* ಐಪಿಎಲ್‌ ಭಾಗ-2ಗೆ ಸಜ್ಜಾದ ಚೆನ್ನೈ ಸೂಪರ್ ಕಿಂಗ್ಸ್ ತಂಡ* ದುಬೈಗೆ ಬಂದಿಳಿದ ಮಹೇಂದ್ರ ಸಿಂಗ್ ಧೋನಿ ಪಡೆ* ಸೆಪ್ಟೆಂಬರ್ 19ರಿಂದ ಐಪಿಎಲ್ ಭಾಗ-2 ಆರಂಭ

ಚೆನ್ನೈ(ಆ.13): ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಶುಕ್ರವಾರ(ಆ.13), 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಯುಎಇನತ್ತ ಮುಖ ಮಾಡಿದೆ. ಮುಂಬರುವ ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್‌ ಭಾಗ-2ನಲ್ಲಿ ಪಾಲ್ಗೊಳ್ಳಲು ಸಿಎಸ್‌ಕೆ ಫ್ರಾಂಚೈಸಿ ಬರೋಬ್ಬರಿ ಒಂದು ತಿಂಗಳು ಮುಂಚಿತವಾಗಿಯೇ ಸಿದ್ದತೆ ಆರಂಭಿಸಿದೆ.

ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್‌ ಮಧ್ಯಭಾಗದಲ್ಲಿ ಕೋವಿಡ್ ಶಾಕ್‌ ನೀಡಿತ್ತು. ಬಯೋ ಬಬಲ್‌ನೊಳಗಿದ್ದ ಕೆಲವು ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಬಿಸಿಸಿಐ ಮೇ.04ರಂದು ಈ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ಇದೀಗ ಸಿಎಸ್‌ಕೆ ಯುಎಇಗೆ ಬಂದಿಳಿದ ಮೊದಲ ಐಪಿಎಲ್‌ ತಂಡ ಎನಿಸಿಕೊಂಡಿದೆ.

IPL 2022 ಟೂರ್ನಿಗೆ ಬಹುತೇಕ ಆಟಗಾರರು ಅದಲು ಬದಲು; ರಿಟೈನ್‌ ಅವಕಾಶ ಮೂವರಿಗೆ ಮಾತ್ರ!

Scroll to load tweet…

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಸುರೇಶ್ ರೈನಾ ಸೇರಿದಂತೆ ಕೆಲವು ಆಟಗಾರರು ಏರ್‌ಪೋರ್ಟ್‌ನಲ್ಲಿರುವ ಚಿತ್ರಗಳನ್ನು ಸಿಎಸ್‌ಕೆ ಫ್ರಾಂಚೈಸಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಶೇರ್ ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ದೀಪಕ್ ಚಹಾರ್, ಋತುರಾಜ್ ಗಾಯಕ್ವಾಡ್ ಹಾಗೂ ಕರ್ಣ್ ಶರ್ಮಾ ಕೂಡಾ ದುಬೈನತ್ತ ಮುಖ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

View post on Instagram

ಮೂರು ಬಾರಿಯ ಐಪಿಎಲ್ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ತಂಡವು 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 2 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ಈ ಬಾರಿ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡ ಎನಿಸಿದೆ. ಐಪಿಎಲ್ ಭಾಗ-2ನಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಸೆಪ್ಟೆಂಬರ್ 19ರಂದು ದುಬೈನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.