ಚೆನ್ನೈ(ಏ.20): 2020ರ ಐಪಿಎಲ್‌ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಎದುರಾಗಿದ್ದ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್‌ ಕಾಯುತ್ತಿದ್ದು, ಮಂಗಳವಾರ ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪ್ರಾಬಲ್ಯ ಮೆರೆಯಲು ಎದುರು ನೋಡುತ್ತಿದೆ. ಆದರೆ ಚಾಂಪಿಯನ್‌ ಮುಂಬೈ ತಂಡವನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಇದೊಂದು ರೀತಿ ಸಮಬಲರ ನಡುವಿನ ಹೋರಾಟ ಎನಿಸಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿ, ಚೆನ್ನೈಗೆ ಬಂದಿಳಿದಿರುವ ಡೆಲ್ಲಿ ಕ್ಯಾಪಿಟಲ್ಸ್‌, ಇಲ್ಲೂ ಜಯದ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ. ಆದರೆ ಸತತ 2 ಪಂದ್ಯಗಳಲ್ಲಿ ಸಾಧಾರಣ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಮುಂಬೈ, ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದು, ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿದೆ. ಚೆನ್ನೈನ ನಿಧಾನಗತಿಯ ಪಿಚ್‌ನಲ್ಲಿ ಡೆಲ್ಲಿ ಹೇಗೆ ತನ್ನ ಆಟದ ಶೈಲಿಯನ್ನು ಬದಲಾಯಿಸಿಕೊಳ್ಳಲಿದೆ ಎನ್ನುವುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

ಧೋನಿ ತಂತ್ರಕ್ಕೆ ತಲೆಬಾಗಿದ ಸ್ಯಾಮ್ಸನ್; ರಾಜಸ್ಥಾನ ವಿರುದ್ಧ CSKಗೆ 45 ರನ್ ಗೆಲುವು!

ಪಿಚ್‌ ರಿಪೋರ್ಟ್‌: ಚೆನ್ನೈನ ಪಿಚ್‌ನಲ್ಲಿ ಬ್ಯಾಟ್‌ ಮಾಡುವುದು ಸವಾಲಿನ ಕೆಲಸ. ಆರ್‌ಸಿಬಿಯಂತೆ ಮೊದಲು ಬ್ಯಾಟ್‌ ಮಾಡಿದ 180ಕ್ಕೂ ಹೆಚ್ಚು ರನ್‌ ಕಲೆಹಾಕಿದರೆ ಗೆಲುವು ಬಹುತೇಕ ಖಚಿತ. ಸ್ಪಿನ್ನರ್‌ಗಳು ಹೆಚ್ಚಿನ ಮಹತ್ವ ಪಡೆಯಲಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ: ಕ್ವಿಂಟನ್‌ ಡಿ ಕಾಕ್‌, ರೋಹಿತ್‌ ಶರ್ಮಾ (ನಾಯಕ), ಸೂರ್ಯಕುಮಾರ್‌, ಇಶಾನ್‌ ಕಿಶನ್‌, ಕೀರನ್‌ ಪೊಲ್ಲಾರ್ಡ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ಆ್ಯಡಂ ಮಿಲ್ನೆ, ರಾಹುಲ್‌ ಚಹರ್‌, ಜಸ್‌ಪ್ರೀತ್‌ ಬುಮ್ರಾ, ಟ್ರೆಂಟ್‌ ಬೌಲ್ಟ್‌.

ಡೆಲ್ಲಿ: ಶಿಖರ್‌ ಧವನ್‌, ಪೃಥ್ವಿ ಶಾ, ಸ್ಟೀವ್‌ ಸ್ಮಿತ್‌, ರಿಷಭ್‌ ಪಂತ್‌(ನಾಯಕ), ಮಾರ್ಕಸ್‌ ಸ್ಟೋಯ್ನಿಸ್‌, ಲಲಿತ್‌ ಯಾದವ್‌, ಲುಕ್ಮನ್‌ ಮೇರಿವಾಲಾ, ವೋಕ್ಸ್‌/ನೋಕಿಯ, ಆರ್‌.ಅಶ್ವಿನ್‌, ಆವೇಶ್‌ ಖಾನ್‌, ಕಗಿಸೋ ರಬಾಡ.

ಸ್ಥಳ: ಚೆನ್ನೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್