Asianet Suvarna News Asianet Suvarna News

ಇಂದೋರ್‌ನಲ್ಲಿ ಭಾರತಕ್ಕೆ ಭರ್ಜರಿ ಜಯ, ಟಿ20, ಏಕದಿನದಲ್ಲಿ ಟೀಂ ಇಂಡಿಯಾ ನಂ.1!

ರೋಹಿತ್‌ ಶರ್ಮ ಹಾಗೂ ಶುಭ್‌ಮನ್‌ ಗಿಲ್‌ ಅವರ ಆಕರ್ಷಕ ಶತಕ ಹಾಗೂ ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಟೀಮ್‌ ಇಂಡಿಯಾ ಇಂದೋರ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 90 ರನ್‌ಗಳಿಂದ ಸೋಲಿಸಿದೆ. ಆ ಮೂಲಕ ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಭಾರತ ನಂ.1 ಸ್ಥಾನಕ್ಕೇರಿದೆ.
 

indore ODI India Beat New Zealand by 90 runs India are now No 1 in T20Is and ODIs san
Author
First Published Jan 24, 2023, 9:08 PM IST

ಇಂದೋರ್‌ (ಜ.24): ಭಾರತ ತಂಡವೀಗ ಏಕದಿನ ಹಾಗೂ ಟಿ20 ಎರಡೂ ಮಾದರಿಯಲ್ಲಿ ವಿಶ್ವದ ನಂ.1 ಟೀಮ್‌ ಎನಿಸಿಕೊಂಡಿದೆ. ಮಂಗಳವಾರ ಇಂದೋರ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್‌ ತಂಡವನ್ನು 90 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಈ ಸಾಧನೆ ಮಾಡಿದೆ. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 3-0 ಅಂತರದಿಂದ ಗೆದ್ದುಕೊಂಡಂತಾಗಿದೆ. ಹೋಳ್ಕರ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮ (101 ರನ್‌, 85 ಎಸೆತ, 9 ಬೌಂಡರಿ, 6 ಸಿಕ್ಸರ್‌) ಹಾಗೂ ಶುಭ್‌ಮನ್‌ ಗಿಲ್‌ (112 ರನ್‌, 78 ಎಸೆತ, 13 ಬೌಂಡರಿ, 5 ಸಿಕ್ಸರ್‌) ಬಾರಿಸಿದ ಆಕರ್ಷಕ ಶತಕ ಹಾಗೂ ಕೊನೇ ಹಂತದಲ್ಲಿ ಹಾರ್ದಿಕ್‌ ಪಾಂಡ್ಯ ಬಾರಿಸಿದ 38 ಎಸೆತಗಳ ಸಿಡಿಲಬ್ಬರದ 54 ರನ್‌ಗಳ ನೆರವಿನಿಂದ 9 ವಿಕೆಟ್‌ಗೆ 385 ರನ್‌ ಪೇರಿಸಿತ್ತು. ಪ್ರತಿಯಾಗಿ ನ್ಯೂಜಿಲೆಂಡ್‌ ತಂಡ ಡೆವೋನ್‌ ಕಾನ್ವೆ ಬಾರಿಸಿದ ಶತಕದ ಮೂಲಕ ಪ್ರತಿರೋಧ ತೋರಿತಾದರೂ ಶಾರ್ದೂಲ್‌ ಠಾಕೂರ್‌ (45 ರನ್‌ಗೆ 3 ವಿಕೆಟ್‌) ಹಾಗೂ ಕುಲದೀಪ್‌ ಯಾದವ್‌ (62 ರನ್‌ಗೆ 3 ವಿಕೆಟ್‌) ಮಾರಕ ದಾಳಿಯ ಬೆಂಡಾಗಿ 41.2 ಓವರ್‌ಗಳಲ್ಲಿ295 ರನ್‌ಗೆ ಆಲೌಟ್‌ ಆಯಿತು. 

ನ್ಯೂಜಿಲೆಂಡ್‌ ಪರವಾಗಿ ಡೆವೋನ್‌ ಕಾನ್ವೆ 100 ಎಸೆತಗಳಲ್ಲಿ 12 ಬೌಂಡರಿ ಹಾಗೂ 8 ಸಿಕ್ಸರ್‌ಗಳಿದ್ದ 138 ರನ್‌ ಸಿಡಿಸಿ ಹೋರಾಟ ನಡೆಸಿದರು. ಆದರೆ, ತಂಡಕ್ಕೆ ಗೆಲುವು ನೀಡಲು ಅವರ ಹೋರಾಟ ಸಾಕಾಗಲಿಲ್ಲ. ಕಾನ್ವೆ ಹೊರತಾಗಿ ಹೆನ್ರಿ ನಿಕೋಲ್ಸ್‌ 42 ರನ್‌ ಬಾರಿಸಿದ ಮೈಕೆಲ್‌ ಬ್ರೇಸ್‌ವೆಲ್‌ 26 ರನ್‌ ಸಿಡಿಸಿದರು. ಟೀಮ್‌ ಇಂಡಿಯಾ ಪರವಾಗಿ ಶಾರ್ದೂಲ್‌ ಠಾಕೂರ್‌ ಹಾಗೂ ಕುಲದೀಪ್‌ ಯಾದವ್‌ ಅಲ್ಲದೆ, ಯಜುವೇಂದ್ರ ಚಾಹಲ್‌ 2 ವಿಕೆಟ್‌ ಉರುಳಿಸಿ ಮಿಂಚಿದರು. ಹಾರ್ದಿಕ್‌ ಪಾಂಡ್ಯ ಹಾಗೂ ಉಮ್ರಾನ್‌ ಮಲೀಕ್‌ ತಲಾ 1 ವಿಕೆಟ್‌ ಉರುಳಿಸಿದರು.

ದೊಡ್ಡ ಮೊತ್ತವನ್ನು ಬೆನ್ನಟ್ಟಲು ನ್ಯೂಜಿಲೆಂಡ್‌ಗೆ ಸ್ಫೋಟಕ ಆಟದ ಅಗತ್ಯವಿತ್ತು. ಆದರೆ, ಫಿನ್‌ ಅಲೆನ್‌ ಅವರನ್ನು ಬೇಗನೆ ಕಳೆದುಕೊಂಡ ನ್ಯೂಜಿಲಂಡ್‌ ಆಘಾತ ಕಂಡಿತ್ತು. ಹಾಗಿದ್ದರೂ 2ನೇ ವಿಕೆಟ್‌ಗೆ ಕಾನ್ವೆ ಹಾಗೂ ನಿಕೋಲ್ಸ್‌ 106 ರನ್‌ ಜೊತೆಯಾಟವಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದ್ದರು. ಈ ಹಂತದಲ್ಲಿ ದಾಳಿಗಿಳಿದ ಕುಲದೀಪ್‌ ಯಾದನ್‌ ನಿಕೋಲ್ಸ್‌ ವಿಕೆಟ್‌ ಉರುಳಿಸುವ ಮೂಲಕ ಜೊತೆಯಾಟ ಬೇರ್ಪಡಿಸಿದರು. ಆ ಬಳಿಕ ಬ್ರೇಸ್‌ವೆಲ್ ಹಾಗೂ ಫರ್ಗ್ಯುಸನ್‌ ವಿಕೆಟ್‌ ಉರುಳಿಸಿ ಕುಲದೀಪ್‌ ತಂಡದ ಗೆಲುವಿಗೆ ಕಾರಣರಾದರು.

ರೋಹಿತ್ ಶರ್ಮಾ- ಶುಭ್‌ಮನ್ ಗಿಲ್ ಸಿಡಿಲಬ್ಬರದ ಶತಕ, ಕಿವೀಸ್‌ಗೆ ಕಠಿಣ ಗುರಿ ನೀಡಿದ ಭಾರತ..!

25 ಓವರ್‌ಗಳ ವೇಳೆಗೆ 2 ವಿಕೆಟ್‌ಗೆ 184 ರನ್‌ ಬಾರಿಸಿದ್ದ ನ್ಯೂಜಿಲೆಂಡ್‌ ಗೆಲುವು ಕಾಣುವ ವಿಶ್ವಾಸದಲ್ಲಿತ್ತು. ಆದರೆ, ಈ ಹಂತದಲ್ಲಿ ಶಾರ್ದೂಲ್‌ ಠಾಕೂರ್‌ ಅವರ ಸ್ಪೆಲ್‌ ನ್ಯೂಜಿಲೆಂಡ್‌ ತಂಡದ ಹೋರಾಟಕ್ಕೆ ಕಡಿವಾಣ ಹಾಕಿತು. ಅವರ ಕ್ರಾಸ್‌ ಸೀಮ್‌ ಶಾರ್ಟ್‌ ಬಾಲ್‌ ಎಸೆತದಲ್ಲಿ ಡೇರಿಲ್‌ ಮಿಚೆಲ್‌ ಹಾಗೂ ಗ್ಲೆನ್‌ ಫಿಲಿಪ್ಸ್‌ ಇಬ್ಬರೂ ಹೊರನಡೆದರೆ, ನಕಲ್‌ ಬಾಲ್‌ಗೆ ಟಾಮ್‌ ಲಥಾಮ್‌ ಕೂಡ ನಿರ್ಗಮಿಸಿದ್ದರು. ಈ ಹಂತದಲ್ಲಿ ಶತಕವೀರ ಕಾನ್ವೆ ಅವರ ಉಮ್ರಾನ್‌ ಮಲೀಕ್‌ ಎಸೆತದಲ್ಲಿ ರೋಹಿತ್‌ ಶರ್ಮಗೆ ಮಿಡ್‌ವಿಕೆಟ್‌ನಲ್ಲಿ ಕ್ಯಾಚ್‌ ನೀಡಿ ಹೊರನಡೆದಿದ್ದರು.

ಪಾಕ್ ನಾಯಕ ಬಾಬರ್ ಅಜಂ ವಿಶ್ವದಾಖಲೆ ಸರಿಗಟ್ಟಿದ ಟೀಂ ಇಂಡಿಯಾ ಕ್ರಿಕೆಟಿಗ ಶುಭ್‌ಮನ್ ಗಿಲ್‌..!

ಬ್ರೇಸ್‌ವೆಲ್‌ ಹಾಗೂ ಸ್ಯಾಂಟ್ನರ್‌ ಕೆಲಸ ಕಾಲ ಹೋರಾಡಿದರೂ, ಮೊದಲ ಏಕದಿನ ಪಂದ್ಯದಲ್ಲಿ ತೋರಿದ್ದ ಆಟವನ್ನು ಪುನರಾವರ್ತಿಸಲು ವಿಫಲರಾಗಿದ್ದರಿಂದ ಪ್ರವಾಸಿ ತಂಡ 42ನೇ ಓವರ್‌ನಲ್ಲಿ ಆಲೌಟ್‌ ಆಯಿತು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭರ್ಜರಿ ವಿಜಯ ಕಂಡಿರುವ ಭಾರತ ಈಗ ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಜನವರಿ 27, 29 ಹಾಗೂ ಫೆ.1ಕ್ಕೆ ಪಂದ್ಯ ನಿಗದಿಯಾಗಿದ್ದು, ರಾಂಚಿ, ಲಕ್ನೋ ಹಾಗೂ ಅಹಮದಾಬಾದ್‌ನಲ್ಲಿ ಪಂದ್ಯಗಳು ನಡೆಯಲಿದೆ.

Follow Us:
Download App:
  • android
  • ios