ರಮಾಕಾಂತ್ ಆರ್ಯನ್, ಸುವರ್ಣ ನ್ಯೂಸ್

ಬೆಂಗಳೂರು: ತುಂಬ ಜನ ನಿಮ್ಮನ್ನ ಅಣಕಿಸಿದ್ದರೆ, ಸುಖಾ ಸುಮ್ಮನೆ ನಕ್ಕಿದ್ದರೆ, ಬೇಡದ ವಿಷಯ ತೆಗೆದು ಮೂದಲಿಸಿದ್ದರೆ, ಜೀವನದಲ್ಲಿ ನೀನು ಏನೂ ಆಗಲ್ಲ‌ ಎಂದು, ತೀರ್ಪೇ ಬರೆದು ಬಿಟ್ಟಿದ್ದರೆ ಒಮ್ಮೆ ಶಾರ್ದೂಲ್ ಠಾಕೂರ್ ನನ್ನ ಓದಿಕೊಂಡು ಬಿಡಿ.

ಮುಂಬೈನವನಾದರೂ ಮುಂಬೈ ಹುಡುಗನಂತಲ್ಲದವನು. ದಕ್ಷಿಣ ಆಫ್ರಿಕಾ ಪ್ರವಾಸವನ್ನ ಮುಗಿಸಿದ್ದ ಟೀಂ ಇಂಡಿಯಾ ಆಗಷ್ಟೇ ಎಮಿರೇಟ್ಸ್ ಫ್ಲೈಟ್ ನಿಂದ ಮುಂಬೈಗೆ ಬಂದು ಇಳಿದಿತ್ತು. ಒಬ್ಬೊಬ್ಬ ಆಟಗಾರರು, ಒಂದೊಂದು ದಿಕ್ಕಾದರು. ಶಾರ್ದೂಲ್ ಸೀದ ಎಲ್ಲಿಗೆ ಬಂದಿದ್ದ ಗೊತ್ತ. ಅಂಧೇರಿ ರೈಲ್ವೇ ಸ್ಟೇಷನ್ ಟಿಕೆಟ್ ಕೌಂಟರ್ ಬಳಿ. ಪಲ್ಘಾರ್ ಗೆ ಒಂದು ಟಿಕೆಟ್ ಕೊಡಿ ಎಂದಿದ್ದ. ಎಸ್ ಅವನು ಪಲ್ಘಾರ್ಗೆ ಹೋಗಬೇಕಿತ್ತು. ಇದೇ ಪಲ್ಘಾರ್ ನಿಂದ ಮುಂಬೈಗೆ, ಒಂದು ಜೀವನಕ್ಕೆ ಸಾಕಾಗುವ ಪ್ರಯಣ ಮಾಡಿದ್ದವನು. ಪ್ಲೈನ್ ನ ಬ್ಯುಸಿನೆಸ್ ಕ್ಲಾಸ್‌ನಿಂದ ನೇರ ರೈಲ್ ನ ಫರ್ಸ್ಟ್ ಕ್ಲಾಸ್ ಗೆ ಹತ್ತಿದ್ದ. ಅವನು, ಅವನ ಜೀವನದ ಕೆಲ ಘಟನೆಗಳಿಗೆ ಉತ್ತರ ಕೊಡಬೇಕಿತ್ತಷ್ಟೇ. ಉತ್ತರವೆಂದರೆ ಹಾಗಿರಬೇಕು.

ನಿಮಗೆ Football ಇಷ್ಟ ಇಲ್ಲದೇ ಇದ್ರೂ ಸುನಿಲ್ ಚೆಟ್ರಿ ಬಗ್ಗೆ ಓದಲೇಬೇಕು..!

ಮುಂಬೈನಲ್ಲಿ ಕ್ರಿಕೆಟ್ ಕಲಿಯುವುದಕ್ಕೆ ಪ್ರತೀ ದಿನ 115 ಕಿ.ಮೀ ಬರುತ್ತಿದ್ದ. ಎಂತೆಂಥ ಪ್ರಯಾಣಿಕರು. ಎಂತೆಂಥ ಮೂದಲಿಕೆ ಗೊತ್ತಾ? ಏನೋ ಡುಮ್ಮ, ಕ್ರಿಕೆಟ್ ಆಡ್ತೀಯೇನೋ? ಅಂತ ಒಬ್ಬ. ಟೈಂ ಪಾಸ್ ಮಾಡ್ತೀಯೇನೋ ಅಂತ ಇನ್ನೊಬ್ಬ. ಹುಡುಗ ಮನಸ್ಸಲ್ಲೇ ಇಂಡಿಯಾಗೆ ಆಡುತ್ತಿದ್ದ. ಆಡಿಕೊಳ್ಳುವವರು ಮಾತು ನಿಲ್ಲಿಸುತ್ತಿರಲಿಲ್ಲ. ಕ್ರಿಕೆಟ್ ಭಕ್ತನೇ‌ ಆಗಿದ್ದ ಶಾರ್ದೂಲ್, ವಿಚಲಿತನಾಗಿರಲಿಲ್ಲ. ಗುರಿ ಮುಟ್ಟಿದ್ದ.

ಆಫ್ರಿಕಾ ಪ್ರವಾಸ ಮುಗಿಸಿ ವಿಮಾನದಲ್ಲಿ ಬಂದಿಳಿದ ಶಾರ್ದೂಲ್ ಮಾಡಿದ್ದೇನು ಗೊತ್ತಾ..?

ಆಫ್ರಿಕಾ ವಿರುದ್ಧ ಆಡಿದ ಮೇಲೆ ಟ್ರೈನ್ ಹತ್ತಿದನಲ್ಲ. ಆಗ ನೋಡಬೇಕು ಅಲ್ಲಿ ಕಥೆ. ಇವನೇನಾ ಶಾರ್ದೂಲ್. ಕಾಲೇಜು ಹುಡುಗರು, ಗೂಗಲ್‌ ನಲ್ಲಿ ಇವನ ಇಮೇಜ್ ಹುಡುಕುತ್ತಿದ್ದರು. ಸೆಲ್ಫಿ ಕೇಳಿದರು. ಶಾರ್ದೂಲ್ ಇಷ್ಟೇ ಹೇಳಿದ್ದ. ಪಲ್ಘಾರ್ ಬರಲಿ ಕೊಡುತ್ತೇನೆ. ಅಹಂಕಾರದಿಂದಲ್ಲ. ಮನದಲ್ಲೇ ತುಂಬಿದ ಆನಂದಭಾಷ್ಪಗಳಿಗೆ ಉತ್ತರಿಸಲಾಗದೇ, ಸಾಗ ಹಾಕಿದ್ದ ಅಷ್ಟೇ. ಇವನೇ ಅಲ್ವೇನೋ ನಮ್ಮ ಜೊತೆ ಟ್ರೈನ್ ನಲ್ಲಿ ಬರುತ್ತಿದ್ದವನು. ಇಂಡಿಯಾಗೆ ಆಡಿಬಿಟ್ನಲ್ಲೋ? ಅಂತ ಇನ್ನೊಬ್ಬ. ಶಾರ್ದುಲ್ ಪಟ್ಟ ಅಷ್ಟೂ ಕಷ್ಟ ನೆನಪಾಗಿ ಅದೇಕೋ ಕಲ್ಲಾಗಿ ನಿಂತುಬಿಟ್ಟಿದ್ದ. ನಿಮ್ಮ ಜೀವನದಲ್ಲೂ ಇಂತಹವು ನಡೆದಿರುತ್ತವೆ. ಕಲ್ಲಾಗಿ ಬಿಡುವಂತಹವು. ಈಗ ನೆನಪಾಗಿರುತ್ತದೆ. ಸುಮ್ಮನೆ ನೆನಪಾಗಿ, ಒಮ್ಮೆ ಕರಗಿಬಿಡಿ. ಕಣ್ಣಹನಿಗಳಿಗೂ ಗೊತ್ತಾಗದಂತೆ.

ಕ್ರಿಕೆಟ್ ಜಗತ್ತಿನ ಮಣ್ಣಿನ ಹುಡುಗ: ಬೌಲಿಂಗ್‌ಗೆ ನಿಂತರೆ ಸೈನಿ ಹಸಿದ ಗಿಡುಗ!

ಚೆನ್ನಾಗಿ ಆಡಿದ್ದ ಹೊರತಾಗಿಯೂ ಶಾರ್ದೂಲ್ ಅಂಡರ್ 19 ಮುಂಬೈಗೆ ಸೆಲೆಕ್ಟ್ ಆಗಲ್ಲ. ಆದರೆ ಅವನ ಪ್ರಬುದ್ಧತೆ ಮತ್ತು ಯೋಚನಾ‌ ಲಹರಿ ಅಂಡರ್ -19 ಮೀರಿತ್ತು. ಅವನಿಗೆ ನಿತ್ಯ ಒಂದು ಸೋಲು ಬೇಕಿತ್ತು. ನಾಳೆ ಅದೇ ಸೋಲಿಗೆ ಮುಟ್ಟಿ ನೋಡಿಕೊಳ್ಳುವಂತ ಉತ್ತರ ಕೊಡುತ್ತಿದ್ದ. ಹೆಸರೇ ಶಾರ್ದೂಲ. ಡುಮ್ಮ ಎಂದವರಿಗೆ ದೇಹವನ್ನ ಹುರಿಗೊಳಿಸಿ ತೋರಿಸಿದ್ದ. ರೆಡ್ ಬಾಲ್‌ನಲ್ಲಿ ಚೆನ್ನಾಗಿ ಆಡ್ತಾನೆ. ವೈಟ್ ಬಾಲ್‌ನಲ್ಲಿ ಅಷ್ಟು ಬೌಲಿಂಗ್ ಬರಲ್ಲ ಅಂದಿದ್ದರು. ದಿನದ‌ ಎರಡು ಭಾಗವನ್ನ ಕೆಂಪು ಮತ್ತು ಬಿಳಿ ಎಂದು ಎತ್ತಿಟ್ಟು, ಪಳಗಿದ್ದ.

ಮುಂಬೈನಲ್ಲಿ ಆಗ ಹೆಚ್ಚು T-20 ಮ್ಯಾಚ್ ಗಳೇನೂ ನಡೆಯುತ್ತಿರಲಿಲ್ಲ. ಮ್ಯಾಚ್ ಇದ್ದರೂ ನಾಲ್ಕು ಓವರ್ ಮಾತ್ರ. ಅದೂ ರೆಡ್ ಬಾಲ್ನಲ್ಲಿ. ವಿಜಯ್ ಹಜಾರೆ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಾತ್ರ ಶಾರ್ದೂಲ್‌ಗೆ ವೈಟ್ ಬಾಲ್ ಸಿಗುತ್ತಿತ್ತು. ಅದಷ್ಟೇ ಲಾಭ. ಪ್ರಾಕ್ಟೀಸ್ ಟೈಮ್‌ನಲ್ಲಿ ಮ್ಯಾಚ್ ಸಂದರ್ಭಗಳನ್ನ ಊಹಿಸಿಕೊಂಡು ನೆಟ್ಸ್ ನಲ್ಲಿ ಬೌಲ್‌ ಮಾಡುತ್ತಿದ್ದ. ಮಿಡ್ಲ್ ಸ್ಟಂಪ್ ಅನ್ನ ಬೇರೆ ಬೇರೆ ಆ್ಯಂಗಲ್ ಗಳಲ್ಲಿ‌ ಉಡಾಯಿಸುವುದು ಅವನಿಗೆ ಕರಗತ. ಜೀವನದ ಕೆಲವು ಸಂದರ್ಭಗಳಿಗೆ ನಾವು ಹಾಗೆಯೇ ಊಹಿಸಿಯೇ ಸಿದ್ಧರಾಗಬೇಕು. ಕಷ್ಟಗಳನ್ನ ವಿಕೆಟ್‌ನಂತೆ ಉಡಾಯಿಸಬಹುದು.

ಶಾರ್ದೂಲ್‌ ಚಿಕ್ಕವನಿದ್ದಾಗ ಹೇಳಿದ‌ ಮಾತನ್ನ ಕೇಳಿದವನಲ್ಲ. ಆದರೆ ಸಂದರ್ಭಗಳು ಕೇಳುವಂತೆ ಮಾಡಿದ್ದವು. ಕೋಚ್ ನೊಂದಿಗೆ ವಾದಕ್ಕಿಳಿದು ಬಿಡುತ್ತಿದ್ದ. ಆಮೇಲೆ ಗೊತ್ತಾಗುತ್ತಿತ್ತು. ಕೋಚ್ ಸರಿ, ತಾನೇ‌ ಪಂದ್ಯ ಸೋಲಿಸಿದ್ದೆಂದು. ಬೌಲಿಂಗ್ ಮಾಡುವುದಕ್ಕೆ ಫಿಸಿಕ್ ಓಕೆ. ಆದರೆ ಫೀಲ್ಡಿಂಗ್ ಮಾಡುವುದಕ್ಕೆ ಓಕೆ ಇರಲಿಲ್ಲ. ಕೋಚ್ ಹೇಳಿದಾಗ ಅರ್ಥವಾಗಿರಲಿಲ್ಲ.‌ಕೆಲವು ಸೋಲುಗಳು ಅರ್ಥ‌ಮಾಡಿಸಿದ್ದವು. ಇವತ್ತಿಗೂ ಅವನ‌ ಸ್ಕೂಲ್‌ ಕೋಚ್ ದಿನೇಶ್ ಲಾಡ್, ಒಂದು ಕರೆ‌ಮಾಡಿ ಶಾರ್ದೂಲ್ ಕ್ರಿಕೆಟ್ ತಪ್ಪುಗಳನ್ನ ಸರಿ ಮಾಡುತ್ತಾರೆ. ಜೀವದ ಗೆಳೆಯ ಅಭಿಷೇಕ್ ನಾಯರ್ ಬೈದೇ‌ ಬುದ್ಧಿ ಹೇಳುತ್ತಾನೆ. ಪಿಚ್ ಅನ್ನ ಬೇರೆ ಬೇರೆ ಆ್ಯಂಗಲ್ ಗಳಲ್ಲಿ ಹೇಗೆ ಲಾಭ ಮಾಡಿಕೊಳ್ಳಬಹುದು ಎಂಬುದನ್‌ ವಾಸಿಂ ಜಾಫರ್ ನಿಂತು ಹೇಳಿಕೊಟ್ಟಿದ್ದ. 

ಕಡಲೂರಿಗೆ ಮುತ್ತಾದ ರಾಹುಲ್, ಯಶಸ್ಸಿನ ಹಿಂದಿವೆ ನೂರಾರು ಸವಾಲ್

ಬದುಕು ಹಾಗೆ ಕೆಲವು ತಿರುವುಗಳಲ್ಲಿ ಬೇಕೆಂದೇ‌ ದೇವರ ಪ್ರತಿಮೆ ನಿಲ್ಲಿಸಿರುತ್ತೆ. ಕೈ ಮುಗಿದು ಕೇಳಿರಬೇಕಷ್ಟೇ. ಇವತ್ತು ಡೆತ್ ಓವರ್ ಸ್ಪೆಷಲಿಸ್ಟ್ ಆಗಿ, ಆಲ್ ರೌಂಡರ್ ಆಗಿ ಶಾರ್ದೂಲ್ ಆಡುತ್ತಾನೆ. ಅವನಿಗೆ ಎಸೆಯಲು ಸಾಧ್ಯವಾಗುವುದೇ 137-138 ಕಿ.ಮೀ ವೇಗ. ಆದರೆ ಚೆಂಡಿನ ಸೀಮ್ ಮೇಲೆ ಹೊಲಿದ‌ ದಾರಗಳನ್ನ ಯಾವಾಗ ಎಷ್ಟು ಹಿಡಿಯಬೇಕು, ಯಾವಾಗ ತದ್ವಿರುದ್ಧ ದಿಕ್ಕಿನಲ್ಲಿ ಹಿಡಿದು ನಕ್ಕಲ್ ಬಾಲ್ ಎಸೆಯಬೇಕು ಎಂಬುದು ಗೊತ್ತು. ನಕ್ಕಲ್ ಬಾಲ್ ಗಳಲ್ಲಿ ಆಕ್ಷನ್ ಸೇಮ್ . ಆದರೆ ವೇಗ ಗೊತ್ತೇ ಆಗದಂತೆ ತಗ್ಗಿರುತ್ತೆ. ಬ್ಯಾಟ್ಸ್‌ಮನ್ ಕಕ್ಕಾಬಿಕ್ಕಿ. ಕೆಲವು ಕಷ್ಟಗಳನ್ನ ಹೀಗೆ ಕಕ್ಕಾಬಿಕ್ಕಿ ಮಾಡಬೇಕು.

ಐಪಿಎಲ್ ಗೆ ಆಡಬೇಕಾದರೆ‌ ಕಿಂಗ್ಸ್ ಇಲೆವೆನ್ ಪಂಜಾಬ್ ನಿಂದ ಮಧ್ಯದಲ್ಲಿಯೇ‌ ಕಿತ್ತು ಹಾಕಿದ್ದರು. ಪುಣೆಗೆ ಆಡಿಕೋ ಎಂದಿದ್ದರು. ಆ‌ಗ ಅದಕ್ಕೆ ಎಸ್ ಎನ್ನಲಿಕ್ಕೆ 15 ನಿಮಿಷ ಬೇಕಾಯಿತು ಶಾರ್ದೂಲ್ ಗೆ. ರಣಜಿಯಲ್ಲಿ ಎಷ್ಟೇ‌ ವಿಕೆಟ್, ರನ್ ಗುಡ್ಡೆ ಹಾಕಿದ್ದರೂ ಮೂರೂ ಮುಕ್ಕಾಲು ಜನ ನೋಡಿರುವುದಿಲ್ಲ. ಐಪಿಎಲ್ ಹಾಗಲ್ಲ. ಒಂದೇ ಮ್ಯಾಚ್. ಇಡೀ ಪ್ರಪಂಚವನ್ನ ಮಾತಾಡಿಸಬಹುದು. ಅದು ಅದರ ತಾಕತ್ತು. ಪ್ರಪಂಚ, ಗೆದ್ದವರದ್ದು ಮಾತ್ರ!

ಪ್ರವೀಣ್ ಆಮ್ರೆ ಸಲಹೆ ಕೇಳಿ ಹುಡುಗ ಬೆವರು ಬಸಿದಿದ್ದ. ಅವಕಾಶ ಹತ್ತಿರದಲ್ಲೇ ಇತ್ತು. ಹತ್ತು ಕಟ್ಟೋ ಬದಲು ಒಂದು ಮುತ್ತು ಕಟ್ಟುವಂತೆ. ಸ್ಲೋ ಬಾಲ್, ಯಾರ್ಕರ್ ಗಳಲ್ಲಿ ಶಾರ್ದೂಲ್ ಬೆರಳುಗಳು ಚೆನ್ನಾಗಿಯೇ ಪಳಗಿವೆ. ನಿನ್ನೆಯ ನ್ಯೂಜಿಲೆಂಡ್ ವಿರುದ್ಧದ ಮ್ಯಾಚ್ ನಲ್ಲಿ ಶಾರ್ದೂಲ್ ವೈರೆಟಿ ಬೌಲಿಂಗ್ ನಿಂದಲೇ‌ ಕೊನೆಯ ಓವರ್ ನಲ್ಲಿ ಕಂಗೆಡಿಸಿದ್ದು. ಡೆತ್ ಓವರ್. ಲೈಫ್‌ನಲ್ಲಿ ಪ್ರತೀ ಕ್ಷಣವೂ ಹಾಗೆ.

Keep it up Shardul....ತಲೆ ಹೆಗಲ ಮೇಲೆ ಇರಲಿ, ಈ ಹಿಂದಿನಂತೆ.