ಕನ್ನಡತಿ, ತಾರಾ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್‌ಗೆ ಒಲಿದ ಗೌರವ ಡಾಕ್ಟರೇಟ್
ಭಾರತದ ತಾರಾ ಮಹಿಳಾ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್‌ಗೆ ಒಲಿದ ಗೌರವ ಡಾಕ್ಟರೇಟ್
ಉದಯಪುರದ ಎಸ್.ಪಿ.ಎಸ್.ಯು ವಿಶ್ವವಿದ್ಯಾಲಯದಿಂದ ಗೌರವ
2014ರಲ್ಲಿ ಭಾರತ ಮಹಿಳಾ ತಂಡದ ಪರ ಪಾದಾರ್ಪಣೆ ಮಾಡದ್ದ ರಾಜೇಶ್ವರಿ ಗಾಯಕ್ವಾಡ್
ಉದಯಪುರ(ನ.16): ಭಾರತ ಮಹಿಳಾ ಕ್ರಿಕೆಟ್ ತಂಡದ ತಾರಾ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ರಾಜಸ್ಥಾನದ ಉದಯಪುರದ ಎಸ್.ಪಿ.ಎಸ್.ಯು ವಿಶ್ವವಿದ್ಯಾಲಯವು ಕನ್ನಡತಿ ರಾಜೇಶ್ವರಿ ಗಾಯಕ್ವಾಡ್‌ಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿದೆ.
ಇತ್ತೀಚೆಗೆ ಎಸ್.ಪಿ.ಎಸ್.ಯು ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ಮಹಿಳಾ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್‌ಗೆ, ಎಸ್.ಪಿ.ಎಸ್.ಯು ವಿಶ್ವವಿದ್ಯಾಲಯ ಅಧ್ಯಕ್ಷ ಡಾ. ಪದ್ಮಕಲಿ ಬ್ಯಾನರ್ಜಿ, ಡಾ. ನಿಧಿಪತಿ ಸಿಂಗಾನಿಯಾ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದರು.
ಕೆಲ ತಿಂಗಳುಗಳ ಹಿಂದಷ್ಟೇ ನಡೆದ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್‌ಗೆ ಅವಕಾಶ ನೀಡಲಾಗಿತ್ತು. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಫೈನಲ್ ಪ್ರವೇಶಿಸಿ ಬೆಳ್ಳಿ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತು. ಈ ತಂಡದಲ್ಲಿ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಕೂಡಾ ಸ್ಥಾನ ಪಡೆದಿದ್ದರು. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರವು ರಾಜೇಶ್ವರಿ ಗಾಯಕ್ವಾಡ್‌ಗೆ 15 ಲಕ್ಷ ರುಪಾಯಿ ನಗದು ಬಹುಮಾನ ನೀಡಿ ಗೌರವಿಸಿತ್ತು.
ಎಡಗೈ ಸ್ಪಿನ್ನರ್ ಆಗಿರುವ ರಾಜೇಶ್ವರಿ ಗಾಯಕ್ವಾಡ್ 2014ರ ಜನವರಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಶ್ರೀಲಂಕಾ ಎದುರಿನ ಏಕದಿನ ಪಂದ್ಯದ ವೇಳೆ ರಾಜೇಶ್ವರಿ ಗಾಯಕ್ವಾಡ್ ಭಾರತ ಪರ ಮೊದಲ ಪಂದ್ಯವನ್ನಾಡಿದ್ದರು. ತಂದೆಯಿಂದ ಸ್ಪೂರ್ತಿ ಪಡೆದು ಕ್ರಿಕೆಟ್ ಆಡಲು ಆರಂಭಿಸಿದ್ದ ರಾಜೇಶ್ವರಿ ಗಾಯಕ್ವಾಡ್, ತಮ್ಮ ತಂದೆಯ ಕನಸಿನಂತೆ ಭಾರತ ತಂಡಕ್ಕೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ರಾಜೇಶ್ವರಿ ಮೊದಲ ಅಂತಾರಾಷ್ಟ್ರೀಯ ಸರಣಿಯನ್ನಾಡಿದ ಬೆನ್ನಲ್ಲೇ ಅವರ ತಂದೆ ಹೃದಯಸ್ತಂಭನದಿಂದ ಕೊನೆಯುಸಿರೆಳೆದಿದ್ದರು.
IPL Auction ಆಟಗಾರರ ರಿಲೀಸ್ ಬಳಿಕ ಮಿನಿ ಐಪಿಎಲ್ ಹರಾಜಿಗೆ 10 ಫ್ರಾಂಚೈಸಿ ಬಳಿ ಉಳಿದಿರುವ ಹಣವೆಷ್ಟು..?
ಇನ್ನು 2017ರಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡವು ಫೈನಲ್‌ಗೇರುವಲ್ಲಿ ರಾಜೇಶ್ವರಿ ಗಾಯಕ್ವಾಡ್ ಮಹತ್ತರ ಪಾತ್ರವನ್ನು ವಹಿಸಿದ್ದರು. ಆ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮಹಿಳಾ ತಂಡವು ಕೇವಲ 9 ರನ್‌ಗಳ ರೋಚಕ ಸೋಲು ಅನುಭವಿಸುವ ಮೂಲಕ ಚೊಚ್ಚಲ ಏಕದಿನ ವಿಶ್ವಕಪ್ ಗೆಲ್ಲುವ ಭಾರತ ಮಹಿಳಾ ಕ್ರಿಕೆಟ್ ತಂಡದ ಕನಸು ನುಚ್ಚುನೂರಾಗಿತ್ತು. ಇನ್ನು ಇದೇ ಟೂರ್ನಿಯಲ್ಲಿ ರಾಜೇಶ್ವರಿ ಗಾಯಕ್ವಾಡ್, ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ಶ್ರೇಷ್ಠ ಬೌಲಿಂಗ್ ಪ್ರದರ್ಶನ(15/5) ನೀಡಿ ಗಮನ ಸೆಳೆದಿದ್ದರು.
ರಾಜೇಶ್ವರಿ ಗಾಯಕ್ವಾಡ್, ಭಾರತ ಮಹಿಳಾ ಕ್ರಿಕೆಟ್ ತಂಡದ ಪರ 2 ಟೆಸ್ಟ್, 64 ಏಕದಿನ ಹಾಗೂ 44 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 5, 99 ಹಾಗೂ 54 ವಿಕೆಟ್ ಕಬಳಿಸಿ ಮಿಂಚಿದ್ದಾರೆ.