರ್ಬಲವಾಗಿ ತೋರುತ್ತಿದೆ. ಮೊಹಮದ್‌ ಶಮಿ ಗಾಯದಿಂದ ಚೇತರಿಸಿಕೊಂಡಿದ್ದು, ತಂಡದ ಬೌಲಿಂಗ್‌ ಪಡೆ ಮುನ್ನಡೆಸಲಿದ್ದಾರೆ. ಜೊರ್ಡನ್‌, ಆಸ್ಪ್ರೇಲಿಯಾದ ಜಾಯಿ ರಿಚರ್ಡ್‌ಸನ್‌ ಮೇಲೆ ನಿರೀಕ್ಷೆ ಇದೆ. ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌ ಪ್ರಮುಖ ಪಾತ್ರ ವಹಿಸಬೇಕಿದೆ. ತಂಡಕ್ಕೆ 5ನೇ ಬೌಲರ್‌ ಕೊರತೆ ಎದುರಾಗಲಿದೆ.

ಬಲಿಷ್ಠ ಪ್ಲೇಯಿಂಗ್‌ ಇಲೆವೆನ್‌

ರಾಹುಲ್‌, ಮಯಾಂಕ್‌, ಗೇಲ್‌, ಮಲಾನ್‌, ಪೂರನ್‌, ಶಾರುಖ್‌, ಹೂಡಾ, ಎಂ.ಅಶ್ವಿನ್‌, ರಿಚರ್ಡ್‌ಸನ್‌/ಜೊರ್ಡನ್‌, ಶಮಿ, ಬಿಷ್ಣೋಯ್‌.