ಯಶಸ್ವಿ ಜೈಸ್ವಾಲ್ ಮಾರಿದ್ದು ಪಾನಿಪುರಿ, ಪಾಕ್‌ ವಿರುದ್ಧ ಹೊಡೆದಿದ್ದು ಸೆಂಚುರಿ..!

ಕಷ್ಟವನ್ನೇ ತನ್ನ ಮೆಟ್ಟಿಲಾಗಿ ಬಳಸಿಕೊಂಡು ಮೇಲೆರಿದವ ಯಶಸ್ವಿ ಜೈಸ್ವಾಲ್. ಭಾರತದ ಭವಿಷ್ಯದ ಆಶಾಕಿರಣ. ಪ್ರಸ್ತುತ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಮಿಂಚುತ್ತಿರುವ ಯಶಸ್ವಿ ಬೆಳೆದು ಬಂದ ಹಾದಿಯೇ ಒಂದು ಸ್ಫೂರ್ತಿಯ ಕತೆ. ಪಾನಿಪೂರಿ ಮಾರಿ ಜೀವನ ಮಾಡುತ್ತಿದ್ದ ಹುಡುಗ ಇಂದು ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಈತನ ಹಿನ್ನಲೆಯ ಒಂದು ಒಳನೋಟ ಇಲ್ಲಿದೆ ನೋಡಿ...

inspiration story on Indian Under 19 cricketer Yashasvi Jaiswal by ramakanth aryan

ರಮಾಕಾಂತ್ ಆರ್ಯನ್, ಸುವರ್ಣ ನ್ಯೂಸ್

ಬೆಂಗಳೂರು: ಅದು ಮುಂಬೈನ ಕಲಬಾದೇವಿ ಅನ್ನೋ ಸ್ಥಳ. ಹಳೆಯ ಪುಸ್ತಕ, ಬಳಸಿದ ಟೈಪ್ ರೈಟರ್‌ಗಳನ್ನ ಮಾರುವ ಸಣ್ಣ ಸಣ್ಣ ಗಲ್ಲಿ. ಅದರ‌ ಮಧ್ಯದಲ್ಲೊಂದು ಸಣ್ಣ ಹಾಲಿನ ಬೂತ್. ಅದರಲ್ಲಿ ಬಳಲಿ ಬೆಂಡಾಗಿದ್ದ ಹುಡುಗ. ಸತ್ತೇ ಹೋಗುವಂತ ಹೊಟ್ಟೆ ಹಸಿವಿನ ಮೇಲೆ ನೀರನ್ನಷ್ಟೇ ಸುರುವಿಕೊಂಡು,ಆಗ ತಾನೆ ಮಲಗಿದ್ದ. ಸರಿಹೊತ್ತು ಜಾರಿತ್ತು. ಬೂತ್ ಮಾಲೀಕ ಬಂದು ಮುಖದ ಮೇಲೆ ತಣ್ಣೀರೆರಚಿ, ಅನಾಮತ್ತು ರಸ್ತೆಗೆ ಬಿಸಾಡಿಬಿಡುತ್ತಾನೆ. ಪುಟ್ಟ ಲಗ್ಗೇಜ್ ಬ್ಯಾಗ್ ಮುಖಕ್ಕೆ ಬೀಳುವಂತೆ ಎಸೆದಿರುತ್ತಾನೆ. ಹನ್ನೊಂದೇ ವರ್ಷದ ಕಂದನಂತ ಹುಡುಗ ಅವನು. ನಿದ್ರೆಗಣ್ಣಲ್ಲಿ ಮುಂಬೈನ ಬೀದಿಯಲ್ಲಿ ಅಂಗಾತ ಬಿದ್ದಿರುತ್ತಾನೆ. ಅವತ್ತಿನ ಮಟ್ಟಿಗೆ ವಿಧಿ ನರಕಕ್ಕಿಂತ ಕ್ರೂರಿ. ಯಾವ ಕಡೆ‌ ನೋಡಿದರೂ ಕತ್ತಲು. ಹೇಗೋ ಸಾವರಿಸಿಕೊಳ್ಳುತ್ತಾನೆ. ಬೀದಿ ಬದಿಯಲ್ಲಿ ಕುಳಿತೇ ಸೂರ್ಯನ ಮೊದಲ ಕಿರಣಕ್ಕೆ ಕಾದಿರುತ್ತಾನೆ. ಸೀದ ನಡೆದು ಬಂದಿದ್ದು ಅದೇ ಮುಂಬೈನ ಆಝಾದ್ ಮೈದಾನಕ್ಕೆ.

inspiration story on Indian Under 19 cricketer Yashasvi Jaiswal by ramakanth aryan

ಲೈಫ್‌ನಲ್ಲಿ ನೀನು ಏನೂ ಆಗೊಲ್ಲ ಎನಿಸಿಕೊಂಡವರು ಶಾರ್ದೂಲ್ ಕಥೆಯನ್ನೊಮ್ಮೆ ಓದಿ

Muslim United club ನ ಮಾಲೀಕರನ್ನ ಕಾಡಿ ಬೇಡಿದ ಅಪ್ಪನ ಗೆಳೆಯ, groundsman ನ ಟೆಂಟ್‌ನಲ್ಲಿ ಉಳಿದುಕೊಳ್ಳಲು ಅವಕಾಶ ಗಿಟ್ಟಿಸಿಕೊಡುತ್ತಾರೆ. ಒಂದೇ ಟೆಂಟ್‌, ಎರಡು ಜೀವ. ಕಳೆದದ್ದು ಮೂರು ಬೇಸಿಗೆ, ಮೂರು ಮಳೆಗಾಲ, ಮೂರು ಚಳಿಗಾಲ. ಹುಡುಗ, ಅಪ್ಪ ಅಮ್ಮ ಇದ್ದೂ ಮುಂಬೈನಲ್ಲಿ ಅನಾಥನಾಗಿಬಿಟ್ಟಿದ್ದ. ಹಾಗೆ ಅನಾಥನಾದ ಹುಡುಗ ಯಶಸ್ವಿ ಜೈಸ್ವಾಲ್. ಪಾಕಿಸ್ತಾನ ವಿರುದ್ಧ Under 19 World Cup ನಲ್ಲಿ ಸೆಂಚುರಿ ಚಚ್ಚಿ ಭಾರತವನ್ನ ಫೈನಲ್ ಗೇರಿಸಿದ್ದಾನೆ. ಇದೇ ಫೆಬ್ರವರಿ 4 ರಂದು. ಎಂಥ ಉತ್ತರ. ಹಾಲಿನ್ ಬೂತ್ ಓನರ್ ಅವನನ್ನ ಮಾತ್ರ ಎಸೆದಿದ್ದ, ಅವನ ಕನಸುಗಳನ್ನಲ್ಲ.

ಪಾನಿಪೂರಿ ಮಾರುತ್ತಿದ್ದ ಹುಡುಗ ಈಗ ಟೀಂ ಇಂಡಿಯಾ ಕ್ರಿಕೆಟಿಗ

ಜೈಸ್ವಾಲ್ ಉತ್ತರ ಪ್ರದೇಶದ ಭದೋಹಿಯವನು. ಅಪ್ಪ ಪಾನಿಪುರಿ ವ್ಯಾಪಾರಿ. ಮಗನಿಗೆ ಟೀಂ ಇಂಡಿಯಾಗೆ ಆಡಬೇಕು ಎನ್ನುವ ಆಸೆ. ಅಕ್ಕಪಕ್ಕದವರನ್ನ ಕೇಳಿದ್ದಕ್ಕೆ ಮುಂಬೈಗೆ ಕರೆದುಕೊಂಡು ಹೋಗಿ ಎಂದಿರುತ್ತಾರೆ. ಯಾವುದೋ ಪರಿಚಯದ ಮೇಲೆ ಕೇವಲ ಮಲಗಲಿಕ್ಕೆ ಮಾತ್ರ ಹಾಲಿನ ಬೂತಿನ ಮಾಲೀಕನಿಗೆ ಒಪ್ಪಿಸಿರುತ್ತಾರೆ. ಏನೂ ಕೆಲಸ ಮಾಡಲ್ಲ ಎಂಬಷ್ಟೇ ಕಾರಣಕ್ಕೆ ಮಾಲೀಕ ಬಿಸಾಕಿರುತ್ತಾನೆ.

inspiration story on Indian Under 19 cricketer Yashasvi Jaiswal by ramakanth aryan

'ಸೂಪರ್' ಓವರ್ ಗೆಲುವಿನ ರೂವಾರಿ, ಕಲ್ಲು ಮುಳ್ಳಿನ ಹಾದಿಯಲ್ಲಿ ಶಮಿ ಸವಾರಿ!

ಆ ಟೆಂಟ್‌ನಲ್ಲಿ ಇವನು ಪಟ್ಟ ಕಷ್ಟದ ಒಂದೇ ಒಂದು ಅಕ್ಷರವೂ, ಅಪ್ಪ ಅಮ್ಮನಿಗೆ ಗೊತ್ತಾಗದಂತೆ ನೋಡಿಕೊಂಡಿರುತ್ತಾನೆ. ಕ್ರಿಕೆಟ್ ಬಿಟ್ಟು ವಾಪಸ್ ಬಾ ಎಂದು ಬಿಟ್ಟರೆ ಗತಿ ಏನು ಅಂತ. ಆಗಾಗ ಅಪ್ಪ ಸ್ವಲ್ಪ ಹಣ ಕಳಿಸುತ್ತಿರುತ್ತಾರೆ. ಅದು ಯಾವುದಕ್ಕೂ ಸಾಲದಂತ ದುಡ್ಡು. ಎಷ್ಟೋ ದಿನ ಹಸಿದು ಬಂದು ಟೆಂಟ್ ನಲ್ಲಿ ಏನೂ ಇಲ್ಲದೆ ಮಲಗಿದ್ದಾನೆ. ಆದರೆ ಮ್ಯಾಚ್ ನಲ್ಲಿ ಸೆಂಚುರಿ ಹೊಡೆಯದೇ ಬಂದು ಮಲಗಿದ ನೆನಪು ಅವನಿಗಿಲ್ಲ. ಅವನ ವಯೋಮಿತಿ ಹುಡುಗರಲ್ಲಿ ಅವನು ಬಾರಿಸಿರುವ ಸೆಂಚುರಿ ಜಸ್ಟ್ 49. ಇಂತ ಇನ್ನೊಬ್ಬನ ಬಗ್ಗೆ ನಾನು ಕೇಳಿಲ್ಲ. ಅವನ ವಯಸಿಗಿಂತ ದೊಡ್ಡವರ ತಂಡದ ಹುಡುಗರು ಇವನನ್ನ ಕರೆಯುತ್ತಿದ್ರು. ಬಾರೋ, ಒಂದು ಸೆಂಚುರಿ ಹೊಡಿ, 200 ರುಪಾಯಿ ಕೊಡ್ತೀನಿ ಅಂತಿದ್ರು. ಸೀದ ಹೋದವನೇ ಸೆಂಚುರಿ ಚಚ್ಚಿ 200 ರುಪಾಯಿ ಜೇಬಿಗಿಳಿಸುತ್ತಿದ್ದ. ಅಷ್ಟೂ ಹಣಕ್ಕೂ ಹೊಟ್ಟೆ ತುಂಬ ಊಟ ಮಾಡಿಬಿಡುತ್ತಿದ್ದ. ಮುಂದಿನ ಊಟದ ಬಗ್ಗೆ ಅವನಿಗೆ ಗೊತ್ತಿಲ್ಲ.

inspiration story on Indian Under 19 cricketer Yashasvi Jaiswal by ramakanth aryan

ಮುಂಬೈನ ಅದೇ ಅಝಾದ್ ಮೈದಾನದಲ್ಲಿ ರಾಮ್ ಲೀಲಾ ಶುರುವಾದರೆ ಯಶಸ್ವಿ ಜೈಸ್ವಾಲ್ ಪಾನಿಪುರಿ ಮಾರುತ್ತಿದ್ದ. ದೇವರ ಹತ್ತಿರ ಏನು ಕೇಳುತ್ತಿದ್ದ ಗೊತ್ತಾ? ದೇವರೇ, ನನ್ನ ಟೀಮ್ ಮೇಟ್ಸ್ ಯಾರೂ ನಾನು ಪಾನಿಪುರಿ ಮಾರೋದನ್ನ ನೋಡದೇ ಇರಲಿ ಅಂತ. ವಯೋಸಹಜ ಸಂಕೋಚವೋ? ವಯಸ್ಸು ಮೀರಿದ ಸ್ವಾಭಿಮಾನವೋ ಗೊತ್ತಿಲ್ಲ. ಒಮ್ಮೊಮ್ಮೆ ಇವನ ತಂಡದ ಸಹ ಆಟಗಾರರು ಇವನ ಹತ್ತಿರವೇ ಪಾನಿಪುರಿಗೆ ಬಂದುಬಿಡುತ್ತಿದ್ದರು. ಸಂಕೋಚದಿಂದಲೇ ಪಾನಿಪುರಿ ಕೊಡುತ್ತಿದ್ದ. ಹೀಗೇ ಪಾನಿಪುರಿ ಮಾರಿಕೊಂಡು ಆಡುತ್ತಿದ್ದ ಜೈಸ್ವಾಲ್, ಲೋಕಲ್‌ ಕೋಚ್ ಜ್ವಾಲಾ‌ ಸಿಂಗ್ ಕಣ್ಣಿಗೆ ಬಿದ್ದ. ಇವನ‌ ಕಥೆ ಕೇಳಿದ, ಎ ದರ್ಜೆ ಬೌಲರ್ ಗಳಿಗೆ ಬಾರಿಸುತ್ತಿದ್ದ ಆಟ ನೋಡಿದ. ಜೈಸ್ವಾಲ್‌ನಲ್ಲಿ ತನ್ನನ್ನ ತಾನೇ ಕಂಡ. ಜ್ವಾಲಾ‌ಸಿಂಗ್ ಕೂಡಾ ಉತ್ತರಪ್ರದೇಶದವರೇ. ಬಡವ. ಕ್ರಿಕೆಟರ್ ಆಗಬೇಕೆಂದು ಮುಂಬೈಗೆ ಬಂದವರು. ಹುಡುಗನನ್ನ ರೆಡಿ ಮಾಡಬೇಕೆಂದು ಪಣ ತೊಟ್ಟರು.

ಕ್ರಿಕೆಟ್ ಜಗತ್ತಿನ ಮಣ್ಣಿನ ಹುಡುಗ: ಬೌಲಿಂಗ್‌ಗೆ ನಿಂತರೆ ಸೈನಿ ಹಸಿದ ಗಿಡುಗ!

ಹೀಗೇ ರೆಡಿಯಾದ ಹುಡುಗ ಮುಂಬೈ ಅಂಡರ್ 19 ಕೋಚ್ ಸಂತೋಷ್ ಸಾಮಂತ್ ಕಣ್ಣಿಗೆ ಬಿದ್ದ. ಮುಂದಿನದನ್ನ ಚರಿತ್ರೆ ಮಾತ್ರ ನೋಡಿಕೊಂಡಿತು. ಸಂತೋಷ್ ಇವನ ಬಗ್ಗೆ ತುಂಬ ಅಭಿಮಾನದಿಂದ ಹೇಳಿದ್ದೇನು ಗೊತ್ತಾ. ಎಲ್ಲ ಬ್ಯಾಟ್ಸ್ ಮನ್ ಗಳು ಚೆಂಡಿನ ಮೇಲೆ ಮಾತ್ರ ನಿಗಾ ಇಟ್ಟು ಆಡುತ್ತಾರೆ. ತುಂಬಾ ಬೇಗ, ಬೇಡದ ಶಾಟ್ಸ್ ಗಳಿಗೆ ಮುಂದಾಗಿ ಔಟ್ ಆಗಿಬಿಡುತ್ತಾರೆ. ಜೈಸ್ವಾಲ್ ಹಾಗಲ್ಲ. ಬೌಲರ್ ಎಸೆಯುವ ಬಾಲ್ ಜೊತೆಗೆ ಮೈಂಡ್ ಕೂಡಾ ರೀಡ್ ಮಾಡುತ್ತಾನೆ. ಅವನಿಗದು ದೇವರು ಕೊಟ್ಟ ಕೊಡುಗೆ. ಅವನ ಹತ್ತಿರ ಇವತ್ತಿಗೂ ಸ್ಮಾರ್ಟ್ ಫೋನ್ ಇಲ್ಲ. Social media ಗೊತ್ತೇ ಇಲ್ಲ. ಅಷ್ಟು ಸಾಕು ಏಕಾಗ್ರತೆಗೆ. ಅದಕ್ಕೆ ಅವನು ಹಾಗೆ ಆಡುತ್ತಿರೋದು ಅಂತ. ಇರಲಿ. ಈಗ ವರ್ಲ್ಡ್ ಕಪ್ ಫೈನಲ್ ಗೇರಿದ್ದಾನೆ. ಅವನ ಆಟಕ್ಕೆ ಅದೊಂದು ಕಿರೀಟ ಈಗ್ಗೆ ಸಿಗಲಿ. ನಿನ್ನ ಕಷ್ಟಗಳನ್ನ ಪ್ರೀತಿಸುತ್ತೇನೆ. ಯಾರಿಗೂ ಬರದಿರಲಿ ಅಷ್ಟೇ ಜೈಸ್ವಾಲ್.

Latest Videos
Follow Us:
Download App:
  • android
  • ios