ಚೆನ್ನೈ(ಏ.06): ಹೊಸದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಿಕೊಂಡಿರುವ ಅಸ್ಟ್ರೇಲಿಯಾ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್ ಅಭ್ಯಾಸದ ವೇಳೆ ಆಕರ್ಷಕ ರಿವರ್ಸ್‌ಸ್ವೀಪ್‌ ಬ್ಯಾಟಿಂಗ್‌ ಮೂಲಕ ಆರ್‌ಸಿಬಿ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಕ್ವಾರಂಟೈನ್‌ ಮುಗಿಸಿ ನೇರವಾಗಿ ಮೈದಾನಕ್ಕಿಳಿದಿರುವ ಪವರ್‌ ಹಿಟ್ಟರ್‌ ಮ್ಯಾಕ್ಸ್‌ವೆಲ್‌ ಬ್ಯಾಟಿಂಗ್‌ ಅಭ್ಯಾಸದ ವೇಳೆ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿದ್ದಾರೆ. ಗ್ಲೆನ್‌ ಮ್ಯಾಕ್ಸ್‌ವೆಲ್‌ ಮೊದಲ ದಿನದ ಅಭ್ಯಾಸದ ವೇಳೆ ಬ್ಯಾಟಿಂಗ್‌ ನಡೆಸಿದ ಕೆಲವು ರೋಚಕ ಕ್ಷಣಗಳನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

32 ವರ್ಷದ ಗ್ಲೆನ್‌ ಮ್ಯಾಕ್ಸ್‌ವೆಲ್‌ರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ಫೆಬ್ರವರಿಯಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ 14.25 ಕೋಟಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮ್ಯಾಕ್ಸ್‌ವೆಲ್‌ ಆರ್‌ಸಿಬಿ ಸೇರ್ಪಡೆ ಮಧ್ಯಮ ಕ್ರಮಾಂಕವನ್ನು ಮತ್ತಷ್ಟು ಬಲಿಷ್ಠವನ್ನಾಗಿಸಿದ್ದು, ಎಬಿ ಡಿವಿಲಿಯರ್ಸ್‌ ಮೇಲಿನ ಹೊರೆ ಕೊಂಚ ಕಡಿಮೆಯಾಗಲಿದೆ.

IPL 2021: ಆರ್‌ಸಿಬಿಯ ಈ ತಂಡ ಐಪಿಎಲ್‌ ಚಾಂಪಿಯನ್‌ ಪಟ್ಟ ಅಲಂಕರಿಸಬಹುದು..!

ಡೆತ್‌ ಓವರ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವನ್ನು ಮ್ಯಾಕ್ಸ್‌ವೆಲ್‌ ಹೊಂದಿದ್ದು, ಬೌಲಿಂಗ್‌ನಲ್ಲೂ ಉಪಯುಕ್ತ ಕಾಣಿಕೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ.