ಮುಂಬೈ(ಏ.21): ಫಿಟ್ನೆಸ್ ಸಮಸ್ಯೆಯಿಂದಾಗಿ ರಾಜಸ್ಥಾನ ರಾಯಲ್ಸ್‌ ತಂಡದ ಸ್ಟಾರ್ ಆಲ್ರೌಂಡರ್‌ ಬೆನ್ ಸ್ಟೋಕ್ಸ್‌ 14ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಈ ಶಾಕ್‌ನಿಂದ ಹೊರಬರುವ ಮುನ್ನವೇ ಸಂಜು ಸ್ಯಾಮ್ಸನ್‌ ಪಡೆಗೆ ಮತ್ತೊಂದು ಶಾಕ್ ಎದುರಾಗಿದೆ. 

ಹೌದು, ಕಳೆದೊಂದು ವರ್ಷದಿಂದಲೂ ಬಯೋಬಬಲ್‌ನಲ್ಲಿರುವ ಇಂಗ್ಲೆಂಡ್‌ ಕ್ರಿಕೆಟಿಗ ಲಿಯಾಮ್ ಲಿವಿಂಗ್‌ಸ್ಟೋನ್‌ ವಿಶ್ರಾಂತಿ ಬಯಸಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅರ್ಧದಲ್ಲೇ ತೊರೆದು ತವರಿಗೆ ಹಾರಿದ್ದಾರೆ. ಲಿಯಾಮ್ ಲಿವಿಂಗ್‌ಸ್ಟೋನ್‌ ಇತ್ತೀಚೆಗಷ್ಟೇ ಮುಕ್ತಾಯವಾದ ಭಾರತ ವಿರುದ್ದ ಸೀಮಿತ ಓವರ್‌ಗಳ ಸರಣಿಯಲ್ಲಿ ಉತ್ತಮ ಆಲ್ರೌಂಡ್‌ ಪ್ರದರ್ಶನ ತೋರಿದ್ದರು. 

ಭಾರತ ವಿರುದ್ದದ ಸರಣಿ ಮುಗಿಯುತ್ತಿದ್ದಂತೆಯೇ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ರಾಜಸ್ಥಾನ ರಾಯಲ್ಸ್‌ ಬಯೋಬಬಲ್ ಪ್ರವೇಶಿಸಿದ್ದರು. ಮೊದಲು 3 ಪಂದ್ಯಗಳಲ್ಲಿ ಲಿವಿಂಗ್‌ಸ್ಟೋನ್‌ ರಾಯಲ್ಸ್‌ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ರಾಯಲ್ಸ್‌ ಟ್ವೀಟ್‌ ಮೂಲಕ ಲಿವಿಂಗ್‌ಸ್ಟೋನ್‌ ರಾಯಲ್ಸ್ ಪಡೆಯನ್ನು ತೊರೆದಿರುವುದಾಗಿ ಖಚಿತಪಡಿಸಿದೆ

ಕಳೆದೊಂದು ವರ್ಷದಿಂದ ಬಯೋಬಬಲ್‌ನಲ್ಲಿದ್ದ ಲಿಯಾಮ್ ಲಿವಿಂಗ್‌ಸ್ಟೋನ್‌ ವಿಶ್ರಾಂತಿ ಬಯಸಿ ಕಳೆದ ತಡರಾತ್ರಿ ತವರಿಗೆ ಮರಳಿದ್ದಾರೆ. ನಾವು ಲಿವಿಂಗ್‌ಸ್ಟೋನ್ ಅವರ ನಿರ್ಧಾರವನ್ನು ಗೌರವಿಸುತ್ತೇವೆ. ಮುಂದೆಯೂ ಅವರನ್ನು ಇದೇ ರೀತಿ ಬೆಂಬಲಿಸುತ್ತೇವೆ ಎಂದು ರಾಜಸ್ಥಾನ ರಾಯಲ್ಸ್‌ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಟ್ವೀಟ್‌ ಮಾಡಿದೆ.

IPL 2021 ಗಾಯದ ಮೇಲೆ ಬರೆ; ರಾಜಸ್ಥಾನ ರಾಯಲ್ಸ್‌ನಿಂದ ಬೆನ್ ಸ್ಟೋಕ್ಸ್‌ ಔಟ್‌

14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಆಟಗಾರರ ಹರಾಜಿನಲ್ಲಿ 75 ಲಕ್ಷ ರುಪಾಯಿ ನೀಡಿ ರಾಜಸ್ಥಾನ ರಾಯಲ್ಸ್ ತಂಡವು ಲಿಯಾಮ್ ಲಿವಿಂಗ್‌ಸ್ಟೋನ್‌ರನ್ನು ಖರೀದಿಸಿತ್ತು.