'ಸೂಪರ್' ಓವರ್ ಗೆಲುವಿನ ರೂವಾರಿ, ಕಲ್ಲು ಮುಳ್ಳಿನ ಹಾದಿಯಲ್ಲಿ ಶಮಿ ಸವಾರಿ!
ಕ್ರಿಕೆಟ್‌ನಲ್ಲಿ ಡೆತ್ ಓವರ್ ಬೌಲರ್‌ಗಳ ಕರಿಯರನ್ನೇ ಮುಗಿಸಬಲ್ಲ ಓವರ್. ಈ 6 ಎಸೆತ, ಹಲವು ದಿಗ್ಗಜ ಬೌಲರ್‌ಗಳ ಕ್ರಿಕೆಟ್ ಬದುಕಿಗೆ ಫುಲ್ ಸ್ಟಾಪ್ ಇಟ್ಟಿದೆ. ಇದೇ ಡೆತ್ ಓವರ್‌ನಲ್ಲಿ ನ್ಯೂಜಿಲೆಂಡ್ ತೆಕ್ಕೆಯಲ್ಲಿದ್ದ ಪಂದ್ಯವನ್ನು ಮತ್ತೆ ಭಾರತದ ಮಡಿಲಿಗೆ ಹಾಕಿದ ಮಗಧೀರ ಮೊಹಮ್ಮದ್ ಶಮಿ. ಸೂಪರ್ ಫಾಸ್ಟ್ ವೇಗಿ ಶಮಿ ಯಶಸ್ಸಿನ ಹಿಂದಿನ ರೋಚಕ ಕಹಾನಿ ಇಲ್ಲಿದೆ.
- ರಮಾಕಾಂತ್ ಆರ್ಯನ್, ಸುವರ್ಣ ನ್ಯೂಸ್
ಮೊಹಮ್ಮದ್ ಶಮಿ..., ನಿನಗೆ ಮತ್ತು ರೋಹಿತ್ ಶರ್ಮನಿಗೆ ಒಂದು ಮನ ತುಂಬಿದ ಚಪ್ಪಾಳೆ. ಹಿಟ್ ಮ್ಯಾನ್ ರೋಹಿತ್ ಶರ್ಮನಿಗಿಂತ ಒಂದು ಹಿಡಿ ಜಾಸ್ತಿಯೇ ಪ್ರಶಂಸೆ ನಿನಗೆ ಸಲ್ಲಬೇಕು!
ಕ್ರಿಕೆಟ್ ಬ್ಯಾಟ್ಸ್‌ಮನ್‌ಗಳ ಆಟವಾಗಿ ವರ್ಷಗಳೇ ಉರುಳಿವೆ. ಒಬ್ಬ ಬ್ಯಾಟ್ಸ್‌ಮನ್ ಸತತ ಹತ್ತು ಮ್ಯಾಚ್‌ಗಳಲ್ಲಿ ಸೊನ್ನೆ ಸುತ್ತಿದರೂ ನಡೆಯುತ್ತೆ, ಆದರೆ ಒಬ್ಬ ಬೌಲರ್, ಒಂದೇ ಒಂದು ಸಿಕ್ಸರ್ ಹೊಡೆಸಿಕೊಂಡು ಬಿಟ್ಟರೂ ಅವನ ಕ್ರಿಕೆಟ್ ಬದುಕೇ The End ಆಗಬಹುದು. ಅದೆಂಥ ಓವರ್ ಮಾಡಿದೆಯೋ ಮಹರಾಯ.
ಇದನ್ನೂ ಓದಿ: ಕಡಲೂರಿಗೆ ಮುತ್ತಾದ ರಾಹುಲ್, ಯಶಸ್ಸಿನ ಹಿಂದಿವೆ ನೂರಾರು ಸವಾಲ್
ನಿನ್ನೆಯ ಟಿ-20 ಮ್ಯಾಚ್, ಎದುರಾಳಿ ನ್ಯೂಜಿಲೆಂಡ್. ಕಡೆಯ ಓವರ್. ಗೆಲ್ಲಲು ನ್ಯೂಜಿಲೆಂಡ್‌ಗೆ ಬೇಕಾಗಿದ್ದು ಕೇವಲ 9 ರನ್‌ಗಳು ಮಾತ್ರ. ವಿರಾಟ್, ಶಮಿ ಕೈಗೆ ಬಾಲ್ ಕೊಟ್ಟಿದ್ದ. ಅಷ್ಟೇ ಅಲ್ಲ, ಪಂದ್ಯವನ್ನೇ ಒಪ್ಪಿಸಿಬಿಟ್ಟಿದ್ದ.
ಎದುರಿಗಿದ್ದವನು ವಿಧ್ವಂಸಕ ಬ್ಯಾಟ್ಸ್ ಮನ್, ರಾಸ್ ಟೇಲರ್...ಮೊದಲನೇ ಬಾಲ್ Sixer... ಇನ್ನು ಕಥೆ ಮುಗಿಯುತು ಎಂದು ಕೊಂಡಿದ್ವಿ. ಸೆಕೆಂಡ್ ಬಾಲ್ ಒಂದೇ ರನ್. ಮೂರನೇ ಬಾಲ್‌ಗೆ ವಿಲಿಯಮ್ಸನ್ ಮನೆ ದಾರಿ ಹಿಡಿದಿದ್ದ.
ಕೆಚ್ಚು ಬಿಟ್ಟಿರಲಿಲ್ಲ. ನಾಲ್ಕನೇ ಬಾಲ್ ಸೀಫರ್ಟ್‌ಗೆ ರನ್ ಹೊಡೆಯಲು ಬಿಡಲೇ ಇಲ್ಲ. ಐದನೇ ಬಾಲ್, ಬೈನಿಂದ ಒಂದು ರನ್. ಮತ್ತೆ ಎದುರಿಗಿದ್ದವನು ಅದೇ ರಾಸ್ ಟೇಲರ್. ಅಬ್ಬಾ ಅದೆಂಥ ಅದ್ಬುತ ಬೌಲ್ಡ್ ಅದು. ಮ್ಯಾಚ್ ಟೈ! ಕದಲದ ಕೆಚ್ಚಿಗೆ ಪಂದ್ಯವನ್ನ ಕೊಹ್ಲಿ ಕೈಗೆ ಮತ್ತೆ ಒಪ್ಪಿಸಿದ್ದ. ಅದೇ ನಿಜವಾದ ಆಟ. ಬೌಲರ್‌ನ ಅಸಲಿ ತಾಕತ್ತು. ಉಳಿದದ್ದನ್ನ ರಾಹುಲ್ ಮತ್ತು ರೋಹಿತ್ ನೋಡಿಕೊಂಡರು.
ಇದನ್ನೂ ಓದಿ: ಕ್ರಿಕೆಟ್ ಜಗತ್ತಿನ ಮಣ್ಣಿನ ಹುಡುಗ: ಬೌಲಿಂಗ್‌ಗೆ ನಿಂತರೆ ಸೈನಿ ಹಸಿದ ಗಿಡುಗ
ಶಮಿಗೆ ಚಿಕ್ಕಂದಿನಿಂದಲೂ ಹಾಗೆ ಬಾಲ್ ಬೌಲ್ಡ್ ಆಗುವ ಶಬ್ಧವೆಂದರೆ ಪಂಚಪ್ರಾಣ. ಬಾಲ್ ಗಾಳಿಯಲ್ಲಿ ಹಾರುವುದು ಅದೆಂಥದ್ದೋ ಹಿತ. ಉತ್ತರ ಪ್ರದೇಶದ ಅಮ್ರೋಹದ ಸಾಧಾರಣ ರೈತ ಸಾಹಸಪುರದ ತೌಸಿಫ್ ಅಲಿ. ಅವರ ಮಗನೇ ಈ ಮೊಹಮ್ಮದ್ ಶಮಿ. ಊರಿನ ಹೆಸರಲ್ಲೇ ಸಾಹಸವಿದ್ದ 'ಮಣ್ಣಿನ ಮಗ' ಅವನು.
ಅಪ್ಪ ಕೂಡ ಫಾಸ್ಟ್ ಬೌಲರ್. ಮಗನನ್ನ ಭಾರತಕ್ಕಾಡಿಸಬೇಕೆಂಬ ಸಣ್ಣ ಕನಸು. ತನ್ನೂರಿನಿಂದ 22 ಕಿ.ಮೀ. ದೂರದ ಮೊರಾದಾಬಾದ್‌ನ ಕ್ರಿಕೆಟ್ ಕೋಚ್ ಬದ್ರುದ್ದೀನ್ ಸಿದ್ದಿಕಿ ಬಳಿ ಕರೆದುಕೊಂಡು ಬರ್ತಾರೆ. ಈ ಹುಡುಗನ ಆಟವನ್ನು ಒಮ್ಮೆ ನೋಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ.
ನಿಮಗೆ Football ಇಷ್ಟ ಇಲ್ಲದೇ ಇದ್ರೂ ಸುನಿಲ್ ಚೆಟ್ರಿ ಬಗ್ಗೆ ಓದಲೇಬೇಕು..!
ಆರಂಭವಾಯಿತು ಕ್ರಿಕೆಟ್ ಟ್ರೈನಿಂಗ್
15 ವರ್ಷದ ಹುಡುಗ ಅವನು. ಮುಂದಿನ ಒಂದು ವರ್ಷಕ್ಕೇ ಒಂದೇ ಒಂದು ದಿನವೂ ರಜೆಯಿಲ್ಲದಂತೆ, ಲೆಕ್ಕಕ್ಕಿಲ್ಲದಂತೆ ವಿಕೆಟ್‌ಗಳನ್ನು ನುಚ್ಚು ನೂರು ಮಾಡಿದ್ದ. ಶಮಿ ಬೌಲ್ಡ್‌ನ ಸೌಂಡ್ ಇಷ್ಟ ಪಡುವುದಕ್ಕೆ ಸಿದ್ದಿಕಿ ನಿಬ್ಬೆರಗಾಗಿದ್ದರು.
ಮುಂದೆ ಉತ್ತರ ಪ್ರದೇಶದ Under 19 ಸೆಲೆಕ್ಷನ್‌ಗೆ ಕರೆದುಕೊಂಡು ಹೋಗುತ್ತಾರೆ. ಒಂದು ಕೆಟ್ಟ ರಾಜಕೀಯದಿಂದ ಶಮಿ ಸೆಲೆಕ್ಟ್ ಆಗಲೇ ಇಲ್ಲ. ಸಿದ್ದಿಕಿ, ಬಿದ್ದ ಪೆಟ್ಟಿಗಲ್ಲ ಜಗ್ಗುವ ಆಸಾಮಿಯೇ ಅಲ್ಲ. ಶಮಿ ಮುಂದಿನ ಒಂದು ವರ್ಷ ನಿನ್ನ ಕ್ರಿಕೆಟ್ ಜೀವನವನ್ನ ನಾನು ಹಾಳು ಮಾಡಲಾರೆ. ನಡೀ ಕೋಲ್ಕತ್ತಾಗೆ ಎಂದು ಬಿಡುತ್ತಾರೆ ಬದ್ರುದ್ದೀನ್ ಸಿದ್ದಿಕಿ.
15 ವರ್ಷದ ಹುಡುಗ ಶಮಿ. ಕೋಲ್ಕತ್ತಾಗೆ ಬಂದಿಳಿಯುತ್ತಾನೆ. ಡಾಲ್ ಹೌಸಿ ಅಥ್ಲೆಟಿಕ್ ಕ್ಲಬ್‌ಗೆ ಆಡುತ್ತಾನೆ. ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್‌ನ ದೇಬವ್ರತ್ ದಾಸ್ ಕಣ್ಣಿಗೆ ಬೀಳುತ್ತಾನೆ, ಈ ಶಮಿ. ಆಗಲೇ ಶಮಿ ಬದುಕಲ್ಲಿ ಭಾಸ್ಕರ ಉದಯಿಸಿದ್ದು....
ಟೌನ್ ಕ್ಲಬ್‌ಗೆ 75000 ರುಪಾಯಿಗಳ ಕಾಂಟ್ರಾಕ್ಟ್‌ಗೆ ಆಡಿಸುತ್ತಾರೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ...ಶಮಿಗೆ ಮನೆ ಇರಲಿಲ್ಲ. ದಾಸ್, ಮನೆಯ ಮಗನಂತೆ ಶಮಿಯನ್ನ ತಮ್ಮ ಮನೆಯಲ್ಲೇ ಉಳಿಸಿಕೊಳ್ಳುತ್ತಾರೆ. ಅಪ್ಪನಂತ ಮನುಷ್ಯ. ಶಮಿ ಬೌಲಿಂಗ್‌ನ ಅಪ್ಪಟ ಫ್ಯಾನ್.
ಸಿಂಧುಗಿಂತಲೂ ಮಿಗಿಲು, ಭಾರತಾಂಬೆಗೆ ಚಿನ್ನ ತೊಡಿಸಿದ ಮಾನಸಿ ಜೋಶಿ ಸಾಧನೆ!
ಮತ್ತೆ ಕೈ ಕೊಟ್ಟ ಲಕ್
ಶಮಿ ಚೆನ್ನಾಗಿ ಬೌಲ್ ಮಾಡಿದ ಹೊರತಾಗಿಯೂ ಅಂಡರ್ 22 ಕೋಲ್ಕತ್ತಾಗೆ ಆಯ್ಕೆ ಆಗಲ್ಲ. ದೇವರಂತ ಗುರು ದಾಸ್, ಅವನನ್ನ ಬೆಂಗಾಲ್‌ನ ಸೆಲೆಕ್ಟರ್ ಸಮರ್ಬನ್ ಬ್ಯಾನರ್ಜಿ ಮುಂದೇನೆ ನಿಲ್ಲಿಸುತ್ತಾರೆ. ಈ ಹುಡಗನಿಗೆ ಅನ್ಯಾಯವಾಗಿದೆ. ನೋಡಿ ಇವನ ಬೌಲಿಂಗ್. ಇಷ್ಟವಾಗದಿದ್ದರೆ ಈ ಜನ್ಮದಲ್ಲಿ ಇವನು ಕ್ರಿಕೆಟ್ ಆಡೋದು ಬೇಡ ಎಂದಿರುತ್ತಾರೆ.
ಹುಡುಗನ ಬೌಲಿಂಗ್ ನೋಡಿದ ಮೇಲೆ ಸಮರ್ಬನ್ ಬ್ಯಾನರ್ಜಿಗೆ ಸೆಲೆಕ್ಟ್ ಮಾಡದೇ ಇರಲು ಕಾರಣವೇ ಇರಲಿಲ್ಲ. ಹುಡುಗ, ಬೆಂಗಾಲ್ ಅಂಡರ್ 19 ಟೀಂಗೆ ಆಡುತ್ತಾನೆ. ಮತ್ತೊಬ್ಬ ದೇವರು ಇವನನ್ನ ಕಾಯಲು ಕಾದಿರುತ್ತಾನೆ. ಮುಂದೆ ಇವನು ಮೋಹನ್ ಬಗಾನ್ ಕ್ಲಬ್‌ಗೆ ಬೌಲ್ ಮಾಡುತ್ತಾನೆ.
ಈ ಮಹಿಳಾ ಕ್ರಿಕೆಟರ್ ಪದೇ ಪದೇ ಬೆತ್ತಲಾಗುವುದೇಕೆ?
ನೆಟ್ಸ್‌ನಲ್ಲಿ ಸೌರವ್ ಗಂಗೂಲಿ ಎಂಬ ಅದ್ಭುತ ನಾಯಕನಿಗೆ ಇವನದ್ದೇ ಬೌಲಿಂಗ್. ಗ್ರೌಂಡ್, ಈಡನ್ ಗಾರ್ಡನ್. ಪ್ರತಿಭೆ ಯಾವ ಮೂಲೆಯಲ್ಲಿದ್ದರೂ ಹುಡುಕಿ ಟೀಂ ಇಂಡಿಯಾಗೆ ಆಡಿಸಿದವನು ಗಂಗೂಲಿ. ಇದು ನಿರ್ವಿವಾದ. ದಾದಾಗೂ ಶಮಿ ಹಿಡಿಸಿಬಿಟ್ಟ. ಬಂಗಾಳದ ರಣಜಿಗೆ ಇವನನ್ನ ಆಡಿಸಿ ಎಂದಿದ್ದ. ಮುಂದಿನದನ್ನು ಶಮಿಯ ಪ್ರತಿಭೆ ಮಾತ್ರ ನೋಡಿಕೊಂಡಿತು. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಅವನು ಎಸೆದ ರಿವರ್ಸ್ ಸ್ವಿಂಗ್‌ಗಳಿಗೆ ನಾಲ್ಕು ಓವರ್‌ಗಳಲ್ಲಿಯೇ ಒಂದೇ ಒಂದು ರನ್ ಬಂದಿದ್ದರೆ ಕೇಳಿ.
ಸಿಂಧುಗೆ ಚಾಂಪಿಯನ್ ಕಿರೀಟ ತೊಡಿಸಿದ ಬಂಗಾರದ ಮನುಷ್ಯ!.
ಶಮಿ ಒಂದು Upright Seamನೊಂದಿಗೆ ಆಫ್‌ಸ್ಟಂಪ್‌ನ ಸ್ವಲ್ಪ ಆಚೆ ಈಚೆ ಬಾಲ್ ಎಸೆಯುತ್ತಾನೆ. ಸ್ವಲ್ಪ ರಿವರ್ಸ್ ಸ್ವಿಂಗ್ ಟಚ್ ಕೊಟ್ಟಿರುತ್ತಾನೆ. ಡಿಫೆಂಡ್ ಮಾಡಬೇಕಾ, ಹೊಡೆಯಬೇಕಾ ಎಂಬ ಗೊಂದಲಕ್ಕೆ ಕೆಡವುವ ಅಸ್ತ್ರ ಅದು. ಆಗಲೇ ಮಿಕ ಬಿದ್ದಾಗಿರುತ್ತೆ.
ಕ್ರಿಕೆಟ್‌ನಲ್ಲಿ ರಿವರ್ಸ್ ಸ್ವಿಂಗ್ ಎಲ್ಲರಿಗೂ ಸಿದ್ಧಿಸೋ ಅಸ್ತ್ರವಲ್ಲ. ಅದೊಂಥರ ವರ. ಮೊಹಮ್ಮದ್ ಶಮಿ, ನಿನ್ನ ಶ್ರಮ ನಿನ್ನ ಕೈ ಬಿಟ್ಟಿಲ್ಲ. ಬಿಡೋದೂ ಇಲ್ಲ ಬಿಡು. ನೆನಪಿರಲಿ ಬ್ಯಾಟ್ಸ್‌ಮನ್ Cricket ಜೀವನಕ್ಕಿಂತ ಬೌಲರ್ಸ್ ಕ್ರಿಕೆಟ್ ಜೀವನ ತುಂಬಾ ಕಷ್ಟ. ನಿನಗೆ ಒಂದು ಶುಭಾಶಯ ಶಮಿ. ಒಳ್ಳೇದಾಗಲಿ.. Keep it up