14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ರದ್ದು ಪಡಿಸುವ ಅಥವಾ ಮುಂದೂಡುವ ಪ್ರಶ್ನೆಯೇ ಇಲ್ಲವೆಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಏ.27): ಕೋವಿಡ್‌ ಭೀತಿಯಿಂದ ಸೋಮವಾರ ಆರ್‌.ಅಶ್ವಿನ್‌ ಸೇರಿ 4 ಕ್ರಿಕೆಟಿಗರು ಐಪಿಎಲ್‌ನಿಂದ ಹೊರನಡೆದ ಬಳಿಕ, ಟೂರ್ನಿಯ ಭವಿಷ್ಯದ ಬಗ್ಗೆ ಅನುಮಾನ ಸೃಷ್ಟಿಯಾಗಿತ್ತು. ಆದರೆ ಪ್ರತಿಷ್ಠಿತ ವೆಬ್‌ಸೈಟ್‌ವೊಂದರ ಜೊತೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಐಪಿಎಲ್‌ಗೆ ಯಾವುದೇ ಆತಂಕವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಐಪಿಎಲ್‌ ಮುಂದೂಡುವ ಯಾವುದೇ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ. ಅಂದುಕೊಂಡಂತೆ ಆಟಗಾರರ ಸುರಕ್ಷತೆಗೆ ನಾವು ಮೊದಲ ಆಧ್ಯತೆ ನೀಡಿದ್ದೇವೆ. ಕೌಟುಂಬಿಕ ಕಾರಣದಿಂದಲೋ ಅಥವಾ ವೈಯುಕ್ತಿಕ ಕಾರಣದಿಂದಲೋ ಆಟಗಾರರು ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದರೆ ಏನೂ ತೊಂದರೆ ಇಲ್ಲ. ಅವರನ್ನು ಬಯೋ ಬಬಲ್‌ನಿಂದ ಕಳಿಸಿಕೊಡಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. 

ಐಪಿಎಲ್‌ 2021: ಆರ್‌ಸಿಬಿಗೆ ಕೈಕೊಟ್ಟು ದಿಢೀರ್ ತವರಿಗೆ ಮರಳಿದ ಇಬ್ಬರು ಸ್ಟಾರ್ ಕ್ರಿಕೆಟಿಗರು..!

‘ಐಪಿಎಲ್‌ಗೆ ಯಾವುದೇ ಆತಂಕವಿಲ್ಲ. ಅತ್ಯಂತ ಸುರಕ್ಷಿತ ಬಯೋ ಬಬಲ್‌ನೊಳಗೆ ಪಂದ್ಯಗಳನ್ನು ನಡೆಸಲಾಗುತ್ತಿದೆ. ಆಟಗಾರರು, ಸಹಾಯಕ ಸಿಬ್ಬಂದಿಯ ಆರೋಗ್ಯದ ಬಗ್ಗೆ ತಂಡಗಳು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿವೆ. ಟೂರ್ನಿ ನಿಗದಿಯಾಗಿರುವಂತೆಯೇ ನಡೆಯಲಿದೆ. ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದಿದ್ದಾರೆ ಸೌರವ್ ಗಂಗೂಲಿ.

ಅಶ್ವಿನ್‌ ಸೇರಿ ನಾಲ್ವರು ಐಪಿಎಲ್‌ನಿಂದ ಹೊರಕ್ಕೆ!

ನವದೆಹಲಿ: ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕಿಗೆ ಹೆದರಿ ಆರ್‌.ಅಶ್ವಿನ್‌ ಸೇರಿದಂತೆ ನಾಲ್ವರು ಕ್ರಿಕೆಟಿಗರು ಸದ್ಯ ನಡೆಯುತ್ತಿರುವ ಐಪಿಎಲ್‌ ಟೂರ್ನಿಯಿಂದ ಹೊರ ನಡೆದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸ್ಪಿನ್ನರ್‌ ಅಶ್ವಿನ್‌, ‘ತಮ್ಮ ಕುಟುಂಬ ಕೋವಿಡ್‌ ವಿರುದ್ಧ ಹೋರಾಡುತ್ತಿದೆ. ಈ ಸಂದರ್ಭದಲ್ಲಿ ಅವರೊಂದಿಗಿರಬೇಕು’ ಎಂದು ತಿಳಿಸಿ ಹೊರ ನಡೆದಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೆ ತಂಡಕ್ಕೆ ವಾಪಸಾಗುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಆಸ್ಪ್ರೇಲಿಯಾದ ಆಟಗಾರ ಆ್ಯಂಡ್ರೂ ಟೈ (ರಾಜಸ್ಥಾನ ರಾಯಲ್ಸ್‌), ಲಾಕ್‌ಡೌನ್‌ಗೆ ಹೆದರಿ ಆಸ್ಪ್ರೇಲಿಯಾಗೆ ಹಿಂದಿರುಗಿದರೆ, ಆರ್‌ಸಿಬಿಯ ಕೇನ್‌ ರಿಚರ್ಡ್‌ಸನ್‌ ಹಾಗೂ ಆ್ಯಡಂ ಜಂಪಾ ‘ವೈಯಕ್ತಿಕ ಕಾರಣ’ ನೀಡಿ ಐಪಿಎಲ್‌ನಿಂದ ಹಿಂದೆ ಸರಿದು ತವರಿನತ್ತ ಹೊರಟಿದ್ದಾರೆ. ರಿಚರ್ಡ್‌ಸನ್‌ ಹಾಗೂ ಜಂಪಾ ಸಹ ಕೋವಿಡ್‌ಗೆ ಹೆದರಿ ಐಪಿಎಲ್‌ನಿಂದ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ.