Asianet Suvarna News Asianet Suvarna News

IPL 2021 KKR vs DC ಫೈಟ್‌, ಫೈನಲ್‌ನಲ್ಲಿ ಚೆನ್ನೈ ಎದುರಾಳಿ ಯಾರು..?

* ಡೆಲ್ಲಿ ವರ್ಸಸ್‌ ಕೆಕೆಆರ್ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಕ್ಷಣಗಣನೆ ಆರಂಭ

* ಸತತ ಎರಡನೇ ಬಾರಿಗೆ ಫೈನಲ್‌ಗೇರುವ ತವಕದಲ್ಲಿದೆ ಡೆಲ್ಲಿ ಕ್ಯಾಪಿಟಲ್ಸ್‌

* ಡೆಲ್ಲಿಗೆ ಶಾಕ್‌ ನೀಡಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡುವ ಲೆಕ್ಕಾಚಾರದಲ್ಲಿದೆ ಕೆಕೆಆರ್

IPL 2021 Kolkata Knight Riders take on Delhi Capitals in 2nd Qualifier Match in Sharjah kvn
Author
Sharjah - United Arab Emirates, First Published Oct 13, 2021, 8:36 AM IST
  • Facebook
  • Twitter
  • Whatsapp

ಶಾರ್ಜಾ(ಅ.13): ಚೊಚ್ಚಲ ಐಪಿಎಲ್‌ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals), 3ನೇ ಬಾರಿಗೆ ಚಾಂಪಿಯನ್‌ ಆಗಲು ಹಾತೊರೆಯುತ್ತಿರುವ ಕೋಲ್ಕತ ನೈಟ್‌ ರೈಡರ್ಸ್ (kolkata knight riders) ಬುಧವಾರ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಸೆಣಸಲಿವೆ. ಗೆಲ್ಲುವ ತಂಡ ಫೈನಲ್‌ ಪ್ರವೇಶಿಸಿ, ಶುಕ್ರವಾರ (ಅ.15ಕ್ಕೆ) ಟ್ರೋಫಿಗಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೆಣಸಲಿದ್ದು, ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ.

ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಮೊದಲ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿದ್ದ ಡೆಲ್ಲಿ, ಚೆನ್ನೈ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಇನ್ನು ಎಲಿಮಿನೇಟರ್‌ನಲ್ಲಿ ಆರ್‌ಸಿಬಿ (RCB) ವಿರುದ್ಧ ರೋಚಕ ಗೆಲುವು ಸಾಧಿಸಿದ ಕೆಕೆಆರ್‌ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಸರಿಯಾದ ಸಮಯಕ್ಕೆ ಲಯ ಕಂಡುಕೊಂಡಿರುವ ಕೆಕೆಆರ್‌, 2014ರ ಬಳಿಕ ಮೊದಲ ಬಾರಿಗೆ ಫೈನಲ್‌ಗೇರಲು ಕಾಯುತ್ತಿದೆ. 2020ರ ಐಪಿಎಲ್‌ನಲ್ಲಿ ರನ್ನರ್‌-ಅಪ್‌ ಆಗಿದ್ದ ಡೆಲ್ಲಿ, ಸತತ 2ನೇ ವರ್ಷವೂ ಫೈನಲ್‌ನಲ್ಲಿ ಆಡಲು ಇಚ್ಛಿಸುತ್ತಿದೆ.

IPL 2021; ಈ ಸಲ ಕಪ್ ನಮ್ದಲ್ಲ, KKR ವಿರುದ್ಧ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದ RCB!

ಕೆಕೆಆರ್‌ ಫೇವರಿಟ್‌?: ಭಾರತೀಯ ಚರಣದಲ್ಲಿ ಕಳಪೆ ಆಟವಾಡಿದ್ದ ಕೆಕೆಆರ್‌ ಯುಎಇ ಚರಣದಲ್ಲಿ ಅದ್ಭುತ ಪ್ರದರ್ಶನ ತೋರಿದೆ. ತಾರಾ ಆಲ್ರೌಂಡರ್‌ ಆ್ಯಂಡ್ರೆ ರಸೆಲ್‌ ಬಹುತೇಕ ಪಂದ್ಯಗಳಲ್ಲಿ ಆಡಿಲ್ಲ. ಇನ್ನು ನಾಯಕ ಇಯಾನ್‌ ಮೊರ್ಗನ್‌ (Eoin Morgan) ಲಯದಲ್ಲಿಲ್ಲ. ಆದರೂ ತಂಡ ಯುಎಇನಲ್ಲಿ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಜಯಭೇರಿ ಬಾರಿಸಿದೆ. ಯುವ ಬ್ಯಾಟ್ಸ್‌ಮನ್‌ಗಳಾದ ಶುಭಮನ್‌ ಗಿಲ್‌, ವೆಂಕಟೇಶ್‌ ಅಯ್ಯರ್‌, ನಿತೀಶ್‌ ರಾಣಾ, ರಾಹುಲ್‌ ತ್ರಿಪಾಠಿ ತಂಡಕ್ಕೆ ಆಸರೆಯಾಗಿದ್ದಾರೆ. ಶಕೀಬ್‌ ಅಲ್‌-ಹಸನ್‌, ಸುನಿಲ್‌ ನರೈನ್‌, ಲಾಕಿ ಫಗ್ರ್ಯೂಸನ್‌, ವರುಣ್‌ ಚಕ್ರವರ್ತಿಯ ಕೊಡುಗೆ ಸಹ ದೊಡ್ಡ ಮಟ್ಟದ್ದಾಗಿದೆ. ಹೀಗಾಗಿ ಕೆಲ ಸಮಸ್ಯೆಗಳು ಮುಂದೂವರಿದರೂ ಕೆಕೆಆರ್‌ ಗೆಲ್ಲುತ್ತಲೇ ಇದೆ. ಈ ವರ್ಷ ಶಾರ್ಜಾದಲ್ಲಿ ಆಡಿರುವ ಮೂರೂ ಪಂದ್ಯಗಳಲ್ಲಿ ಕೆಕೆಆರ್‌ ಗೆದ್ದಿರುವ ಕಾರಣ, ಆ ತಂಡವೇ ಫೈನಲ್‌ಗೇರುವ ನೆಚ್ಚಿನ ತಂಡ ಎನಿಸಿದೆ.

IPL 2021 ಸೋತರೂ, ಗೆದ್ದರೂ ಎಂದೆಂದಿಗೂ ಬೆಂಗಳೂರು-ವಿರಾಟ್‌ಗೆ ನಮ್ಮ ಸಪೋರ್ಟ್ ಎಂದ RCB ಫ್ಯಾನ್ಸ್‌..!

ಬ್ಯಾಟ್ಸ್‌ಮನ್‌ಗಳನ್ನು ನೆಚ್ಚಿಕೊಂಡ ಡೆಲ್ಲಿ: ರಿಕಿ ಪಾಂಟಿಂಗ್‌ ಮಾರ್ಗದರ್ಶನ ಮಾಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ತನ್ನ ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ಶಿಖರ್‌ ಧವನ್‌, ಪೃಥ್ವಿ ಶಾ, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಶಿಮ್ರೊನ್‌ ಹೆಟ್ಮೇಯರ್‌ ಪೈಕಿ ಕನಿಷ್ಠ ಇಬ್ಬರಿಂದ ಮೂವರು ಯಶಸ್ಸು ಕಾಣಬೇಕು. ತಂಡ ಅತ್ಯುತ್ತಮ ಬೌಲಿಂಗ್‌ ಪಡೆಯನ್ನು ಹೊಂದಿದೆಯಾದರೂ, ಕಳೆದ 2 ಪಂದ್ಯಗಳಲ್ಲಿ ಲಯ ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಎರಡೂ ತಂಡಗಳು ಹೆಚ್ಚೂ ಕಡಿಮೆ ಒಂದೇ ರೀತಿಯ ಸಾಮರ್ಥ್ಯವನ್ನು ಹೊಂದಿವೆ. ಹೀಗಾಗಿ ಈ ಕಾದಾಟ ಹೆಚ್ಚು ಕುತೂಹಲ ಮೂಡಲು ಕಾರಣವಾಗಿದೆ.

ಸಂಭಾವ್ಯ ತಂಡಗಳು

ಡೆಲ್ಲಿ ಕ್ಯಾಪಿಟಲ್ಸ್

ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿಮ್ರೊನ್‌ ಹೆಟ್ಮೇಯರ್, ಅಕ್ಷರ್ ಪಟೇಲ್, ಮಾರ್ಕಸ್‌ ಸ್ಟೋಯ್ನಿಸ್, ಕಗಿಸೋ ರಬಾಡ, ರವಿಚಂದ್ರನ್ ಅಶ್ವಿನ್, ಏನ್ರಿಚ್ ನೊಕಿಯೆ, ಆವೇಶ್ ಖಾನ್

ಕೋಲ್ಕತ ನೈಟ್ ರೈಡರ್ಸ್‌

ಶುಭ್‌ಮನ್‌ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್‌ ಮಾರ್ಗನ್‌, ಶಕೀಬ್ ಅಲ್ ಹಸನ್‌, ಸುನಿಲ್ ನರೈನ್, ದಿನೇಶ್ ಕಾರ್ತಿಕ್, ಲಾಕಿ ಫರ್ಗ್ಯೂಸನ್‌, ವರುಣ್ ಚಕ್ರವರ್ತಿ, ಶಿವಂ ಮಾವಿ.

ಸ್ಥಳ: ಶಾರ್ಜಾ

ಪಂದ್ಯ ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌
 

Follow Us:
Download App:
  • android
  • ios