ರೋಹಿತ್ ಶರ್ಮಾ- ಶುಭ್‌ಮನ್ ಗಿಲ್ ಸಿಡಿಲಬ್ಬರದ ಶತಕ, ಕಿವೀಸ್‌ಗೆ ಕಠಿಣ ಗುರಿ ನೀಡಿದ ಭಾರತ..!

ಕಿವೀಸ್ ಎದುರು ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಗಿಲ್, ರೋಹಿತ್
ಕಿವೀಸ್‌ಗೆ ಗೆಲ್ಲಲು 386 ರನ್ ಗುರಿ ನೀಡಿದ ಟೀಂ ಇಂಡಿಯಾ
ಆಕರ್ಷಕ ಅರ್ಧಶತಕ ಚಚ್ಚಿದ ಹಾರ್ದಿಕ್ ಪಾಂಡ್ಯ

Ind vs NZ Rohit Sharma Shubman Gill Centuries Steer India set 386 runs target to New Zealand kvn

ಇಂದೋರ್(ಜ.24): ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಮತ್ತೋರ್ವ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಬಾರಿಸಿದ ಆಕರ್ಷಕ ಶತಕ ಹಾಗೂ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಬಾರಿಸಿದ ಸ್ಪೋಟಕ ಅರ್ಧಶತಕದ ನೆರವಿನಿಂದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡು 385 ರನ್ ಬಾರಿಸಿದ್ದು, ಪ್ರವಾಸಿ ನ್ಯೂಜಿಲೆಂಡ್ ತಂಡಕ್ಕೆ ಕಠಿಣ ಗುರಿ ನೀಡಿದೆ.

ಇಲ್ಲಿನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಸ್ಪೋಟಕ ಆರಂಭವನ್ನೇ ಒದಗಿಸಿಕೊಟ್ಟರು. ಆರಂಭದಿಂದಲೇ ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಈ ಜೋಡಿ ಕೇವಲ ಮೊದಲ 13 ಓವರ್‌ಗಳಲ್ಲೇ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಇದಾದ ಬಳಿಕವೂ ಈ ಜೋಡಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ರನ್‌ ಗಳಿಕೆಯ ವೇಗವನ್ನು ಹೆಚ್ಚಿಸಿತು. ಪರಿಣಾಮ ಕೇವಲ 26 ಓವರ್ ಅಂತ್ಯದ ವೇಳೆಗೆ ಈ ಜೋಡಿ 212 ರನ್‌ಗಳ ಜತೆಯಾಟವಾಡಿತು. ಈ ಮೂಲಕ ನ್ಯೂಜಿಲೆಂಡ್ ಎದುರು ಮೊದಲ ವಿಕೆಟ್‌ಗೆ ಗರಿಷ್ಠ ರನ್ ಜತೆಯಾಟವಾಡಿದ ಜೋಡಿ ಎನ್ನುವ ಹಿರಿಮೆಗೆ ಪಾತ್ರವಾಯಿತು. 

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬರೋಬ್ಬರಿ 1100 ದಿನಗಳ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಶತಕ ಸಿಡಿಸುವಲ್ಲಿ ಯಶಸ್ವಿಯಾದರು. ರೋಹಿತ್ ಶರ್ಮಾ, 85 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 101 ರನ್ ಬಾರಿಸಿ ಬ್ರಾಸ್‌ವೆಲ್‌ಗೆ ವಿಕೆಟ್ ಒಪ್ಪಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಬಾರಿಸಿದ 30ನೇ ಏಕದಿನ ಶತಕ ಎನಿಸಿಕೊಂಡಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಜತೆ ಜಂಟಿ 3ನೇ ಸ್ಥಾನ ಹಂಚಿಕೊಂಡಿದ್ದಾರೆ.

ಇನ್ನು ಮತ್ತೊಂದು ತುದಿಯಲ್ಲಿ ನಾಯಕನಿಗೆ ಉತ್ತಮ ಸಾಥ್ ನೀಡಿದ ಶುಭ್‌ಮನ್‌ ಗಿಲ್, ಸರಣಿಯಲ್ಲಿ ಮತ್ತೊಂದು ಶತಕ ಸಿಡಿಸಿ ಸಂಭ್ರಮಿಸಿದರು. ಮೊದಲ ಏಕದಿನ ಪಂದ್ಯದಲ್ಲಿ ದ್ವಿಶತಕ ಚಚ್ಚಿದ್ದ ಗಿಲ್, ಇದೀಗ ಕೊನೆಯ ಏಕದಿನ ಪಂದ್ಯದಲ್ಲಿ ಕೇವಲ 78 ಎಸೆತಗಳಲ್ಲಿ 13 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 112 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. 

ರೋಹಿತ್ ಶರ್ಮಾ ಹಾಗೂ ಶುಭ್‌ಮನ್‌ ಗಿಲ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ವಿರಾಟ್ ಕೊಹ್ಲಿ(36), ಇಶಾನ್ ಕಿಶನ್(17) ಹಾಗೂ ಸೂರ್ಯಕುಮಾರ್ ಯಾದವ್(14) ಉತ್ತಮ ಆರಂಭ ಪಡೆದರಾದರೂ, ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು. ಇನ್ನು ಕೊನೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೇವಲ 38 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 54 ರನ್ ಬಾರಿಸಿ ಮಿಂಚಿದರು. ಪಾಂಡ್ಯಗೆ ಮತ್ತೋರ್ವ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್(25) ಉತ್ತಮ ಸಾಥ್ ನೀಡಿದರು. ಪರಿಣಾಮ ಟೀಂ ಇಂಡಿಯಾ ಅನಾಯಾಸವಾಗಿ 380ರ ಗಡಿದಾಟಿತು.

Latest Videos
Follow Us:
Download App:
  • android
  • ios