Asianet Suvarna News Asianet Suvarna News

IPL 2021 ದುಬೈನಲ್ಲಿ ಅಭ್ಯಾಸ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್

* ಒಂದು ತಿಂಗಳು ಮುಂಚಿನವಾಗಿಯೇ ಅಭ್ಯಾಸ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್‌

* ಐಪಿಎಲ್ ಭಾಗ-2 ಸೆಪ್ಟೆಂಬರ್ 19ರಿಂದ ಆರಂಭ

* ನಾಲ್ಕನೇ ಐಪಿಎಲ್‌ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಧೋನಿ ಪಡೆ

IPL 2021 MS Dhoni Led CSK begin preparation for second leg at the in Dubai kvn
Author
Dubai - United Arab Emirates, First Published Aug 20, 2021, 2:55 PM IST
  • Facebook
  • Twitter
  • Whatsapp

ದುಬೈ(ಆ.20): 14ನೇ ಆವೃತ್ತಿಯ ಐಪಿಎಲ್ ಭಾಗ-2 ಆರಂಭಕ್ಕೆ ಒಂದು ತಿಂಗಳು ಬಾಕಿ ಇರುವಾಗಲೇ ಯುಎಇಗೆ ಬಂದಿಳಿದಿರುವ ಮೂರು ಬಾರಿಯ ಐಪಿಎಲ್ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಉಳಿದೆಲ್ಲಾ ಐಪಿಎಲ್‌ ತಂಡಗಳಿಗಿಂತ ಮೊದಲು ಒಟ್ಟಾಗಿ ಅಭ್ಯಾಸ ಆರಂಭಿಸಿದೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್‌ ಎದುರು ಸೆಪ್ಟೆಂಬರ್ 19ರಂದು ಮೊದಲ ಪಂದ್ಯವನ್ನು ಆಡಲಿದೆ. 

13ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಫ್ಲೇ ಆಫ್‌ಗೇರುವಲ್ಲಿ ವಿಫಲವಾಗಿತ್ತು. ಟೂರ್ನಿಯುದ್ದಕ್ಕೂ ನೀರಸ ಪ್ರದರ್ಶನ ತೋರಿದ್ದ ಸಿಎಸ್‌ಕೆ ತಂಡವು ಕೊನೆಯಲ್ಲಿ ಎಚ್ಚೆತ್ತುಕೊಂಡಿತ್ತು. ಅಷ್ಟರಲ್ಲಾಗಲೇ ಫ್ಲೇ ಆಫ್‌ಗೇರುವ ಸಿಎಸ್‌ಕೆ ಕನಸು ಭಗ್ನವಾಗಿತ್ತು. ಅಂತಿಮವಾಗಿ ಧೋನಿ ಪಡೆ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಈ ಬಾರಿ ಮೈ ಕೊಡವಿಕೊಂಡು ಎದ್ದು ನಿಂತಿರುವ ಚೆನ್ನೈ ಸೂಪರ್ ಕಿಂಗ್ಸ್‌ 7 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 2 ಸೋಲಿನೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ಐಪಿಎಲ್‌ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

ಎಲ್ಲರಿಗಿಂತ ಮೊದಲೇ ಐಪಿಎಲ್‌ ಭಾಗ-2ಕ್ಕೆ ಸಿದ್ದತೆ ನಡೆಸಿರುವ ಧೋನಿ ನೇತೃತ್ವದ ಸಿಎಸ್‌ಕೆ ತಂಡವು ದುಬೈನ ಹೋಟೆಲ್‌ನಲ್ಲಿ 6 ದಿನಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿ, ಇದೀಗ ಒಟ್ಟಾಗಿ ಧೋನಿ ಪಡೆ ಮೈದಾನಕ್ಕಿಳಿದಿದೆ. ಧೋನಿ ಬ್ಯಾಟ್‌ ಹಿಡಿದು ಮೈದಾನಕ್ಕಿಳಿದ ಫೋಟೋಗಳು ಹಾಗೂ ಇತರ ಆಟಗಾರರೊಂದಿಗೆ ಸಮಾಲೋಚಿಸುತ್ತಿರುವ ಫೋಟೋಗಳನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಐಪಿಎಲ್ 2021: ದುಬೈ ವಿಮಾನವೇರಿದ ಧೋನಿ ನೇತೃತ್ವದ ಸಿಎಸ್‌ಕೆ

ನಾಯಕ ಮಹೇಂದ್ರ ಸಿಂಗ್ ಧೋನಿ ಮಾತ್ರವಲ್ಲದೇ ಅನುಭವಿ ಕ್ರಿಕೆಟಿಗರಾದ ಸುರೇಶ್ ರೈನಾ, ಅಂಬಟಿ ರಾಯುಡು ಹಾಗೂ ರಾಬಿನ್ ಉತ್ತಪ್ಪ ಸಹಾ ನೆಟ್ಸ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಲಂಕಾ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಋತುರಾಜ್ ಗಾಯಕ್ವಾಡ್‌ ಸಾಕಷ್ಟು ಆತ್ಮವಿಶ್ವಾಸದಿಂದ ತುಂಬಿ ತುಳುಕುತ್ತಿದ್ದು, ನೆಟ್ಸ್‌ನಲ್ಲಿ ಫುಲ್‌ ಶಾಟ್‌ಗಳನ್ನು ಮಾಡಿ ಗಮನ ಸೆಳೆದಿದ್ದಾರೆ.

ಒಟ್ಟಿನಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಮೇಲ್ನೋಟಕ್ಕೆ ಸಾಕಷ್ಟು ಸಮತೋಲಿತವಾಗಿ ಕಂಡು ಬರುತ್ತಿದ್ದು, ನಾಲ್ಕನೇ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಲು ಕನಸು ಕಾಣುತ್ತಿದೆ. ಈ ಕನಸು ನನಸಾಗುತ್ತಾ ಎನ್ನುವುದಕ್ಕೆ ಕಾಲವೇ ಉತ್ತರ ಕೊಡಬೇಕಿದೆ.
 

Follow Us:
Download App:
  • android
  • ios