ಮುಂಬೈ(ಏ.03) ಕಳೆದ ವರ್ಷ ಟ್ರೋಫಿ ಗೆದ್ದು ದಾಖಲೆಯ 5ನೇ ಬಾರಿಗೆ ಐಪಿಎಲ್ ಚಾಂಪಿಯನ್‌ ಆಗಿದ್ದ ಮುಂಬೈ ಇಂಡಿಯನ್ಸ್‌, ಮತ್ತೊಮ್ಮೆ ಪ್ರಶಸ್ತಿ ಜಯಿಸುವ ಉತ್ಸಾಹದಲ್ಲಿದೆ. ಮೇಲ್ನೋಟಕ್ಕೆ ಮುಂಬೈ ತಂಡವೇ ಈ ಬಾರಿಯೂ ಕಪ್‌ ಗೆಲ್ಲುವ ನೆಚ್ಚಿನ ತಂಡ ಎನಿಸುತ್ತಿದೆ. ತಂಡದಲ್ಲಿರುವ ಬಹುತೇಕರು ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ.

ಪ್ರಾಬಲ್ಯ: ಸದೃಢ ಬ್ಯಾಟಿಂಗ್‌ ಪಡೆ ಮುಂಬೈನ ಅತಿದೊಡ್ಡ ಶಕ್ತಿ. ರೋಹಿತ್‌ ಹಾಗೂ ಕ್ವಿಂಟನ್‌ ಡಿ ಕಾಕ್‌ರಂತಹ ಅನುಭವಿ, ಆಕ್ರಮಣಕಾರಿ ಆರಂಭಿಕರನ್ನು ತಂಡ ಹೊಂದಿದೆ. ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಲಿನ್‌ ಸಹ ಮೀಸಲು ಪಡೆಯಲ್ಲಿದ್ದಾರೆ. ಐಪಿಎಲ್‌ ಪ್ರದರ್ಶನದ ಆಧಾರದ ಮೇಲೆ ಭಾರತ ತಂಡಕ್ಕೆ ಕಾಲಿಟ್ಟ ಸೂರ್ಯಕುಮಾರ್‌, ಇಶಾನ್‌ ಕಿಶನ್‌, ಹಾರ್ದಿಕ್‌ ಹಾಗೂ ಕೃನಾಲ್‌ ಪಾಂಡ್ಯ, ಜೊತೆಗೆ ಕೀರನ್‌ ಪೊಲ್ಲಾರ್ಡ್‌ ಮಧ್ಯಮ ಕ್ರಮಾಂಕವನ್ನು ಅತ್ಯಂತ ಬಲಿಷ್ಠಗೊಳಿಸಲಿದ್ದಾರೆ. ವೇಗಿಗಳಾದ ಜಸ್‌ಪ್ರೀತ್‌ ಬುಮ್ರಾ, ಟ್ರೆಂಟ್‌ ಬೌಲ್ಟ್‌ ಎಷ್ಟೇ ಬಲಿಷ್ಠ ಬ್ಯಾಟಿಂಗ್‌ ಪಡೆಯಾದರೂ ನೆಲಕಚ್ಚುವಂತೆ ಮಾಡಬಲ್ಲರು. ಇವರಿಬ್ಬರ ಜೊತೆ ನೇಥನ್‌ ಕೌಲ್ಟರ್‌-ನೈಲ್‌ ಇಲ್ಲವೇ ಆ್ಯಡಂ ಮಿಲ್ನೆ ಸೇರಿದರೆ ಎದುರಾಳಿಗಳು ಸಂಕಷ್ಟಕ್ಕೆ ಒಳಗಾಗುವುದು ಖಚಿತ.

IPL 2021: ಬ್ಯಾಟಿಂಗ್‌ನಲ್ಲಿ ಬಲಿಷ್ಠ, ಬೌಲಿಂಗ್‌ನಲ್ಲಿ ದುಬಾರಿಯಾಗುತ್ತಾ ಆರ್‌ಸಿಬಿ..?

ದೌರ್ಬಲ್ಯ: ಮುಂಬೈನ ಅತಿದೊಡ್ಡ ದೌರ್ಬಲ್ಯ ಎಂದರೆ ಅನುಭವಿ ಸ್ಪಿನ್ನರ್‌ನ ಕೊರತೆ. ರಾಹುಲ್‌ ಚಹರ್‌ ಮೇಲೆ ಒತ್ತಡ ಬೀಳಲಿದೆ. ಪೀಯೂಷ್‌ ಚಾವ್ಲಾ ಇದ್ದಾರಾದರೂ ಅವರ ಮೇಲೆ ಹೆಚ್ಚು ವಿಶ್ವಾಸವಿಡುವುದು ಕಷ್ಟ. ಕೃನಾಲ್‌ 10ರಲ್ಲಿ 9 ಬಾರಿ ದುಬಾರಿಯಾಗುತ್ತಾರೆ. ಇನ್ನು ಜಯಂತ್‌ ಯಾದವ್‌ ಹೆಗಲಿಗೆ ಹೆಚ್ಚು ಜವಾಬ್ದಾರಿ ಹೊರಿಸುವ ಸಾಹಸವನ್ನು ನಾಯಕ ರೋಹಿತ್‌ ಮಾಡಲಾರರು.

ಬಲಿಷ್ಠ ಪ್ಲೇಯಿಂಗ್‌ ಇಲೆವೆನ್‌

ರೋಹಿತ್‌, ಡಿ ಕಾಕ್‌, ಸೂರ್ಯ, ಇಶಾನ್‌, ಪೊಲ್ಲಾರ್ಡ್‌, ಹಾರ್ದಿಕ್‌, ಕೃನಾಲ್‌, ಬೌಲ್ಟ್‌, ಬೂಮ್ರಾ, ಮಿಲ್ನೆ/ಕೌಲ್ಟರ್‌-ನೈಲ್‌, ಚಾವ್ಲಾ.