ಚೆನ್ನೈ(ಏ.27): ಭಾರತ ಕೋವಿಡ್ 19 ಸೋಂಕಿನ ವಿರುದ್ದ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಗಿಯುತ್ತಿದ್ದಂತೆಯೇ ಆಟಗಾರರು ಸುರಕ್ಷಿತವಾಗಿ ತವರು ಸೇರಲು ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಯು ಚಾರ್ಟರ್ ಫ್ಲೈಟ್‌ ಕಳಿಸಿಕೊಡಬೇಕೆಂದು ಆಸೀಸ್‌ ಕ್ರಿಕೆಟಿಗ ಕ್ರಿಸ್ ಲಿನ್‌ ಮನವಿ ಸಲ್ಲಿಸಿದ್ದಾರೆ.

ಈಗಾಗಲೇ ಮೂವರು ಆಸೀಸ್‌ ಆಟಗಾರರು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮಧ್ಯದಲ್ಲೇ ತೊರೆದು ಆಸ್ಟ್ರೇಲಿಯಾಗೆ ವಾಪಾಸಾಗಿದ್ದಾರೆ. ಸದ್ಯ ಲಿನ್ ಸೇರಿದಂತೆ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಪ್ಯಾಟ್ ಕಮಿನ್ಸ್‌ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.

ಸೋಮವಾರ(ಏ.27) ಕ್ರಿಕೆಟ್‌ ಆಸ್ಟ್ರೇಲಿಯಾವು ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಆಟಗಾರರ ಜತೆ ಮಾತುಕತೆ ನಡೆಸಿದೆ. ಈ ಸಂದರ್ಭದಲ್ಲಿ ಆಟಗಾರರ ಅರೋಗ್ಯ ಹಾಗೂ ತವರಿನ ಪ್ರಯಾಣದ ಕುರಿತಂತೆಯೂ ಚರ್ಚೆ ನಡೆಸಿದೆ. ಇದೇ ಮುಂಬೈ ಇಂಡಿಯನ್ಸ್ ಆಟಗಾರ ಲಿನ್‌, ಪ್ರತಿ ಐಪಿಎಲ್‌ ಒಪ್ಪಂದದ ವೇಳೆ 10% ಹಣ ಕ್ರಿಕೆಟ್ ಆಸ್ಟ್ರೇಲಿಯಾಗೆ ನೀಡಲಾಗುತ್ತದೆ. ಟೂರ್ನಿ ಮುಗಿದ ಬಳಿಕ ಈ ವರ್ಷ ಆ ಹಣದಲ್ಲಿ ವಿಶೇಷ ವಿಮಾನದ ಮೂಲಕ ತಮ್ಮನ್ನು ವಾಪಾಸ್ ತವರಿಗೆ ಕರೆಸಿಕೊಳ್ಳಿ ಎಂದು ಮನವಿ ಸಲ್ಲಿಸಿದ್ದಾರೆ.

ಹೋಗೋರೆಲ್ಲಾ ಹೋಗಲಿ, ಯಾವುದೇ ಕಾರಣಕ್ಕೂ ಐಪಿಎಲ್ ನಿಲ್ಲಿಸೋಲ್ಲ: ಗಂಗೂಲಿ ಸ್ಪಷ್ಟನೆ

ಸಾಕಷ್ಟು ಜನರು ನಮಗಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ ಎನ್ನುವುದು ನಮಗೆ ಗೊತ್ತು. ಆದರೆ ನಾವು ಕಠಿಣ ಬಯೋ ಬಬಲ್ ವ್ಯವಸ್ಥೆಯಲ್ಲಿದ್ದೇವೆ. ಮುಂದಿನ ವಾರ ನಾವು ಲಸಿಕೆ ಪಡೆಯಲಿದ್ದೇವೆ. ಸರ್ಕಾರವು ಖಾಸಗಿ ವಿಮಾನದ ಮೂಲಕ ತಮ್ಮನ್ನು ವಾಪಾಸ್ ತವರಿಗೆ ಕರೆಸಿಕೊಳ್ಳುವ ವಿಶ್ವಾಸವಿದೆ ಎಂದು ಲಿನ್ ಹೇಳಿದ್ದಾರೆ.

14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್‌ ಹಂತದ ಪಂದ್ಯಗಳು ಮೇ 23ಕ್ಕೆ ಮುಕ್ತಾಯವಾಗಲಿವೆ. ಇದಾದ ಬಳಿಕ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಗಳು ನಡೆಯಲಿದ್ದು, ಮೇ 30ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್‌ ಪಂದ್ಯ ನಡೆಯಲಿದೆ.