* ಕಾಂಗರೂ ನಾಡಿಗೆ ಬಂದಿಳಿದ ಆಸ್ಟ್ರೇಲಿಯಾ ಕ್ರಿಕೆಟಿಗರು* ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದ 38 ಮಂದಿ ತವರಿಗೆ ವಾಪಾಸ್‌* ಮಾಲ್ಡೀವ್ಸ್‌ನಿಂದ ಸುರಕ್ಷಿತವಾಗಿ ಆಟಗಾರರನ್ನು ತವರಿಗೆ ಕಳಿಸಿಕೊಟ್ಟ ಬಿಸಿಸಿಐ

ಮೆಲ್ಬರ್ನ್‌(ಮೇ.17): ಆಸ್ಟ್ರೇಲಿಯಾ ಕ್ರಿಕೆಟಿಗರನ್ನು ಹಾಗೂ ಸಹಾಯಕ ಸಿಬ್ಬಂದಿಗಳನ್ನು ಮಾಲ್ಡೀವ್ಸ್‌ನಿಂದ ಸುರಕ್ಷಿತವಾಗಿ ಹಾಗೂ ತ್ವರಿತವಾಗಿ ತವರಿಗೆ ಕಳಿಸಿಕೊಟ್ಟ ಬಿಸಿಸಿಐಗೆ ಕ್ರಿಕೆಟ್ ಆಸ್ಟ್ರೇಲಿಯಾ ಹಂಗಾಮಿ ಕಾರ್ಯನಿರ್ವಾಹಕಾಧಿಕಾರಿ(ಸಿಇಒ) ನಿಕ್‌ ಹಾಕ್ಲೇ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಮೇ ತಿಂಗಳಾರಂಭದಲ್ಲೇ ಕೋವಿಡ್‌ ಕಾರಣದಿಂದಾಗಿ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಬಿಸಿಸಿಐ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ ಆಟಗಾರರು ಹಾಗೂ ಸಿಬ್ಬಂದಿಗಳನ್ನೊಳಗೊಂಡ 38 ಮಂದಿ ಮಾಲ್ಡೀವ್ಸ್‌ಗೆ ಪ್ರಯಾಣ ಬೆಳೆಸಿದ್ದರು. ಈ ತಂಡದಲ್ಲಿದ್ದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್, ಗ್ಲೆನ್‌ ಮ್ಯಾಕ್ಸ್‌ ಹಾಗೂ ರಿಕಿ ಪಾಂಟಿಂಗ್ ಸೇರಿದಂತೆ ಎಲ್ಲಾ 38 ಮಂದಿಯು ಇಂದು(ಮೇ.17) ಬೆಳಗ್ಗೆ ಸಿಡ್ನಿಗೆ ಬಂದಿಳಿದಿದ್ದಾರೆ. ಭಾರತದಿಂದ ಅಸ್ಟ್ರೇಲಿಯಾಗೆ ವಿಮಾನ ಹಾರಾಟವನ್ನು ಆಸ್ಟ್ರೇಲಿಯಾ ಸರ್ಕಾರ ನಿರ್ಬಂಧಿಸಿದ್ದರಿಂದ, ಆಸೀಸ್‌ ಕ್ರಿಕೆಟಿಗರು ಹಾಗೂ ಸಿಬ್ಬಂದಿ ಮಾಲ್ಡೀವ್ಸ್‌ಗೆ ಪ್ರಯಾಣ ಬೆಳೆಸಿ, ಅಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ಆಸ್ಟ್ರೇಲಿಯಾಗೆ ಬಂದಿಳಿದಿದ್ದಾರೆ.

Scroll to load tweet…

ವಿಂಡೀಸ್ ಪ್ರವಾಸಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟ

ಇನ್ನು ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಮತ್ತೊಂದು ವಿಮಾನದಲ್ಲಿ ಕಾಂಗರೂ ನಾಡಿಗೆ ಬಂದಿಳಿಯಲಿದ್ದಾರೆ. ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಸುರಕ್ಷಿತವಾಗಿ ತವರಿಗೆ ಬಂದಿಳಿಯುತ್ತಿದ್ದಂತೆಯೇ ನಿಕ್‌ ಹಾಕ್ಲೇ, ನಮಗೆ ನಿಜಕ್ಕೂ ಸಂತೋಷವಾಗಿದೆ. ಸುರುಕ್ಷಿತವಾಗಿ ಹಾಗೂ ತ್ವರಿತವಾಗಿ ನಮ್ಮನ್ನು ತವರಿಗೆ ಕಳಿಸಿಕೊಟ್ಟಿದ್ದಕ್ಕೆ ಬಿಸಿಸಿಐಗೆ ನಾವು ಆಭಾರಿಗಳಾಗಿದ್ದೇವೆ. ಅವರೆಲ್ಲರೂ ಆಸ್ಟ್ರೇಲಿಯಾಗೆ ಬಂದಿಳಿದಿದ್ದರೂ, ನಾನಿನ್ನು ನಮ್ಮ ಆಟಗಾರರ ಜತೆ ಮಾತುಕತೆ ನಡೆಸಿಲ್ಲ. ಆದರೆ ಅವರೆಲ್ಲರೂ ವಾಪಾಸ್‌ ತವರಿಗೆ ಮರಳಿದ್ದಕ್ಕೆ ಖಂಡಿತವಾಗಿಯೂ ಖುಷಿಯಾಗಿದ್ದಾರೆ ಎನ್ನುವುದಂತೂ ಸತ್ಯ ಎಂದು ಸಿಡ್ನಿ ಮಾರ್ನಿಂಗ್‌ ಹೆರಾರ್ಲ್ಡ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದೀಗ ಆಸ್ಟ್ರೇಲಿಯಾಗೆ ಬಂದಿಳಿದ ಎಲ್ಲಾ 38 ಮಂದಿಯು 14 ದಿನಗಳ ಕಾಲ ಕಡ್ಡಾಯ ಹೋಟೆಲ್‌ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona