ನವದೆಹಲಿ(ಮೇ.11): ಕೋಲ್ಕತಾ ನೈಟ್‌ರೈಡ​ರ್ಸ್ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಹಾಗೂ ವೇಗಿ ಸಂದೀಪ್‌ ವಾರಿಯರ್‌ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಸೋಮವಾರ ತಮ್ಮ ಮನೆಗಳಿಗೆ ತಲುಪಿದರು.

10 ದಿನ ಕಾಲ ಈ ಇಬ್ಬರು ಐಸೋಲೇಷನ್‌ನಲ್ಲಿದ್ದುಕೊಂಡು ಚಿಕಿತ್ಸೆ ಪಡೆದರು. ವರುಣ್‌ 14ನೇ ಆವೃತ್ತಿಯ ಐಪಿಎಲ್‌ ಚಾಲ್ತಿಯಲ್ಲಿದ್ದಾಗ ಸೋಂಕಿಗೆ ಒಳಗಾದ ಮೊದಲ ಆಟಗಾರ. ಅವರಿಂದ ಸಂದೀಪ್‌ ಹಾಗೂ ಪ್ರಸಿದ್ಧ್ ಕೃಷ್ಣಗೆ ಸೋಂಕು ಹರಡಿತ್ತು. ವರುಣ್‌ ಹಾಗೂ ಸಂದೀಪ್‌ ಇಬ್ಬರೂ ತಮ್ಮ ಊರುಗಳಲ್ಲಿ ಮತ್ತೊಮ್ಮೆ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾಗಲಿದ್ದಾರೆ.

ಹೌದು, ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್‌ ಇಬ್ಬರು ಮನೆಗೆ ಹೋಗಿದ್ದಾರೆ. ಅವರಿಬ್ಬರು 10 ದಿನಗಳ ಖಡ್ಡಾಯ ಐಸೋಲೇಷನ್‌ ಮುಗಿಸಿ ಮನೆಗೆ ತೆರಳಿದ್ದಾರೆ. ಹೀಗಿದ್ದೂ ಕೆಕೆಆರ್ ಫ್ರಾಂಚೈಸಿ ಇವರಿಬ್ಬರ ಆರೋಗ್ಯದ ಮೇಲೆ ನಿಗಾ ಇಡಲಿದೆ ಎಂದು ಬಿಸಿಸಿಐ ಉನ್ನತ ಮೂಲಗಳು ಪಿಟಿಐ ಸುದ್ದಿ ಸಂಸ್ಥಗೆ ಖಚಿತ ಪಡಿಸಿವೆ.

ಕೊರೋನಾ ಹೋರಾಟದಲ್ಲಿ ಸೋತ ತಾಯಿ, ಸಹೋದರಿಗೆ ವೇದಾ ಭಾವನಾತ್ಮಕ ಪತ್ರ!

ಬಯೋ ಬಬಲ್‌ನೊಳಗಿದ್ದ ವರುಣ್ ಚಕ್ರವರ್ತಿ ಹಾಗೂ ಸಂದೀಪ್‌ ವಾರಿಯರ್‌ಗೆ ಮೊದಲ ಬಾರಿಗೆ ಕೋವಿಡ್‌ ಸೋಂಕು ದೃಢ ಪಟ್ಟಿತ್ತು. ಮರುದಿನ ಡೆಲ್ಲಿ ಕ್ಯಾಪಿಟಲ್ಸ್‌ ಸ್ಪಿನ್ನರ್ ಅಮಿತ್ ಮಿಶ್ರಾ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ವೃದ್ದಿಮಾನ್ ಸಾಹಗೆ ಕೋವಿಡ್ ಪತ್ತೆಯಾದ ಬೆನ್ನಲ್ಲೇ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona