Asianet Suvarna News Asianet Suvarna News

'ಭಾರತೀಯರು ಖುಷಿ ಆಗಿರಬಹುದು' ಪಾಕ್‌ ಸೋಲಿನ ಬಳಿಕ ಪಿಸಿಬಿ ಚೇರ್ಮನ್‌ ರಮೀಜ್‌ ರಾಜಾ ಕಿಡಿ!

ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ಶ್ರೀಲಂಕಾ ಆರನೇ ಬಾರಿಗೆ ಏಷ್ಯಾಕಪ್‌ ಚಾಂಪಿಯನ್‌ ಆಗಿದೆ. ಪಾಕಿಸ್ತಾನ ತಂಡ ಸೋಲು ಕಂಡ ಬಳಿಕ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಚೇರ್ಮನ್‌ ಹಾಗೂ ಮಾಜಿ ಆಟಗಾರ ರಮೀಜ್‌ ರಾಜಾ ಅವರ ವಿಡಿಯೋ ವೈರಲ್‌ ಆಗಿದೆ. ಅಲ್ಲಿ ಅವರು ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡುವಾಗ ಭಾರತೀಯ ಪತ್ರಕರ್ತರನ್ನು ನಿಂದಿಸುತ್ತಿರುವುದು ಕಂಡುಬಂದಿದೆ.

Indians will be very happy after Pakistan loss in Asia cup says PCB Chairman Ramiz Raja san
Author
First Published Sep 12, 2022, 1:46 PM IST

ದುಬೈ (ಸೆ. 12): ಏಷ್ಯಾಕಪ್‌ ಟಿ20 ಟೂರ್ನಿಯ ಪೈನಲ್‌ ಪಂದ್ಯದಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 170 ರನ್ ಬಾರಿಸಿದರೆ, ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ತಂಡ 147 ರನ್‌ಗೆ ಆಲೌಟ್‌ ಆಯಿತು. ಪಾಕಿಸ್ತಾನ ತನ್ನದೇ ತಪ್ಪುಗಳಿಂದ ಸೋಲು ಕಂಡಿತು. ಸಾಕಷ್ಟು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು, ಬ್ಯಾಟಿಂಗ್‌ ವೇಳೆ ನೀರಸವಾಗಿ ಆಡಿದ್ದು ತಂಡದ ಸೋಲಿಗೆ ಕಾರಣವೆನಿಸಿತು. ಪಾಕಿಸ್ತಾನ ಪಂದ್ಯ ಸೋಲು ಕಂಡ ಬಳಿಕ ಸ್ಟೇಡಿಯಂನಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಫೈನಲ್‌ನಲ್ಲಿ ಸೋಲು ಕಂಡ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ಅವರನ್ನು ಇದೇ ವಿಚಾರವಾಗಿ ಪ್ರಶ್ನೆ ಮಾಡಲಾಯಿತು. ಈ ಸೋಲಿನಿಂದ ಪಾಕಿಸ್ತಾನದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆಯಲ್ಲ ಎಂದು ಭಾರತೀಯ ಪತ್ರಕರ್ತ ಕೇಳಿದ ಪ್ರಶ್ನೆಗೆ ಉರಿದುಬಿದ್ದ ರಮೀಜ್‌ ರಾಜಾ, ಭಾರತದ ಪತ್ರಕರ್ತನ ಮೇಲೆ ಮುಗಿಬಿದ್ದರು. ಪಂದ್ಯ ಮುಗಿದ ಬಳಿಕ ನಿರಾಸೆಯಿಂದಲೇ ಸ್ಟೇಡಿಯಂನಿಂದ ಹೊರ ಬಂದ ರಮೀಜ್‌ ರಾಜಾ, ಮೈದಾನದ ಹೊರಗಡೆ ತಮಗಾಗಿಯೇ ನಿಂತಿದ್ದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಅವರ ಮಾತಿನಲ್ಲಿಯೇ, ಸೋಲಿಗೆ ಬೇಸರವಾಗಿರುವುದು ಕಂಡು ಬಂದಿತ್ತು.

ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ, ಭಾರತದ ಪತ್ರಕರ್ತ ಪಾಕಿಸ್ತಾನದ ಜನರು ಸೋಲಿನಿಂದ ಬಹಳ ನಿರಾಸೆಯಾಗಿದ್ದಾರೆ ಅದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ, ನೀವು ಭಾರತದವರೇ? ಬಹುಶಃ ನಮ್ಮ ಈ ಸೋಲಿನಿಂದ ನಿಮ್ಮವರಿಗೆ ಖುಷಿಯಾಗಿರಬಹುದು ಎಂದು ಹೇಳಿದರು. ಇದಕ್ಕೆ ಪತ್ರಕರ್ತ ಇಲ್ಲ ನಾವು ಖುಷಿಯಾಗಿಲ್ಲ ಎಂದು ಹೇಳಿದರು. ಅದಕ್ಕೆ ರಮೀಜ್‌ ರಾಜಾ, ಯಾವ ಜನರ ಬಗ್ಗೆ ಹೇಳುತ್ತಿದ್ದೀರಿ ಎಂದು ಮತ್ತೆ ಪ್ರಶ್ನೆ ಮಾಡಿದರು. ಅದಕ್ಕೆ ಪತ್ರಕರ್ತ, ಸೋಲಿನ ಬಳಿಕ ಪಾಕಿಸ್ತಾನದ ಅಭಿಮಾನಿಗಳು ಕಣ್ಣೀರಿಡುತ್ತಲೇ ಹೊರಹೋಗಿದ್ದನ್ನು ನೋಡಿದ್ದೇವೆ. ನಾನೇನಾದರೂ ತಪ್ಪು ಮಾತನಾಡುತ್ತಿದ್ದೇನೆಯೇ ಎಂದು ಪ್ರಶ್ನೆ ಮಾಡಿದರು.


ನೀವು ಎಲ್ಲಾ ದೇಶದ ಜನರನ್ನು ಒಟ್ಟು ಮಾಡುತ್ತಿದ್ದೀರಿ ಎಂದು ರಮೀಜ್‌ ಅದಕ್ಕೆ ಉತ್ತರ ನೀಡಿದ್ದಾರೆ. ಇಂಥವೆಲ್ಲಾ ಪ್ರಶ್ನೆಗಳನ್ನು ನೀವು ಕೇಳಬಾರದು ಎಂದು ಹೇಳುತ್ತಲೇ, ಪ್ರಶ್ನೆ ಕೇಳಿದ ವ್ಯಕ್ತಿಯ ಫೋನ್‌ಅನ್ನು ಕಿತ್ತುಕೊಳ್ಳಲು ಮುಂದಾಗಿ ಮುಂದುವರಿದರು. ಕೊನೆಗೆ ಪರಿಸ್ಥಿತಿಯ ಅರಿವಾಗಿ ತಕ್ಷಣವೇ ಮೊಬೈಲ್‌ ಅನ್ನು ವಾಪಸ್‌ ಮಾಡಿದ್ದಾರೆ.

T20 World Cup Squad: ಇಂದು ರಾಷ್ಟ್ರೀಯ ಆಯ್ಕೆ ಸಮಿತಿ ಸಭೆ, ವಿಶ್ವಕಪ್‌ಗೆ ತಂಡ ನಿರ್ಧಾರ!

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಅವರ ವರ್ತನೆಯನ್ನು ಎಲ್ಲರೂ ಖಂಡಿಸುತ್ತಿದ್ದಾರೆ. ಫೈನಲ್‌ಗೆ ಒಂದು ದಿನ ಮೊದಲು, ರಮೀಜ್ ರಾಜಾ ಟೀಮ್ ಇಂಡಿಯಾದ ಮ್ಯಾನೇಜ್‌ಮೆಂಟ್‌ಗೆ ಬಗ್ಗೆ ತಮ್ಮ ಕಾಮೆಂಟ್‌ಗಳನ್ನು ಮಾಡಿದ್ದರು. ಆದರೆ, ಅವರ ತಂಡವೇ ಫೈನಲ್‌ನಲ್ಲಿ ಸೋಲು ಕಂಡಿತು.

Asia Cup ಟೂರ್ನಿಯಲ್ಲಿ ಬಾಬರ್ ಅಜಂ ಫೇಲ್, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌..!

ಏಷ್ಯಾಕಪ್‌ ಫೈನಲ್‌ ಪಂದ್ಯದಲ್ಲಿ ಏನಾಯ್ತು?: ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಈ ಟೂರ್ನಿಯಲ್ಲಿ ಟಾಸ್‌ ಗೆದ್ದ ಹೆಚ್ಚಿನ ತಂಡಗಳು ಇಬ್ಬನಿ ಕಾರಣದಿಂದಾಗಿ ಮೊದಲು ಬೌಲಿಂಗ್‌ ಆಯ್ಕೆಯನ್ನೇ ಮಾಡಿದ್ದವು. ಹಾಗಾಗಿ ಪಾಕಿಸ್ತಾನದ ಆಯ್ಕೆ ಯಾರಿಗೂ ಅಚ್ಚರಿ ಎನಿಸಿರಲಿಲ್ಲ. ಆದರೆ, ಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಇದೇ ಹಿನ್ನಡೆಯಾಯಿತು. ಮೊದಲು ಬೌಲಿಂಗ್‌ನಲ್ಲಿ ಗಮನಸೆಳೆದಿದ್ದ ಪಾಕಿಸ್ತಾನ, 58 ರನ್‌ಗೆ ಶ್ರೀಲಂಕಾದ 5 ವಿಕೆಟ್‌ ಉರುಳಿಸಿತ್ತು. ಆದರೆ, ಭಾನುಕ ರಾಜಪಕ್ಸ ಆಟದಿಂದಾಗಿ ಲಂಕಾ 170 ರನ್‌ ಗಳಿಸಲು ಸಾಧ್ಯವಾಯಿತು. ಬಳಿಕ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಶ್ರೀಲಂಕಾದ ಬೌಲಿಂಗ್‌ ಮುಂದೆ ಪರದಾಟ ನಡೆಸಿದರು. ಬೆನ್ನು ಬೆನ್ನಿಗೆ ಕೆಲ ವಿಕೆಟ್‌ಗಳನ್ನು ಶ್ರೀಲಂಕಾ ಉರುಳಿಸಿತು. ಮೊಹಮದ್‌ ರಿಜ್ವಾನ್‌ 55 ರನ್‌ ಗಳಿಸಿದರೂ, ಇದು ತಂಡಕ್ಕೆ ಯಾವುದೇ ಲಾಭ ಮಾಡಿಕೊಡಲಿಲ್ಲ. ಇದರಿಂದಾಗಿ ಪಾಕಿಸ್ತಾನ 23 ರನ್‌ಗಳಿಂದ ಸೋಲು ಕಂಡಿತು.

 

Follow Us:
Download App:
  • android
  • ios