14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 7ನೇ ಪಂದ್ಯದಲ್ಲಿಂದು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್‌ ಸವಾಲನ್ನು ಸ್ವೀಕರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮುಂಬೈ(ಏ.15): ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ ಹೊರತಾಗಿಯೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾಗಿದ್ದ ಸಂಜು ಸ್ಯಾಮ್ಸನ್‌, 14ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನಕ್ಕೆ ಮೊದಲ ಜಯ ತಂದುಕೊಡಲು ಕಾತರಿಸುತ್ತಿದ್ದಾರೆ. 

ಗುರುವಾರ(ಏ.15) ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರಾಜಸ್ಥಾನ ರಾಯಲ್ಸ್‌ ಸೆಣಸಲಿದೆ. ತಂಡಕ್ಕೆ ತಾರಾ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ಅನುಪಸ್ಥಿತಿ ಬಲವಾಗಿ ಕಾಡಲಿದೆ. ಜೊತೆಗೆ ಬೌಲಿಂಗ್‌ ಪಡೆಯಿಂದ ಸುಧಾರಿತ ಪ್ರದರ್ಶನವನ್ನು ರಾಯಲ್ಸ್‌ ನಿರೀಕ್ಷಿಸುತ್ತಿದೆ. ಇಂದಿನ ಪಂದ್ಯದಲ್ಲಿ ಜೋಸ್‌ ಬಟ್ಲರ್ ರಾಜಸ್ಥಾನ ರಾಯಲ್ಸ್‌ ಪರ ಇನಿಂಗ್ಸ್‌ ಆರಂಭಿಸುವ ಸಾಧ್ಯತೆಯಿದೆ.

ಐಪಿಎಲ್ 2021: ಸನ್‌ರೈಸರ್ಸ್ ವಿರುದ್ಧ ಆರ್‌ಸಿಬಿಗೆ ರೋಚಕ ಜಯ

ಮತ್ತೊಂದೆಡೆ ಚೆನ್ನೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಡೆಲ್ಲಿ, ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ನಾಯಕನಾಗಿ ಮೊದಲ ಪಂದ್ಯದಲ್ಲೇ ಯಶಸ್ಸು ಕಂಡಿದ್ದ ರಿಷಭ್‌ ಪಂತ್‌, ತಂಡ ಗೆಲುವಿನ ಲಯ ಮುಂದುವರಿಸುವಂತೆ ನೋಡಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಪೃಥ್ವಿ ಶಾ ಹಾಗೂ ಶಿಖರ್ ಧವನ್‌ ಲೀಲಾಜಾಲವಾಗಿ ರನ್‌ ಗಳಿಸುತ್ತಿದ್ದು, ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಡೆಡ್ಲಿ ವೇಗಿ ಕಗಿಸೋ ರಬಾಡ ಡೆಲ್ಲಿ ತಂಡ ಕೂಡಿಕೊಳ್ಳಲಿದ್ದಾರೆ

ಪಿಚ್‌ ರಿಪೋರ್ಟ್‌: ವಾಂಖೇಡೆ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳಲಿದೆ. ಇಬ್ಬನಿ ಬೀಳಲಿರುವ ಕಾರಣ 2ನೇ ಇನ್ನಿಂಗ್ಸ್‌ನಲ್ಲಿ ಬೌಲ್‌ ಮಾಡುವುದು ಕಷ್ಟ. ಹೀಗಾಗಿ ಮೊದಲು ಬ್ಯಾಟ್‌ ಮಾಡುವ ತಂಡ 180ಕ್ಕಿಂತ ಹೆಚ್ಚು ಮೊತ್ತ ಗಳಿಸಬೇಕು.

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ: ಪೃಥ್ವಿ ಶಾ, ಶಿಖರ್‌ ಧವನ್‌, ಅಜಿಂಕ್ಯ ರಹಾನೆ, ರಿಷಭ್‌ ಪಂತ್‌(ನಾಯಕ), ಶಿಮ್ರೊನ್‌ ಹೆಟ್ಮೇಯರ್‌, ಮಾರ್ಕಸ್‌ ಸ್ಟೋಯ್ನಿಸ್‌, ಆರ್‌.ಅಶ್ವಿನ್‌, ಕ್ರಿಸ್‌ ವೋಕ್ಸ್‌, ಕಗಿಸೋ ರಬಾಡ, ಆವೇಶ್‌ ಖಾನ್‌, ಅಮಿತ್‌ ಮಿಶ್ರಾ.

ರಾಜಸ್ಥಾನ: ಬಟ್ಲರ್‌, ಜೈಸ್ವಾಲ್‌/ವೋಹ್ರಾ, ಸ್ಯಾಮ್ಸನ್‌(ನಾಯಕ), ಡೇವಿಡ್ ಮಿಲ್ಲರ್‌, ಶಿವಂ ದುಬೆ, ರಿಯಾನ್‌ ಪರಾಗ್‌, ತೆವಾಟಿಯಾ, ಮೋರಿಸ್‌, ಶ್ರೇಯಸ್‌ ಗೋಪಾಲ್‌, ಟೈ/ಮುಸ್ತಾಫಿಜುರ್‌, ಚೇತನ್‌ ಸಕಾರಿಯಾ.