ಮುಂಬೈ(ಏ.20): ವಿಶ್ವಕ್ರಿಕೆಟ್‌ನ ಸದೃಢ ಆಟಗಾರರಲ್ಲಿ ಮಹೇಂದ್ರ ಸಿಂಗ್ ಧೋನಿ ಕೂಡಾ ಒಬ್ಬರು. 39 ವರ್ಷ ಪ್ರಾಯದ ಸಿಎಸ್‌ಕೆ ನಾಯಕ ಧೋನಿ ಇಂದಿಗೂ ಯುವ ಕ್ರಿಕೆಟಿಗರಿಗೆ ಆದರ್ಶಪ್ರಾಯ ಎನ್ನುವಂತೆ ಫಿಟ್ನೆಸ್‌ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋಲು ಕಂಡರೂ ಅದಾದ ಬಳಿಕ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಎರಡು ಅರ್ಹ ಗೆಲುವು ದಾಖಲಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದೆ. ರಾಜಸ್ಥಾನ ರಾಯಲ್ಸ್‌ ವಿರುದ್ದದ ಪಂದ್ಯದಲ್ಲಿ ಎಂ ಎಸ್ ಧೋನಿ 17 ಎಸೆತಗಳಲ್ಲಿ 18 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಒಂದು ಹಂತದಲ್ಲಿ ರನೌಟ್‌ನಿಂದ ಬಚಾವಾಗಲು ಡೈವ್‌ ಕೂಡಾ ಮಾಡಿ ಸೈಎನಿಸಿಕೊಂಡರು.

ಪಂದ್ಯ ಮುಕ್ತಾಯದ ಬಳಿಕ ತಮ್ಮ ಫಿಟ್ನೆಸ್‌ ಬಗ್ಗೆ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ನೀವು ಕ್ರಿಕೆಟ್‌ ಆಡುವಾಗ, ಯಾರೊಬ್ಬರು ನಿಮ್ಮನ್ನು ಅಸಮರ್ಥ ಎನ್ನುವಂತಿರಬಾರದು. ಕೆಲವೊಮ್ಮೆ ನಮ್ಮ ಪ್ರದರ್ಶನದ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲದಿರಬಹುದು. ನಾನು 24 ವರ್ಷದವನಿದ್ದಾಗ ಆಡುತ್ತಿದ್ದಂತೆ 40 ವರ್ಷದವಾಗಿದ್ದಾಗ ಆಡುವ ಗ್ಯಾರಂಟಿ ನೀಡಲು ಸಾಧ್ಯವಿಲ್ಲ. ಆದರೆ ಈ ವಯಸ್ಸಿನಲ್ಲಿ ಯಾರೂ ನೀನು ಅಸಮರ್ಥ ಎಂದು ಬೆರಳು ಮಾಡದಿದ್ದರೆ ಅದೇ ನನಗೆ ಪಾಸಿಟಿವ್ ಅಂಶ. ನಾನು ಯುವಕರ ಜತೆ ಸ್ಪರ್ಧೆಗಿಳಿಯುತ್ತೇನೆ. ಅವರು ಯಾವಾಗಲೂ ಚುರುಕಾಗಿರುತ್ತಾರೆ. ಅವರಿಗೆ ಸ್ಪರ್ಧೆ ನೀಡುವುದು ಒಳ್ಳೆಯ ಲಕ್ಷಣ ಎಂದು ಧೋನಿ ಹೇಳಿದ್ದಾರೆ.

IPL 2021: 200ನೇ ಬಾರಿ CSK ತಂಡ ಮುನ್ನಡೆಸಿದ ಧೋನಿ!

ಸ್ಪಿನ್‌ ಜೋಡಿಯಾದ ಮೋಯಿನ್ ಅಲಿ ಹಾಗೂ ರವೀಂದ್ರ ಜಡೇಜಾ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ವಿರುದ್ದ ಚೆನ್ನೈ ಸೂಪರ್‌ ಕಿಂಗ್ಸ್‌ 45 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಸದ್ಯ 3 ಪಂದ್ಯಗಳನ್ನಾಡಿ 2  ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್‌ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.