ನವದೆಹಲಿ(ಏ.18): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೊದಲ 3 ಪಂದ್ಯಗಳಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಆಘಾತಕಾರಿ ಸೋಲು ಕಂಡಿದ್ದು, ಗೆಲುವಿನ ಹಳಿಗೆ ಮರಳಲು ಹೆಣಗಾಡುತ್ತಿದೆ. ಇನ್ನು ಸನ್‌ರೈಸರ್ಸ್‌ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಮನೀಶ್‌ ಪಾಂಡೆ ನೀರಸ ಪ್ರದರ್ಶನ ಸಹ ಮುಂದುವರೆದಿದ್ದು, ಪಾಂಡೆ ಕೆಲವು ಕಾಲ ವಿಶ್ರಾಂತಿ ಪಡೆಯುವುದು ಒಳಿತು ಎನ್ನುವಂತಹ ಮಾತುಗಳು ಕೇಳಿ ಬರಲಾರಂಭಿಸಿವೆ.

ಮುಂಬೈ ಇಂಡಿಯನ್ಸ್‌ ವಿರುದ್ದ (ಏಪ್ರಿಲ್‌ 17) ನಡೆದ ಪಂದ್ಯದಲ್ಲಿ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಬರೀ 7 ಎಸೆತಗಳನ್ನು ಎದುರಿಸಿದ ಮನೀಶ್ ಪಾಂಡೆ ಕೇವಲ 2 ರನ್‌ ಬಾರಿಸಿ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಇದರ ಬೆನ್ನಲ್ಲೇ ಪಾಂಡೆ ಫಾರ್ಮ್‌ ಕುರಿತಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಪ್ರಗ್ಯಾನ್‌ ಓಜಾ ತುಟಿಬಿಚ್ಚಿದ್ದಾರೆ.

ಸನ್‌ರೈಸರ್ಸ್‌ ಹೈದರಾಬಾದ್‌ ಮಧ್ಯಮ ಕ್ರಮಾಂಕವನ್ನು ಗಮನಿಸಿದಾಗ ಕೇದಾರ್‌ ಜಾಧವ್ ಅವರಿಗೆ ಅವಕಾಶ ನೀಡುವುದು ಒಳಿತು. ಯಾಕೆಂದರೆ ಎಲ್ಲಾ ಬ್ಯಾಟಿಂಗ್ ಜವಾಬ್ದಾರಿಯನ್ನು ಡೇವಿಡ್‌ ವಾರ್ನರ್‌ ಹಾಗೂ ಜಾನಿ ಬೇರ್‌ಸ್ಟೋವ್‌ ಹೊರಲು ಸಾಧ್ಯವಿಲ್ಲ. ಮನೀಶ್‌ ಪಾಂಡೆ ಕೆಲವು ಪಂದ್ಯಗಳ ಮಟ್ಟಿಗೆ ವಿಶ್ರಾಂತಿ ಪಡೆಯುವುದು ಒಳಿತು. ಇದು ಅವರಿಗೂ ಅನುಕೂಲವಾಗಲಿದೆ ಎಂದು ಎಡಗೈ ಸ್ಪಿನ್ನರ್‌ ಓಜಾ ಸ್ಪೋರ್ಟ್ಸ್‌ ಟುಡೆಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಸುಲಭ ಗುರಿ ಚೇಸ್ ಮಾಡಲು ಹೈದರಾಬಾದ್ ವಿಫಲ; ಮುಂಬೈಗೆ 13 ರನ್ ಗೆಲುವು!

ಚೆನ್ನೈನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಇನ್ನಷ್ಟು ಪಂದ್ಯಗಳನ್ನು ಆಡಲಿದ್ದು, ಕೇದಾರ್ ಜಾಧವ್‌ಗೆ  ಮಣೆಹಾಕುವ ಸಾಧ್ಯತೆಯಿದೆ. ಉಪಯುಕ್ತ ಸ್ಪಿನ್ನರ್‌ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿ ಬಲ ತುಂಬುವ ಸಾಮರ್ಥ್ಯ ಜಾಧವ್‌ಗಿದೆ ಎಂದು ಓಜಾ ಹೇಳಿದ್ದಾರೆ. 

ಮುಂಬೈ ಇಂಡಿಯನ್ಸ್‌ ನೀಡಿದ್ದ 151 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ ಹೈದರಾಬಾದ್‌ ಉತ್ತಮ ಆರಂಭದ ಹೊರತಾಗಿಯೂ ಕೊನೆಯಲ್ಲಿ ನಾಟಕೀಯ ಕುಸಿತ ಕಾಣುವ ಮೂಲಕ 13 ರನ್‌ಗಳ ಸೋಲು ಕಂಡಿದೆ. ಇದರೊಂದಿಗೆ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಡೇವಿಡ್‌ ವಾರ್ನರ್ ಪಡೆ ಹ್ಯಾಟ್ರಿಕ್‌ ಸೋಲಿನ ಮುಖಭಂಗ ಅನುಭವಿಸಿದೆ.