ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

ಮುಂಬೈ, (ಏ.22): ದೇವದತ್ ಪಡಿಕ್ಕಲ್ ಅಬ್ಬರ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ,ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲುವಿನ ನಗೆ ಬೀರಿದೆ. ಈ ಮೂಲಕ ಬೆಂಗಳೂರು ಟೂರ್ನಿಯಲ್ಲಿ ಸತತ 4ನೇ ಗೆಲುವು ದಾಖಲಿಸಿ ಗೆಲುವಿನ ಓಟ ಮುಂದುವರಿಸಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು (ಗುರುವಾರ) ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ,ನಿಗದಿತ 20 ಓವರ್‌ಗೆ 9 ವಿಕೆಟ್ ಕಳೆದುಕೊಂಡು 177 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ವಿಕೆಟ್ ನಷ್ಟವಿಲ್ಲದೇ ಕೇವಲ 16.3 ಓವರ್‌ಗಳಲ್ಲಿ ಗೆಲುವು ಸಾಧಿಸಿತು. 

RCBಗೆ 178 ರನ್ ಟಾರ್ಗೆಟ್, ನಾಲ್ಕನೇ ಗೆಲುವು ಸಿಗುತ್ತಾ?

ಈ ಮೂಲಕ ಕೊಹ್ಲಿ ಪಡೆ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 14ನೇ ಆವೃತ್ತಿಯಲ್ಲಿ ಸತತ 4ನೇ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ.

ಆರ್ ಸಿಬಿ ಪರ ದೇವದತ್ ಪಡಿಕ್ಕಲ್ 101 ರನ್ ಬಾರಿಸಿದರೆ, ನಾಯಕ ವಿರಾಟ್ ಕೊಹ್ಲಿ 72 ರನ್ ಬಾರಿಸಿದರು. ಇನ್ನು ರಾಜಸ್ತಾನ ಪರ ಜೋಸ್ ಬಟ್ಲರ್ 8, ಮನನ್ ವೊವ್ರಾ 7 ಮತ್ತು ಡೇವಿಡ್ ಮಿಲ್ಲರ್ ಶೂನ್ಯಕ್ಕೆ ಔಟಾಗಿದ್ದರು. ನಾಯಕ ಸಂಜು ಸ್ಯಾಮ್ಸನ್ 21, ರಿಯಾನ್ ಪರಾಗ್ 25, ಶಿವಂ ದುಬೆ 46, ರಾಹುಲ್ ತೆವಾಟಿಯಾ 40 ರನ್ ಪೇರಿಸಿ ತಂಡದ ಮೊತ್ತ ಹೆಚ್ಚಿಸಿದರು.

ಬೆಂಗಳೂರು ಪರ ಮೊಹಮ್ಮದ್ ಸಿರಾಜ್ ಮತ್ತು ಹರ್ಷಲ್ ಪಟೇಲ್ 3 ಮತ್ತು ಜ್ಯಾಮಿನ್ಸನ್, ರಿಚರ್ಡ್ಸನ್ ಮತ್ತು ಸುಂದರ್ 1 ವಿಕೆಟ್ ಪಡೆದಿದ್ದಾರೆ.

ಕೊಹ್ಲಿ- ಪಡಿಕ್ಕಲ್ ಭರ್ಜರಿ ಜೊತೆಯಾಟ
ಹೌದು. ಆರಂಭದಿಂದಲೇ ರಾಯಲ್ಸ್ ಬೌಲರ್ಸ್‌ಗಳ ಸವಾರಿ ಮಾಡಿದ, ದೇವದತ್ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೋಡಿ ತಂಡವನ್ನು ಗೆಲ್ಲಿಸಿತು. ಯಾರೇ ಬೌಲಿಂಗ್ ಬಂದರೂ ಪಡಿಕ್ಕಲ್ ಭರ್ಜರಿ ಸಿಕ್ಸರ್, ಬೌಂಡರಿಗಳ ಸುರಿಮಳೆ ಸುರಿಸಿದರು. 

ಪಡಿಕಲ್ ಕೇವಲ 52 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಅಮೋಘ ಸಿಕ್ಸರ್‌ಗಳೊಂದಿಗೆ ಬರೋಬ್ಬರಿ 101 ರನ್‌ ಬಾರಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಇನ್ನು ಕ್ಯಾಪ್ಟನ್ ಕೊಹ್ಲಿ 47 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸ್‌ಗಳೊಂದಿಗೆ 72 ರನ್ ಪೇರಿಸಿದರು.

ಕಿಂಗ್ ಕೊಹ್ಲಿ ಹೊಸ ಮೈಲುಗಲ್ಲು
ವಿರಾಟ್ ಕೊಹ್ಲಿ ಐಪಿಎಲ್‌ನ ಅತ್ಯಂತ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ. ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ 6000ರನ್‌ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಇಂದಿನ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವೈಯಕ್ತಿಕ ಮೊತ್ತ 51 ರನ್‌ಗಳಿಸಿದ್ದ ವೇಳೆ ಈ ಮೈಲಿಗಲ್ಲನ್ನು ಸಾಧಸಿದರು.

Scroll to load tweet…