IPL 2021 ಗಾಯದ ಮೇಲೆ ಬರೆ; ರಾಜಸ್ಥಾನ ರಾಯಲ್ಸ್‌ನಿಂದ ಬೆನ್ ಸ್ಟೋಕ್ಸ್ ಔಟ್
ಮುಂಬೈ: ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡ ಹೊಸ ನಾಯಕ ಸಂಜು ಸ್ಯಾಮ್ಸನ್ ನೇತೃತ್ವದಲ್ಲಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿದಿದೆ. ರಾಜಸ್ಥಾನ ರಾಯಲ್ಸ್ ಮೊದಲ ಪಂದ್ಯದಲ್ಲೇ ಪಂಜಾಬ್ ಕಿಂಗ್ಸ್ ಎದುರು ವಿರೋಚಿತ ಸೋಲು ಕಂಡಿದೆ. ಈ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ರಾಯಲ್ಸ್ ಪಡೆಗೆ ಮತ್ತೊಂದು ಅತಿದೊಡ್ಡ ಶಾಕ್ ಎದುರಾಗಿದೆ.

ನಾಯಕ ಸಂಜು ಸ್ಯಾಮ್ಸನ್ ಕೆಚ್ಚೆದೆಯ ಶತಕದ ಹೊರತಾಗಿಯೂ ರಾಜಸ್ಥಾನ ರಾಯಲ್ಸ್ ತಾನಾಡಿದ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 4 ರನ್‌ಗಳ ವಿರೋಚಿತ ಸೋಲು ಕಂಡಿದೆ.

ಈ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ರಾಜಸ್ಥಾನ ರಾಯಲ್ಸ್‌ಗೆ ಮತ್ತೊಂದು ಆಘಾತ ಎದುರಾಗಿದ್ದು, ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಗಾಯದ ಸಮಸ್ಯೆಯಿಂದಾಗಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಬಾರಿಸಿದ ಚೆಂಡನ್ನು ಹಿಡಿಯುವ ಯತ್ನದಲ್ಲಿ ಬೆನ್ ಸ್ಟೋಕ್ಸ್ ಕೈಬೆರಳುಗಳನ್ನು ಮುರಿದುಕೊಂಡಿದ್ದಾರೆ.
ಏಪ್ರಿಲ್ 12, 2021ರಂದು ಮುಂಬೈನಲ್ಲಿ ನಡೆದ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ಮಾಡುವ ವೇಳೆ ರಾಜಸ್ಥಾನ ರಾಯಲ್ಸ್‌ನ ಸ್ಟಾರ್ ಅಲ್ರೌಂಡರ್ ಬೆನ್ ಸ್ಟೋಕ್ಸ್ ಎಡಗೈ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ.
ಬಳಿಕ ಹೆಚ್ಚಿನ ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಸ್ಟೋಕ್ಸ್ ಕೈಬೆರಳು ಮುರಿದಿರುವುದು ತಿಳಿದು ಬಂದಿದೆ. ಹೀಗಾಗಿ ದುರಾದೃಷ್ಟವಶಾತ್ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಬೆನ್ ಸ್ಟೋಕ್ಸ್ ಹೊರಬಿದ್ದಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬೆನ್ ಸ್ಟೋಕ್ಸ್ ಎಂತಹ ಅಮೂಲ್ಯ ಆಟಗಾರ ಎನ್ನುವುದು ರಾಯಲ್ಸ್ ತಂಡಕ್ಕೆ ಗೊತ್ತು. ಆದಷ್ಟು ಬೇಗ ಸ್ಟೋಕ್ಸ್ ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಸದ್ಯದಲ್ಲೇ ಸ್ಟೋಕ್ಸ್ ಬದಲಿ ಆಟಗಾರನನ್ನು ಆದಷ್ಟು ಬೇಗ ಹುಡುಕಿಕೊಳ್ಳಲಿದ್ದೇವೆ ಎಂದು ರಾಯಲ್ಸ್ ತಿಳಿಸಿದೆ.
ಈಗಾಗಲೇ ಗಾಯದ ಸಮಸ್ಯೆಯಿಂದಾಗಿ 14ನೇ ಆವೃತ್ತಿಯ ಆರಂಭಿಕ ಪಂದ್ಯಗಳಿಂದ ರಾಯಲ್ಸ್ ಸ್ಟಾರ್ ವೇಗಿ ಜೋಫ್ರಾ ಆರ್ಚರ್ ಹೊರಬಿದ್ದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿತ್ತು.
ಇದೀಗ ಸ್ಟೋಕ್ಸ್ ಹಾಗೂ ಆರ್ಚರ್ ಇಬ್ಬರೂ ರಾಜಸ್ಥಾನ ರಾಯಲ್ಸ್ ತಂಡದಿಂದ ಹೊರಬಿದ್ದಿರುವುದು ಸಂಜು ಸ್ಯಾಮ್ಸನ್ ಪಡೆಗೆ ನುಂಗಲಾರದ ತುತ್ತಾಗಿ ಪರಿಣಮಿಸುವ ಸಾಧ್ಯತೆಯಿದೆ.