ವಿಂಡೀಸ್ ಪ್ರವಾಸಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟ
* ವೆಸ್ಟ್ ಇಂಡೀಸ್ ವಿರುದ್ದದ ಸೀಮಿತ ಓವರ್‌ಗಳ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ
* ವಿಂಡೀಸ್ ಪ್ರವಾಸದಲ್ಲಿ 5 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿ ಆಡಲಿರುವ ಆಸ್ಟ್ರೇಲಿಯಾ
* ಜುಲೈ 10ರಿಂದ ಆರಂಭವಾಲಿರುವ ಆಸ್ಟ್ರೇಲಿಯಾ-ವಿಂಡೀಸ್ ಟಿ20 ಸರಣಿ
ಮೆಲ್ಬರ್ನ್(ಮೇ.17): ಮುಂಬರುವ ವೆಸ್ಟ್ ಇಂಡೀಸ್ ವಿರುದ್ದ ಸೀಮಿತ ಓವರ್‌ಗಳ ಸರಣಿಗೆ 23 ಆಟಗಾರರನ್ನೊಳಗೊಂಡ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟವಾಗಿದೆ. ಆ್ಯರೋನ್ ಫಿಂಚ್ ನೇತೃತ್ವದ ತಂಡವು ವಿಂಡೀಸ್ ಪ್ರವಾಸದಲ್ಲಿ 5 ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.
ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಯಿಂದ ಹೊರಗುಳಿದಿದ್ದ 8 ಆಟಗಾರರು ಇದೀಗ ವಿಂಡೀಸ್ ಪ್ರವಾಸಕ್ಕೆ ಕಾಂಗರೂ ಪಡೆಯನ್ನು ಕೂಡಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಸ್ ಹೇಜಲ್‌ವುಡ್, ಮೊಯ್ಸೆಸ್ ಹೆನ್ರಿಕೇಸ್, ಅಲೆಕ್ಸ್ ಕ್ಯಾರಿ ಹಾಗೂ ಲೆಗ್ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ಆಸ್ಟ್ರೇಲಿಯಾ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.
ಇದೇ ವೇಳೆ ನ್ಯೂಜಿಲೆಂಡ್ ವಿರುದ್ದದ ಸರಣಿಯಲ್ಲಿ ಪಾಲ್ಗೊಂಡಿದ್ದ ಬೆನ್ ಮೆಕ್‌ಡರ್ಮೊಟ್, ಆಸ್ಟನ್ ಟರ್ನರ್ ಹಾಗೂ ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್ ತಂಡದಿಂದ ಹೊರಬಿದ್ದಿದ್ದಾರೆ. ಈ ಪೈಕಿ ಸ್ಯಾಮ್ಸ್ ವೈಯುಕ್ತಿಕ ಕಾರಣದಿಂದಾಗಿ ವಿಂಡೀಸ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಇನ್ನು ಮಾರ್ನಸ್ ಲಬುಶೇನ್ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿರುವುದರಿಂದ ವಿಂಡೀಸ್ ಪ್ರವಾಸಕ್ಕೆ ಅಲಭ್ಯರಾಗಿದ್ದಾರೆ.
IPL 2021: ಮದುವೆಗೂ ಮುನ್ನ ತಂದೆಯಾಗುತ್ತಿದ್ದಾರೆ ಕೆಕೆಆರ್‌ನ ಈ ಸ್ಟಾರ್ ಕ್ರಿಕೆಟಿಗ..!
ಇನ್ನುಳಿದಂತೆ ಭಾರತದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಮಿಚೆಲ್ ಸ್ವೆಪ್ಸನ್, ಆ್ಯಡಂ ಜಂಪಾ ಹಾಗೂ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ತುದಿಗಾಲಿನಲ್ಲಿ ನಿಂತಿರುವ ತನ್ವೀರ್ ಸಂಘಾ ಹೀಗೆ ಮೂವರು ಲೆಗ್ ಸ್ಪಿನ್ನರ್‌ಗಳಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಮಣೆ ಹಾಕಿದೆ.
5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಜುಲೈ 10ರಿಂದ ಆರಂಭವಾಗಲಿದೆ. ಟಿ20 ಸರಣಿಯ ಪಂದ್ಯಗಳು ಸೇಂಟ್ ಲೂಸಿಯಾದಲ್ಲಿ ನಡೆಯಲಿವೆ. ಇನ್ನು ಏಕದಿನ ಸರಣಿ ಜುಲೈ 21ರಿಂದ ಆರಂಭವಾಗಲಿದ್ದು, ಏಕದಿನ ಸರಣಿಗೆ ಬಾರ್ಬಡೋಸ್ ಆತಿಥ್ಯ ವಹಿಸಲಿದೆ.
ವಿಂಡೀಸ್ ಸರಣಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:
ಆ್ಯರೋನ್ ಫಿಂಚ್(ನಾಯಕ), ಆಸ್ಟನ್ ಆಗರ್, ಜೇಸನ್ ಬೆಹ್ರನ್‌ಡ್ರಾಫ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಜೋಸ್ ಹೇಜಲ್‌ವುಡ್, ಮೊಯ್ಸೆಸ್ ಹೆನ್ರಿಕೇಸ್, ಮಿಚೆಲ್ ಮಾರ್ಶ್, ಗ್ಲೆನ್ ಮ್ಯಾಕ್ಸ್‌ವೆಲ್, ರಿಲೇ ಮೆರಿಡಿತ್, ಜೋಶುವಾ ಫಿಲಿಫ್ಫಿ, ಜೇ ರಿಚರ್ಡ್‌ಸನ್, ಕೇನ್ ರಿಚರ್ಡ್‌ಸನ್, ತನ್ವೀರ್ ಸಂಘಾ, ಡಾರ್ಶಿ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಮಿಚೆಲ್ ಸ್ವಪ್ಸನ್, ಆ್ಯಂಡ್ರ್ಯೂ ಟೈ, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ.