IPL 2020: ರಾಜಸ್ಥಾನಕ್ಕೆ RCB ಮಾಜಿ ಕ್ರಿಕೆಟಿಗ ಕೋಚ್..!
ರಾಜಸ್ಥಾನ ರಾಯಲ್ಸ್ ತಂಡ ಮುಂಬರುವ 2020 ಐಪಿಎಲ್ ಟೂರ್ನಿಯಲ್ಲಿ ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಇದರ ಭಾಗವಾಗಿ ನೂತನ ಕೋಚ್ ನೇಮಿಸಿಕೊಂಡಿದೆ. ಒಂದು ಕಾಲದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಇವರು, ಇದೀಗ ರಾಯಲ್ಸ್ ತಂಡಕ್ಕೆ ಗುರುವಾಗಿದ್ದಾರೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ಮುಂಬೈ[ಅ.22]: ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ತಂಡ ಮುಂದಿನ 3 ವರ್ಷಗಳ ಅವಧಿಗೆ ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಂಡ್ರೂ ಮೆಕ್‌ಡೋನಾಲ್ಡ್‌ರನ್ನು ಪ್ರಧಾನ ಕೋಚ್ ಆಗಿ ನೇಮಕ ಮಾಡಿಕೊಂಡಿದೆ.
ಮೆಕ್‌ಡೋನಾಲ್ಡ್ 2009ರ ಐಪಿಎಲ್ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಹಾಗೂ 2012,2013ರಲ್ಲಿ ಆರ್‌ಸಿಬಿ ಪರ ಆಡಿದ್ದರು. ಆರ್‌ಸಿಬಿ ಬೌಲಿಂಗ್ ಕೋಚ್ ಆಗಿಯೂ ಮೆಕ್‌ಡೋನಾಲ್ಡ್ ಕಾರ‍್ಯನಿರ್ವಹಿಸಿದ್ದಾರೆ.
38 ವರ್ಷ ವಯಸ್ಸಿನ ಮೆಕ್‌ಡೋನಾಲ್ಡ್ ಲೀಸೆಸ್ಟರ್‌ಶೈರ್, ವಿಕ್ಟೋರಿಯಾ ಮತ್ತು ಮೆಲ್ಬರ್ನ್ ರೆನೆಗೇಡ್ಸ್ ತಂಡಗಳ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆಸ್ಪ್ರೇಲಿಯಾ ಪರ ಅವರು 4 ಟೆಸ್ಟ್ ಆಡಿದ್ದರು.
IPL 2020: ಹೊಸ ತಂಡದತ್ತ ಮುಖಮಾಡಿದ ರಹಾನೆ..?
ಐಪಿಎಲ್ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ತಾನ ರಾಯಲ್ಸ್, ಆ ಬಳಿಕ ಕಳೆದ 11 ವರ್ಷಗಳಿಂದಲೂ ಮತ್ತೊಮ್ಮೆ ಪ್ರಶಸ್ತಿ ಗೆಲ್ಲಲು ಯಶಸ್ವಿಯಾಗಿಲ್ಲ. ಶೇನ್ ವಾರ್ನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ 2008ರಲ್ಲಿ ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಜೋಫ್ರಾ ಆರ್ಚರ್ ಅವರಂತಹ ಸ್ಟಾರ್ ಆಟಗಾರರಿದ್ದರೂ ರಾಜಸ್ಥಾನ ತಂಡಕ್ಕೆ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಶತಾಯಗತಾಯ ಕಪ್ ಗೆಲ್ಲಲು ರಾಜಸ್ಥಾನ ತಂಡ ಹೊಸ ರಣತಂತ್ರ ರೂಪಿಸಿದೆ.