* ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಆರಂಭಕ್ಕೆ ಕ್ಷಣಗಣನೆ* ಇಲ್ಲಿನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರನೇ ಟೆಸ್ಟ್* ಉಭಯ ತಂಡಗಳಲ್ಲೂ ಬದಲಾವಣೆಯಾಗುವ ಸಾಧ್ಯತೆ
ಇಂದೋರ್: ಸತತ 2ನೇ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮೇಲೆ ಕಣ್ಣಿಟ್ಟಿರುವ ಭಾರತ, ಬುಧವಾರದಿಂದ ಆರಂಭವಾಗಲಿರುವ ಆಸ್ಪ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದೆ. ಈಗಾಗಲೇ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿರುವ ಟೀಂ ಇಂಡಿಯಾ, 4 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸುವ ಕಾತರದಲ್ಲಿದೆ. ಪಂದ್ಯಕ್ಕೆ ಇಂದೋರ್ನ ಹೋಲ್ಕರ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಅತ್ತ ಆಸೀಸ್ಗೆ ಈ ಪಂದ್ಯ ಮಹತ್ವದ್ದೆನಿಸಿದ್ದು, ಸೋತರೆ ತಂಡದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕನಸನ್ನು ಭಗ್ನಗೊಳ್ಳಬಹುದು. ಸರಣಿಯನ್ನು ಸಮಬಲಗೊಳಿಸುವ ನಿರೀಕ್ಷೆಯಲ್ಲಿರುವ ತಂಡಕ್ಕೆ ಕೆಲ ತಾರಾ ಆಟಗಾರರ ಉಪಸ್ಥಿತಿ ಕಾಡಬಹುದು. ಮೊದಲೆರಡು ಪಂದ್ಯಗಳಲ್ಲಿ ಭಾರತದ ಅಭೂತಪೂರ್ವ ಪ್ರದರ್ಶನದಿಂದಾಗಿ ನಲುಗಿದ್ದ ಆಸೀಸ್ ಸುಧಾರಿತ ಪ್ರದರ್ಶನ ನೀಡದಿದ್ದರೆ ಮತ್ತೊಮ್ಮೆ ಪಂದ್ಯ ಕೈಚೆಲ್ಲಬಹುದು.
ಭಾರತಕ್ಕೆ ಮತ್ತೆ ಅಗ್ರಕ್ರಮಾಂಕದ ಸಮಸ್ಯೆ ಎದುರಾಗಿದ್ದು, ಸತತ ವೈಫಲ್ಯಕ್ಕೊಳಗಾಗುತ್ತಿರುವ ಕೆ.ಎಲ್.ರಾಹುಲ್ಗೆ ಮತ್ತೊಂದು ಅವಕಾಶ ನೀಡಬೇಕೇ, ಶುಭ್‌ಮನ್ ಗಿಲ್ರನ್ನು ಆಡಿಸಬೇಕೇ ಎಂದು ಗೊಂದಲದಲ್ಲಿದೆ. ಉಪನಾಯಕತ್ವದಿಂದ ಕೆಳಗಿಳಿಸಿದರೂ ರಾಹುಲ್ಗೆ ಮತ್ತೊಂದು ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ. ರೋಹಿತ್ ಫಾಮ್‌ರ್‍ಗೆ ಮರಳಿದ್ದು, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಸ್ಥಿರತೆ ಕಾಯ್ದುಕೊಳ್ಳಲು ವಿಫಲರಾಗುತ್ತಿದ್ದಾರೆ. ಶ್ರೇಯಸ್ ತಮ್ಮ ಎಂದಿನ ಲಯ ಕಂಡುಕೊಳ್ಳಬೇಕಾದ ಅಗತ್ಯವಿದೆ.
IPL 2023 ಟೂರ್ನಿ ಆರಂಭಕ್ಕೂ ಮುನ್ನ ಮುಂಬೈಗೆ ಶಾಕ್, ಜಸ್ಪ್ರೀತ್ ಬುಮ್ರಾ ಔಟ್!
ಆಲ್ರೌಂಡರ್ಗಳೇ ಬಲ: ಮೊದಲೆರಡೂ ಪಂದ್ಯಗಳಲ್ಲಿ ಭಾರತವನ್ನು ಗೆಲ್ಲಿಸಿದ್ದು ಆಲ್ರೌಂಡರ್ಗಳು. ಆರ್.ಅಶ್ವಿನ್, ರವೀಂದ್ರ ಜಡೇಜಾ ಜೊತೆ ಅಕ್ಷರ್ ಪಟೇಲ್ ಬೌಲಿಂಗ್ ಜೊತೆ ಬ್ಯಾಟಿಂಗ್ನಲ್ಲೂ ಎದುರಾಳಿಗಳನ್ನು ಕಾಡುತ್ತಿದ್ದಾರೆ. ಈ ಪಂದ್ಯದಲ್ಲೂ ಇವರನ್ನು ಕಟ್ಟಿಹಾಕದಿದ್ದರೆ ಆಸೀಸ್ಗೆ ಸೋಲು ಕಟ್ಟಿಟ್ಟಬುತ್ತಿ. ಇನ್ನು ಇಂದೋರ್ ಪಿಚ್ ವೇಗಿಗಳಿಗೆ ನೆರವು ನೀಡುವ ಸಾಧ್ಯತೆ ಇರುವ ಕಾರಣ ಭಾರತ ಮೂವರು ವೇಗಿಗಳನ್ನು ಆಡಿಸಲು ನಿರ್ಧರಿಸಲಿವೆಯೇ ಎನ್ನುವ ಕುತೂಹಲವಿದೆ. ಮೊಹಮದ್ ಶಮಿ, ಮೊಹಮದ್ ಸಿರಾಜ್ ಜೊತೆ ಜಯ್‌ದೇವ್ ಉನಾದ್ಕತ್ ಅಥವಾ ಉಮೇಶ್ ಯಾದವ್‌ಗೆ ಸ್ಥಾನ ಸಿಗಲೂಬಹುದು.
ಅತ್ತ ಆಸೀಸ್ ಕೂಡಾ ಆಯ್ಕೆ ಗೊಂದಲದಲ್ಲಿದ್ದು, ವಾರ್ನರ್ ಬದಲು ಟ್ರ್ಯಾವಿಸ್ ಹೆಡ್ ಆರಂಭಿಕನಾಗಿ ಕಣಕ್ಕಿಳಿಯಬಹುದು. ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದು, ಬ್ಯಾಟಿಂಗ್ನಲ್ಲಿ ಇನ್ನಷ್ಟೇ ರನ್ ಹರಿದುಬರಬೇಕಿದೆ. ಖವಾಜ, ಲಾಬುಶೇನ್, ಹ್ಯಾಂಡ್‌್ಸಕಂಬ್ ಮೇಲೆ ಹೆಚ್ಚಿನ ಭರವಸೆ ಇದೆ. ಗಾಯದಿಂದ ಚೇತರಿಸಿಕೊಂಡಿರುವ ಆಲ್ರೌಂಡರ್ ಕ್ಯಾಮರೂನ್ ಗ್ರೀನ್, ಮಿಚೆಲ್ ಸ್ಟಾರ್ಕ್ ಸ್ಥಾನ ಪಡೆಯುವ ನಿರೀಕ್ಷೆಯೂ ಇದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್/ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಕೆ ಎಸ್ ಭರತ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮದ್ ಶಮಿ, ಮೊಹಮ್ಮದ್ ಸಿರಾಜ್.
ಆಸ್ಪ್ರೇಲಿಯಾ: ಉಸ್ಮಾನ್ ಖವಾಜ, ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್(ನಾಯಕ), ಪೀಟರ್ ಹ್ಯಾಂಡ್ಸ್‌ಕಂಬ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕೇರ್ರಿ, ಸ್ಕಾಟ್ ಬೋಲೆಂಡ್, ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಟೋಡ್ ಮರ್ಫಿ.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋಟ್ಸ್‌ರ್
ಪಿಚ್ ರಿಪೋರ್ಚ್
ಹೋಲ್ಕರ್ ಕ್ರೀಡಾಂಗಣ ಪಿಚ್ಅನ್ನು ಕೆಂಪು ಇಟ್ಟಿಗೆಯ ಮಣ್ಣಿನಿಂದ ಪಿಚ್ ಸಿದ್ಧಗೊಳಿಸಿಸಲಾಗಿದೆ. ಹೀಗಾಗಿ ವೇಗದ ಬೌಲಿಂಗ್‌ಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಇದೆ. ಇದು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, ಮೊದಲ 3 ದಿನ ಬ್ಯಾಟರ್ಗಳಿಗೆ ಹೆಚ್ಚಿನ ನೆರವು ನೀಡಬಹುದು. ಪಂದ್ಯದಲ್ಲಿ ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆಯಿದೆ.
