Asia Cup ಟೂರ್ನಿಯಲ್ಲಿ ಬಾಬರ್ ಅಜಂ ಫೇಲ್, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್..!
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬಾಬರ್ ಅಜಂ
ಏಷ್ಯಾಕಪ್ ಟೂರ್ನಿಯ 6 ಇನಿಂಗ್ಸ್‌ಗಳಿಂದ ಬಾಬರ್ ಅಜಂ ಗಳಿಸಿದ್ದು ಕೇವಲ 68 ರನ್
ಏಷ್ಯಾಕಪ್ ಫೈನಲ್ ಸೋಲಿನ ಬೆನ್ನಲ್ಲೇ ಪಾಕ್ ನಾಯಕ ಬಾಬರ್ ಅಜಂ ಫುಲ್ ಟ್ರೋಲ್
ದುಬೈ(ಸೆ.12): ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೂ ಮುನ್ನ ಅದ್ಭುತ ಫಾರ್ಮ್‌ನಲ್ಲಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ, ಯುಎಇನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ ಮುಖಭಂಗ ಅನುಭವಿಸಿದ್ದಾರೆ. ಏಷ್ಯಾಕಪ್ ಟೂರ್ನಿಯುದ್ದಕ್ಕೂ ಲಯದ ಸಮಸ್ಯೆ ಎದುರಿಸಿದ್ದ ಅಜಂ, ಶ್ರೀಲಂಕಾ ವಿರುದ್ದ ದುಬೈ ಮೈದಾನದಲ್ಲಿ ನಡೆದ ಫೈನಲ್‌ನಲ್ಲಾದರೂ ಅಬ್ಬರಿಸಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ದ ಬಾಬರ್ ಅಜಂ 6 ಎಸೆತಗಳನ್ನು ಎದುರಿಸಿ ಕೇವಲ 5 ರನ್ ಬಾರಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಇದರ ಬೆನ್ನಲ್ಲೇ ಬಾಬರ್ ಅಜಂ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಆಗಿದ್ದಾರೆ.
ಹೌದು, ಬಾಬರ್ ಅಜಂ, ಈ ವರ್ಷದಲ್ಲೇ ಅತ್ಯಂತ ಹೀನಾಯ ಪ್ರದರ್ಶನವನ್ನು ಏಷ್ಯಾಕಪ್ ಟೂರ್ನಿಯಲ್ಲಿ ತೋರಿದ್ದಾರೆ. ಬಾಬರ್ ಅಜಂ, ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ 6 ಇನಿಂಗ್ಸ್‌ಗಳನ್ನಾಡಿ ಕೇವಲ 11.33ರ ಬ್ಯಾಟಿಂಗ್ ಸರಾಸರಿಯಲ್ಲಿ 68 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಏಷ್ಯಾಕಪ್ ಟೂರ್ನಿಯಲ್ಲಿ ಈ ಬಾರಿ ಸೂಪರ್ 4 ಹಂತದಲ್ಲಿ ಶ್ರೀಲಂಕಾ ವಿರುದ್ದವೇ 30 ರನ್ ಗಳಿಸಿದ್ದೇ, ಅಜಂ ಟೂರ್ನಿಯ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು.
ಏಷ್ಯಾಕಪ್ ಟೂರ್ನಿಗೂ ಮುನ್ನ ಬಾಬರ್ ಅಜಂ, ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಅದ್ಭುತವಾಗಿ ರನ್ ಬಾರಿಸುವ ಮೂಲಕ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದರು. ಬಾಬರ್ ಅಜಂ, ಶ್ರೀಲಂಕಾ ಎದುರಿನ ಟೆಸ್ಟ್‌ನಲ್ಲಿ ಒಂದು ಶತಕ ಹಾಗೂ ಒಂದು ಅರ್ಧಶತಕ ಬಾರಿಸಿದ್ದರು. ಇದಾದ ಬಳಿಕ ನೆದರ್‌ಲೆಂಡ್ ವಿರುದ್ದ ಮೂರು ಏಕದಿನ ಪಂದ್ಯಗಳಲ್ಲೂ 3 ಅರ್ಧಶತಕ ಸಿಡಿಸಿ ತಮ್ಮ ಸ್ಥಿರ ಪ್ರದರ್ಶನದ ಮೂಲಕ ಮಿಂಚಿದ್ದರು. ಆದರೆ ಏಷ್ಯಾಕಪ್ ಟೂರ್ನಿಯಲ್ಲಿ ಬಾಬರ್ ಅಜಂ, ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರೆ.
Asia Cup 2022: ಪಾಕಿಸ್ತಾನಕ್ಕೆ ಸ್ಪಿನ್ ಬಲೆ, ಏಷ್ಯಾಕಪ್‌ಗೆ ಶ್ರೀಲಂಕಾ ದೊರೆ!
ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕನ ಪ್ರದರ್ಶನದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಹಾಗೂ ಮೀಮ್ಸ್‌ಗಳು ವೈರಲ್ ಆಗಿವೆ. ಗುರುಕೀರತ್ ಸಿಂಗ್ ಗಿಲ್ ಎನ್ನುವವರು, ಏಷ್ಯಾಕಪ್ ಟೂರ್ನಿಯಲ್ಲಿ ಬಾಬರ್ ಅಜಂ ಕೇವಲ 11.33ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಬಾರಿಸುತ್ತಾರೆ ಎಂದು ಯಾರಾದರೂ ಅಂದುಕೊಂಡಿದ್ದರಾ? ಸದ್ಯ ಅವರ ಬ್ಯಾಟಿಂಗ್ ಸರಾಸರಿ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಬೌಲರ್‌ಗಳಾದ ದಹಾನಿ(16) ಹಾಗೂ ನಸೀಮ್ ಶಾ(14) ಅವರಿಗಿಂತ ಕಡಿಮೆ ಇದೆ ಎಂದು ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.
ಇನ್ನೊಬ್ಬ ನೆಟ್ಟಿಗ, ಏಷ್ಯಾಕಪ್ ಟೂರ್ನಿಯಲ್ಲಿ ಬಾಬರ್ ಅಜಂ ಬಾರಿಸಿದ ರನ್ ಮಾಹಿತಿ ಪೋಸ್ಟ್ ಮಾಡಿ, ಇದರ ಜತೆಗೆ ಏಷ್ಯಾಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ಹಾಗೂ ನೆದರ್‌ಲೆಂಡ್ ತಂಡಗಳೇಕೆ ಪಾಲ್ಗೊಳ್ಳುವುದಿಲ್ಲವೆಂದು ಬಾಬರ್ ಅಜಂ ಚಿಂತಿಸುತ್ತಿರುವಂತೆ ಫೋಟೋ ಪೋಸ್ಟ್ ಮಾಡಲಾಗಿದೆ. ಯಾಕೆಂದರೆ ಬಾಬರ್ ಅಜಂ, ಜಿಂಬಾಬ್ವೆ ಹಾಗೂ ನೆದರ್‌ಲೆಂಡ್ಸ್ ಎದುರು ರನ್ ಮಳೆ ಸುರಿಸಿದ್ದಾರೆ.
ಇನ್ನೋರ್ವ ನೆಟ್ಟಿಗ, ಪಾಕಿಸ್ತಾನದ ಎಲ್ಲಾ ಪಂದ್ಯಗಳನ್ನು ಸಾಕಷ್ಟು ಬದ್ದತೆಯಿಂದ ವೀಕ್ಷಿಸಿದ ಏಕೈಕ ಪಾಕಿಸ್ತಾನಿ ಎಂದರೆ ಅದು ಬಾಬರ್ ಅಜಂ ಎಂದು ಕಾಲೆಳೆದಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು ಆರಂಭಿಕ ಆಘಾತದ ನಡುವೆಯೂ ಭನುಕಾ ರಾಜಪಕ್ಸಾ ಹಾಗು ವನಿಂದು ಹಸರಂಗ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ಕಳೆದುಕೊಂಡು 170 ರನ್ ಬಾರಿಸಿತ್ತು. ಇನ್ನು ಸವಾಲಿನ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಆರಂಭದಲ್ಲೇ ಬಾಬರ್ ಅಜಂ ಹಾಗೂ ಫಖರ್ ಜಮಾನ್ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಮೊಹಮ್ಮದ್ ರಿಜ್ವಾನ್(55) ಹಾಗೂ ಇಫ್ತಿಕರ್ ಅಹಮ್ಮದ್(32) ಜೋಡಿ 71 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತಾದರೂ, ವನಿಂದು ಹಸರಂಗ ಅವರ ಬೌಲಿಂಗ್‌ನ ಒಂದೇ ಓವರ್‌ನಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಳ್ಳುವ ಮೂಲಕ ನಾಟಕೀಯ ಕುಸಿತ ಕಂಡಿತು. ಪರಿಣಾಮ ಪಾಕಿಸ್ತಾನ ತಂಡವು 147 ರನ್ ಗಳಿಸಿ ಆಲೌಟ್ ಆಗುವ ಮೂಲಕ ಮೂರನೇ ಬಾರಿಗೆ ಏಷ್ಯಾಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು.