* ಇಂದಿನಿಂದ 16ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಅದ್ದೂರಿ ಚಾಲನೆ* 52 ದಿನಗಳ ಕಾಲ ನಡೆಯಲಿರುವ ಚುಟುಕು ಕ್ರಿಕೆಟ್ ಹಬ್ಬ* 10 ತಂಡಗಳ ನಡುವೆ ಪ್ರಶಸ್ತಿಗಾಗಿ ಕಾದಾಟ

ಅಹಮದಾಬಾದ್‌(ಮಾ.31): ಬಹುನಿರೀಕ್ಷಿತ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) 16ನೇ ಆವೃತ್ತಿಗೆ ಶುಕ್ರವಾರ ಚಾಲನೆ ದೊರೆಯಲಿದೆ. 50ಕ್ಕೂ ಹೆಚ್ಚು ದಿನಗಳ ಕಾಲ 10 ತಂಡಗಳ ನಡುವೆ ಟ್ರೋಫಿಗಾಗಿ ಕಾದಾಟ ನಡೆಯಲಿದ್ದು, ಅಭಿಮಾನಿಗಳಿಗೆ 300ಕ್ಕೂ ಹೆಚ್ಚು ಗಂಟೆಗಳ ಕಾಲ ಭರಪೂರ ಮನರಂಜನೆ ಸಿಗಲಿದೆ.

ಈ ಸಲವೂ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌, 4 ಬಾರಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡಗಳಾಗಿ ಕಣಕ್ಕಿಳಿಯಲಿದ್ದು, ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು(ಆರ್‌ಸಿಬಿ)ಗೆ ಚೊಚ್ಚಲ ಟ್ರೋಫಿ ಗೆಲ್ಲುವ ಛಲದೊಂದಿಗೆ ಮೈದಾನಕ್ಕಿಳಿಯಲಿದೆ. ಡೆಲ್ಲಿ ಕ್ಯಾಪಿಟಲ್ಸ್‌, ಪಂಜಾಬ್‌ ಕಿಂಗ್ಸ್‌ ಹಾಗೂ ಲಖನೌ ಸೂಪರ್‌ಜೈಂಟ್ಸ್‌ ತಂಡಗಳೂ ಮೊದಲ ಬಾರಿಗೆ ಚಾಂಪಿಯನ್‌ ಆಗಲು ಕಾಯುತ್ತಿವೆ.

16ನೇ ಆವೃತ್ತಿಯು ಹಲವು ಹೊಸತುಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ. ‘ಇಂಪ್ಯಾಕ್ಟ್’ ಆಟಗಾರ ನಿಯಮ, ಟಾಸ್‌ ಬಳಿಕ ಆಡುವ ಹನ್ನೊಂದರ ಬಳಗದ ನಿರ್ಧಾರ, ವೈಡ್‌, ನೋಬಾಲ್‌ಗೂ ಡಿಆರ್‌ಎಸ್‌ ಬಳಕೆ ಆಯ್ಕೆ ಹೀಗೆ ಕೆಲ ಹೊಸ ನಿಯಮಗಳು ರೋಚಕತೆ ಹೆಚ್ಚಿಸಲಿವೆ. ಜೊತೆಗೆ ಈ ಬಾರಿ ಟೀವಿ ವರ್ಸಸ್‌ ಡಿಜಿಟಲ್‌ ‘ಯುದ್ಧಕ್ಕೂ’ ಐಪಿಎಲ್‌ ಸಾಕ್ಷಿಯಾಗಲಿದೆ.

IPL 2023: ಈ ಬಾರಿ ಪರಿಚಯಗೊಳ್ಳಲಿರುವ ಹೊಸ ರೂಲ್ಸ್‌ಗಳೇನು? ಐಪಿಎಲ್‌ ಫ್ಯಾನ್ಸ್ ತಿಳಿದಿರಬೇಕಾದ ಸಂಗತಿಗಳಿವು

ಟೀವಿ ಪ್ರಸಾರ ಹಕ್ಕು ಸ್ಟಾರ್‌ ಸ್ಪೋರ್ಟ್ಸ್ ವಾಹಿನಿಯ ಬಳಿ ಇದ್ದರೆ, ಡಿಜಿಟಲ್‌ ಪ್ರಸಾರ ಹಕ್ಕು ವಯಾಕಾಂ 18(ಜಿಯೋ) ಸಂಸ್ಥೆ ಬಳಿ ಇದೆ. ಪ್ರೇಕ್ಷಕರು ಯಾವುದನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿರುವ ಅಂಶ.

Scroll to load tweet…

ಬಾಲಿವುಡ್‌ ತಾರೆಯರ ಶೋ!

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯಕ್ಕೂ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಾಲಿವುಡ್‌ ತಾರೆಯರಾದ ತಮನ್ಹಾ ಭಾಟಿಯಾ, ರಶ್ಮಿಕಾ ಮಂದಣ್ಣ, ಖ್ಯಾತ ಗಾಯಕ ಅರಿಜಿತ್‌ ಸಿಂಗ್‌ ಪ್ರದರ್ಶನ ನೀಡಲಿದ್ದಾರೆ. ಇನ್ನೂ ಕೆಲ ಮನರಂಜನಾ ಕಾರ‍್ಯಕ್ರಮಗಳನ್ನು ಬಿಸಿಸಿಐ ಆಯೋಜಿಸಿದೆ. ಸಂಜೆ 6ಕ್ಕೆ ಉದ್ಘಾಟನಾ ಸಮಾರಂಭ ಆರಂಭಗೊಳ್ಳಲಿದ್ದು, ಒಂದು ಗಂಟೆ ಕಾಲ ನಡೆಯಲಿದೆ.

Scroll to load tweet…

2019ರ ಬಳಿಕ ಮೊದಲ ಸಲ ತವರು-ತವರಿನಾಚೆ ಮಾದರಿ

ಐಪಿಎಲ್‌ ಮತ್ತೆ ತನ್ನ ಹಳೆಯ ಮಾದರಿಗೆ ವಾಪಸಾಗಿದ್ದು, ತಂಡಗಳು 2019ರ ಬಳಿಕ ತಮ್ಮ ತಮ್ಮ ತವರಿನಲ್ಲಿ ತಲಾ 7 ಪಂದ್ಯಗಳನ್ನು ಆಡಲಿವೆ. 10 ತಂಡಗಳು ಒಟ್ಟು 12 ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನಾಡಲಿವೆ. ರಾಜಸ್ಥಾನ ತಂಡವು ತನ್ನ ತವರಿನ ಪಂದ್ಯಗಳನ್ನು ಜೈಪುರ, ಗುವಾಹಟಿಯಲ್ಲಿ ಆಡಿದರೆ, ಪಂಜಾಬ್‌ ತಂಡವು ಮೊಹಾಲಿ ಹಾಗೂ ಧರ್ಮಶಾಲಾವನ್ನು ಆಯ್ಕೆ ಮಾಡಿಕೊಂಡಿದೆ.

ಶೀಘ್ರ ತೆಂಡುಲ್ಕರ್‌ ಪುತ್ರ ಐಪಿಎಲ್‌ಗೆ ಪಾದಾರ್ಪಣೆ?

ಮುಂಬೈ: ಸಚಿನ್‌ ತೆಂಡುಲ್ಕರ್‌ರ ಪುತ್ರ ಅರ್ಜುನ್‌ ಈ ಆವೃತ್ತಿಯಲ್ಲಿ ಐಪಿಎಲ್‌ಗೆ ಪಾರ್ದಾಪಣೆ ಮಾಡುವ ನಿರೀಕ್ಷೆ ಇದೆ. ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅರ್ಜುನ್‌ಗೆ ಅವಕಾಶ ಸಿಗಲಿದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ, ‘ಇದೊಂದು ಉತ್ತಮ ಪ್ರಶ್ನೆ. ಅರ್ಜುನ್‌ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ನೋಡೋಣ’ ಎಂದರು. 

ಇದೇ ಪ್ರಶ್ನೆಗೆ ಉತ್ತರಿಸಿದ ಪ್ರಧಾನ ಕೋಚ್‌ ಮಾರ್ಕ್ ಬೌಷರ್‌, ‘ಅರ್ಜುನ್‌ ಗಾಯದಿಂದ ಚೇತರಿಸಿಕೊಂಡಿದ್ದು, ಅವರ ಮೇಲೆ ನಿರೀಕ್ಷೆ ಇರಿಸಿದ್ದೇವೆ. ನೆಟ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು, ಪಾದಾರ್ಪಣೆಗೆ ಅವಕಾಶ ಸಿಗಬಹುದು’ ಎಂದರು.