ಬೆಂಗಳೂರು(ಏ.03): 14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆರಂಭಕ್ಕೆ ಇನ್ನು ಕೇವಲ 6 ದಿನ ಮಾತ್ರ ಬಾಕಿ ಇದೆ. ಎಲ್ಲಾ 8 ತಂಡಗಳು ಅಭ್ಯಾಸ ಆರಂಭಿಸಿದ್ದು, ಪ್ರಶಸ್ತಿ ಗೆಲ್ಲಲು ಅಗತ್ಯವಿರುವ ತಂತ್ರಗಾರಿಕೆಯಲ್ಲಿ ತೊಡಗಿವೆ. ತಂಡಗಳ ಯಾವ ವಿಭಾಗದಲ್ಲಿ ಬಲಿಷ್ಠವಾಗಿವೆ, ದೌರ್ಬಲ್ಯಗಳೇನು. ನಿರೀಕ್ಷೆ ಹುಟ್ಟಿಸಿರುವ ಆಟಗಾರರು ಯಾರು ಎನ್ನುವ ವಿಶ್ಲೇಷಣೆಯನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸೋದರಸಂಸ್ಥೆ ‘ಕನ್ನಡಪ್ರಭ’ ನಿಮ್ಮ ಮುಂದಿಡುತ್ತಿದೆ. 

ಕೊಹ್ಲಿ, ಎಬಿಡಿಯೇ ಆರ್‌ಸಿಬಿ ಟ್ರಂಪ್‌ಕಾರ್ಡ್ಸ್

ಹೊಸ ಆವೃತ್ತಿ, ಹೊಸ ಆಟಗಾರರು, ಹೊಸ ಉತ್ಸಾಹ. ಆದರೂ ಆರ್‌ಸಿಬಿಯ ತಾರಾ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿ ವಿಲಿಯ​ರ್ಸ್ ಮೇಲಿನ ಭಾರ ಕಡಿಮೆಯಾಗಿಲ್ಲ. ಕಳೆದ ವರ್ಷ ಪ್ಲೇ-ಆಫ್ಸ್‌ಗೇರಿದ್ದ ಆರ್‌ಸಿಬಿ ಈ ಬಾರಿ ಕೆಲ ಟಿ20 ತಜ್ಞರನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ಚೊಚ್ಚಲ ಪ್ರಶಸ್ತಿ ಎತ್ತಿಹಿಡಿಯುವ ನಿರೀಕ್ಷೆಯಲ್ಲಿದೆ.

ಪ್ರಾಬಲ್ಯ: ಬ್ಯಾಟಿಂಗ್‌ ವಿಭಾಗದಲ್ಲಿ ಆರ್‌ಸಿಬಿ ಬಲಿಷ್ಠವಾಗಿದೆ. ದೇವದತ್‌ ಪಡಿಕ್ಕಲ್‌, ಕೊಹ್ಲಿ, ಎಬಿಡಿ ಮೊದಲ 3 ಕ್ರಮಾಂಕಗಳಲ್ಲಿ ಆಡುವುದು ಬಹುತೇಕ ಖಚಿತ. ಹೊಸದಾಗಿ ಸೇರ್ಪಡೆಗೊಂಡಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ 4ನೇ ಕ್ರಮಾಂಕ ಸಿಗಬಹುದು. 5ನೇ ಕ್ರಮಾಂಕದಲ್ಲಿ ಆಸ್ಪ್ರೇಲಿಯಾದ ಆಲ್ರೌಂಡರ್‌ ಡೇನಿಯಲ್‌ ಕ್ರಿಶ್ಚಿಯನ್‌ ಇಲ್ಲವೇ ಕೇರಳದ ಮೊಹಮದ್‌ ಅಜರುದ್ದೀನ್‌ ಆಡಬಹುದು. ವಾಷಿಂಗ್ಟನ್‌ ಸುಂದರ್‌ರ ಬ್ಯಾಟಿಂಗ್‌ ಮೇಲೆ ಈ ಬಾರಿ ನಿರೀಕ್ಷೆ ಇದೆ. ಯುವ ಆಟಗಾರರಾದ ರಜತ್‌ ಪಾಟಿದಾರ್‌, ಸೂಯಶ್‌ ಪ್ರಭುದೇಸಾಯಿಗೆ ಅವಕಾಶ ಸಿಗಬಹುದು.

IPL 2020: ಈತನನ್ನು ಕೈಬಿಟ್ಟು ಆರ್‌ಸಿಬಿ ದೊಡ್ಡ ತಪ್ಪು ಮಾಡಿತು ಎಂದ ಪಾರ್ಥಿವ್ ಪಟೇಲ್‌..!

ದೌರ್ಬಲ್ಯ: ಆರ್‌ಸಿಬಿಯ ಬೌಲಿಂಗ್‌ ಪಡೆಯಲ್ಲಿ ಅನುಭವಿಗಳ ಕೊರತೆ ಇದೆ. ಮೊಹಮದ್‌ ಸಿರಾಜ್‌, ನವ್‌ದೀಪ್‌ ಸೈನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ್ದರೂ ಟಿ20 ಮಾದರಿಯಲ್ಲಿ ಹೆಚ್ಚಿನ ಅನುಭವ ಹೊಂದಿಲ್ಲ. ಇವರಿಬ್ಬರ ಜೊತೆ ಹರ್ಷಲ್‌ ಪಟೇಲ್‌ ಸಹ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಈ ಮೂವರೂ ದುಬಾರಿಯಾಗಬಲ್ಲ ಬೌಲರ್‌ಗಳು. ನ್ಯೂಜಿಲೆಂಡ್‌ನ ಕೈಲ್‌ ಜೇಮಿಸನ್‌ ಇಲ್ಲವೇ ಆಸ್ಪ್ರೇಲಿಯಾದ ಕೇನ್‌ ರಿಚರ್ಡ್‌ಸನ್‌ ಅಥವಾ ಡೇನಿಯಲ್‌ ಸ್ಯಾಮ್ಸ್‌ಗೆ ಅವಕಾಶ ಸಿಗಲಿದೆ. ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಬೌಲಿಂಗ್‌ ಟ್ರಂಪ್‌ಕಾರ್ಡ್‌ ಆಗಲಿದ್ದು, ಪವರ್‌-ಪ್ಲೇನಲ್ಲಿ ವಾಷಿಂಗ್ಟನ್‌ ಮೇಲೆ ತಂಡ ಅವಲಂಬಿತಗೊಳ್ಳಲಿದೆ. ಮ್ಯಾಕ್ಸ್‌ವೆಲ್‌ ಬೌಲಿಂಗ್‌ನಲ್ಲಿ ಎಷ್ಟರ ಮಟ್ಟಿಗೆ ಕೊಡುಗೆ ನೀಡಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

ಬಲಿಷ್ಠ ಪ್ಲೇಯಿಂಗ್‌ ಇಲೆವೆನ್‌

ಪಡಿಕ್ಕಲ್‌, ಕೊಹ್ಲಿ, ಡಿ ವಿಲಿಯ​ರ್ಸ್, ಮ್ಯಾಕ್ಸ್‌ವೆಲ್‌, ಅಜರುದ್ದೀನ್‌, ವಾಷಿಂಗ್ಟನ್‌, ಕ್ರಿಶ್ಚಿಯನ್‌/ಜೇಮಿಸನ್‌, ಸಿರಾಜ್‌, ಸೈನಿ, ರಿಚರ್ಡ್‌ಸನ್‌, ಚಹಲ್‌.