Asianet Suvarna News Asianet Suvarna News

IPL 2023: ಈ ಬಾರಿ ಪರಿಚಯಗೊಳ್ಳಲಿರುವ ಹೊಸ ರೂಲ್ಸ್‌ಗಳೇನು? ಐಪಿಎಲ್‌ ಫ್ಯಾನ್ಸ್ ತಿಳಿದಿರಬೇಕಾದ ಸಂಗತಿಗಳಿವು

2023ನೇ ಸಾಲಿನ ಐಪಿಎಲ್ ಟೂರ್ನಿಗೆ ಕ್ಷಣಗಣನೆ
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹೊಸ ರೂಲ್ಸ್ ಪರಿಚಯ
ಕ್ರಿಕೆಟ್ ಅಭಿಮಾನಿಗಳು ತಿಳಿದಿರಲೇಬೇಕಾದ ಹೊಸ ರೂಲ್ಸ್‌ಗಳಿವು

IPL 2023 Impact player DRS for Wide and No Ball new rules implements in tournament all cricket fans need to know kvn
Author
First Published Mar 30, 2023, 4:52 PM IST

ಬೆಂಗಳೂರು(ಮಾ.30): 2023ರ ಐಪಿಎಲ್‌ಗೆ ಕೇವಲ ಒಂದೇ ದಿನ ಬಾಕಿ ಇದ್ದು, ಮಾ.31ರಿಂದ ಮೇ 28ರ ವರೆಗೂ ನಡೆಯಲಿರುವ ಈ ವರ್ಷದ ಟೂರ್ನಿಯು ಹಲವು ಹೊಸ ನಿಯಮಗಳೊಂದಿಗೆ ನಡೆಯಲಿದೆ. ತಂಡಗಳಿಗೆ ಹೊಸ ಆಯ್ಕೆಗಳು ದೊರೆಯಲಿದ್ದು, ಮೈದಾನದಲ್ಲಿ ಆಟಗಾರರು ನಡೆಸುವ ರಣತಂತ್ರ, ಮಾಡು ಲೆಕ್ಕಾಚಾರದಷ್ಟೇ ಮೈದಾನ ಹೊರಗಿರುವ ಕೋಚ್‌ಗಳು, ಸಹಾಯಕ ಸಿಬ್ಬಂದಿಗಳಿಗಳ ಮೇಲೂ ಜವಾಬ್ದಾರಿ ಇರಲಿದೆ. ಈ ವರ್ಷ ಹೊಸದಾಗಿ ಪರಿಚಯಗೊಳ್ಳಲಿರುವ ಪ್ರಮುಖ ನಿಯಮಗಳು ಯಾವುವು? ಆ ವಿವರ ಇಲ್ಲಿದೆ.

ಇಂಪ್ಯಾಕ್ಟ್ ಆಟಗಾರ

ಪಂದ್ಯವೊಂದರ ಆಡುವ ಹನ್ನೊಂದರಲ್ಲಿರುವ ಒಬ್ಬ ಆಟಗಾರನ ಬದಲು ಮತ್ತೊಬ್ಬ ಆಟಗಾರ ಪಂದ್ಯದ ನಡುವೆಯೇ ಕಣಕ್ಕಿಳಿಯಬಹುದು. ಟಾಸ್‌ ವೇಳೆ ಆಡುವ ಹನ್ನೊಂದರ ಪಟ್ಟಿಯೊಂದಿಗೆ ನಾಲ್ವರು ಬದಲಿ ಆಟಗಾರನ ಹೆಸರನ್ನೂ ತಂಡಗಳು ನೀಡಬೇಕು. ಈ ನಾಲ್ವರ ಪೈಕಿ ಒಬ್ಬ ಆಟಗಾರ ಇನ್ನಿಂಗ್‌್ಸನ 14ನೇ ಓವರ್‌ನ ಮುಕ್ತಾಯದ ಮೊದಲು ಮತ್ತೊಬ್ಬ ಆಡುವ ಹನ್ನೊಂದರಲ್ಲಿರುವ ಒಬ್ಬ ಆಟಗಾರನ ಬದಲು ಮೈದಾನಕ್ಕಿಳಿಬಹುದು. ಔಟಾಗಿರುವ ಬ್ಯಾಟರ್‌ ಬದಲೂ ಇಂಪ್ಯಾಕ್ಟ್ ಆಟಗಾರ ಕಣಕ್ಕಿಳಿಯಬಹುದು. ಆದರೆ ತಂಡವು ಕೇವಲ 11 ಬ್ಯಾಟರ್‌ಗಳನ್ನಷ್ಟೇ ಬಳಸಬೇಕು. ಇನ್ನು ಕೆಲ ಓವರ್‌ಗಳನ್ನು ಬೌಲ್‌ ಮಾಡಿರುವ ಬೌಲರ್‌ನ ಬದಲಿಗೂ ಇಂಪ್ಯಾಕ್ಟ್ ಆಟಗಾರ ಕಣಕ್ಕಿಳಿದು ಪೂರ್ತಿ 4 ಓವರ್‌ ಎಸೆಯಬಹುದು.

ಐಪಿಎಲ್‌ ಸಮರಕ್ಕೆ 10 ತಂಡಗಳು ಸಿದ್ಧ; ಈ ಸಲ ಕಪ್ ಯಾರದ್ದು?

ಇಂಪ್ಯಾಕ್ಟ್ ಪ್ಲೇಯರ್‌ ಒಂದು ಓವರ್‌ನ ಕೊನೆಯಲ್ಲಿ ಮಾತ್ರ ಕಣಕ್ಕಿಳಿಯಬಹುದು. ಆದರೆ ಎರಡು ಸನ್ನಿವೇಶಗಳಲ್ಲಿ ಇದಕ್ಕೆ ವಿನಾಯಿತಿ ಇದೆ. ಬ್ಯಾಟ್ಸ್‌ಮನ್‌ ಔಟಾದಾಗ ಇಂಪ್ಯಾಕ್ಟ್ ಆಟಗಾರನನ್ನು ಕಣಕ್ಕಿಳಿಸಲು ತಂಡಗಳಿಗೆ ಅವಕಾಶವಿರಲಿದೆ. ಇನ್ನು ಆಟಗಾರ ಗಾಯಗೊಂಡು ಮೈದಾನದಿಂದ ಹೊರನಡೆದರೆ ಆ ಸಂದರ್ಭದಲ್ಲಿ ಇಂಪ್ಯಾಕ್ಟ್ ಆಟಗಾರ ಮೈದಾನ ಪ್ರವೇಶಿಸಬಹುದು. ಒಮ್ಮೆ ಇಂಪ್ಯಾಕ್ಟ್ ಆಟಗಾರನಿಗೆ ಜಾಗ ಬಿಟ್ಟುಕೊಟ್ಟು ಮೈದಾನ ತೊರೆಯುವ ಆಟಗಾರ ಮತ್ತೆ ಕಣಕ್ಕಿಳಿಯುವಂತಿಲ್ಲ. ಬದಲಿ ಫೀಲ್ಡರ್‌ ಆಗಿಯೂ ಅವರಿಗೆ ಕಣಕ್ಕಿಳಿಯಲು ಅವಕಾಶವಿರುವುದಿಲ್ಲ.

ಟಾಸ್‌ ಬಳಿಕ ತಂಡ ನಿರ್ಧಾರ!

ಸಾಮಾನ್ಯವಾಗಿ ಕ್ರಿಕೆಟ್‌ನಲ್ಲಿ ಟಾಸ್‌ಗೂ ಮೊದಲು ಆಡುವ ಹನ್ನೊಂದರ ಬಳಗದ ಪಟ್ಟಿಯನ್ನು ಎರಡೂ ತಂಡಗಳ ನಾಯಕರು ಪರಸ್ಪರ ಬದಲಿಸಿಕೊಳ್ಳುತ್ತಾರೆ. ಆದರೆ ಐಪಿಎಲ್‌ನಲ್ಲಿ ನಾಯಕರು ಟಾಸ್‌ಗೆ 2 ಪ್ರತ್ಯೇಕ ಪಟ್ಟಿಯೊಂದಿಗೆ ತೆರಳಲಿದ್ದು, ಟಾಸ್‌ ಆದ ಬಳಿಕ ಆಡುವ ಹನ್ನೊಂದರ ಪಟ್ಟಿಯನ್ನು ಬದಲಿಸಿಕೊಳ್ಳಲಿದ್ದಾರೆ. ಈ ಬದಲಾವಣೆಯಿಂದ ತಂಡಗಳು ತಾವು ಮೊದಲು ಬ್ಯಾಟ್‌ ಮಾಡಲಿದೆಯೋ ಅಥವಾ ಬೌಲ್‌ ಮಾಡಲಿದೆಯೋ ಎನ್ನುವುದನ್ನು ನೋಡಿಕೊಂಡು ಆಡುವ ಹನ್ನೊಂದರ ಬಳಗವನ್ನು ನಿರ್ಧರಿಸಬಹುದು.

ವೈಡ್‌, ನೋಬಾಲ್‌ಗೂ ಡಿಆರ್‌ಎಸ್‌!

ಈ ಸಲ ಐಪಿಎಲ್‌ನಲ್ಲಿ ಅಂಪೈರ್‌ಗಳ ವೈಡ್‌ ಹಾಗೂ ನೋಬಾಲ್‌ ತೀರ್ಪುಗಳನ್ನೂ ಪ್ರಶ್ನಿಸಲು ತಂಡಗಳಿಗೆ ಅವಕಾಶ ಸಿಗಲಿದೆ. ಪಂದ್ಯಗಳ ನಿರ್ಣಾಯಕ ಹಂತಗಳಲ್ಲಿ ಈ ಆಯ್ಕೆಯ ಬಳಕೆಯು ಪರಿಣಾಮಕಾರಿ ಆಗಬಹುದು.

ಏಪ್ರಿಲ್‌ನಲ್ಲೇ ಆರ್‌ಸಿಬಿಗೆ ತವರಿನಲ್ಲಿ 6 ಪಂದ್ಯ!

ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಆರ್‌​ಸಿಬಿ ತವರಿನಲ್ಲಿ ನಡೆಯಬೇಕಿರುವ 7 ಪಂದ್ಯಗಳ ಪೈಕಿ 6 ಪಂದ್ಯಗಳನ್ನು ಏಪ್ರಿಲ್‌ ತಿಂಗಳಲ್ಲೇ ಆಡಲಿದೆ. ಒಂದು ಪಂದ್ಯ ಮಾತ್ರ ಮೇ 21ರಂದು ಗುಜರಾತ್‌ ವಿರುದ್ಧ ನಡೆಯಲಿದೆ. ಟೂರ್ನಿಯ ಮೊದಲಾರ್ಧದಲ್ಲೇ ತನ್ನ 6 ತವರಿನ ಪಂದ್ಯಗಳನ್ನು ಪೂರೈಸಲಿರುವ ಆರ್‌ಸಿಬಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಆರ್‌ಸಿಬಿ ಟೂರ್ನಿಯ ದ್ವಿತೀಯಾರ್ಧದಲ್ಲಿ ದಿಢೀರ್‌ ಲಯ ಕಳೆದುಕೊಳ್ಳುವುದನ್ನು ಕೆಲ ವರ್ಷಗಳಿಂದ ನೋಡಿದ್ದೇವೆ. ಈ ಬಾರಿ ನಿರ್ಣಾಯಕ ಹಂತದಲ್ಲಿ ತಂಡಕ್ಕೆ ತವರಿನ ಲಾಭ ಸಿಗುವುದಿಲ್ಲ. ಹೀಗಾಗಿ ಆರಂಭಿಕ ಪಂದ್ಯಗಳಲ್ಲೇ ಪ್ಲೇ-ಆಫ್‌ಗೇರಲು ಬೇಕಿರುವಷ್ಟುಅಂಕ ಗಳಿಕೆಯತ್ತ ಆರ್‌ಸಿಬಿ ಹೆಚ್ಚು ಗಮನ ನೀಡಬೇಕಿದೆ.

2020ರಲ್ಲಿ ಆರ್‌ಸಿಬಿ ಲೀಗ್‌ ಹಂತದ ಕೊನೆ 4 ಪಂದ್ಯಗಳಲ್ಲಿ ಸೋತ್ತಿತ್ತು. 2021ರ ದ್ವಿತೀಯಾರ್ಧದಲ್ಲಿ ಸತತ ಸೋಲು ಕಂಡರೂ ತಿಣುಕಾಡಿ ಪ್ಲೇ-ಆಫ್‌ಗೇರಿತ್ತು. 2022ರಲ್ಲಿ ಕೊನೆ 7 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆದ್ದಿತ್ತು.

ಈ ಬಾರಿ ಹಲವು ತಾರಾ ಆಟಗಾರರಿಲ್ಲ!

ಈ ಸಲ ಐಪಿ​ಎ​ಲ್‌ಗೆ ಗೈರಾ​ಗ​ಲಿ​ರುವ ಆಟ​ಗಾ​ರರ ಪಟ್ಟಿದೊಡ್ಡ​ದಿದ್ದು, ಭಾರ​ತದ ಹಲವು ತಾರಾ ಆಟ​ಗಾ​ರರು ಟೂರ್ನಿ​ಯಿಂದ ಹೊರ​ಗು​ಳಿ​ಯ​ಲಿ​ದ್ದಾರೆ. ಮುಂಬೈನ ಪ್ರಮುಖ ವೇಗಿ ಜಸ್‌​ಪ್ರೀತ್‌ ಬೂಮ್ರಾ, ಕೆಕೆ​ಆರ್‌ ನಾಯಕ ಶ್ರೇಯಸ್‌ ಅಯ್ಯ​ರ್‌ ಗಾಯ​ದಿಂದ ಇನ್ನೂ ಚೇತ​ರಿ​ಸಿ​ಕೊ​ಳ್ಳದ ಕಾರಣ ಈ ಬಾರಿ ಆಡು​ತ್ತಿಲ್ಲ. ಅಪ​ಘಾ​ತ​ಕ್ಕೀ​ಡಾಗಿ ಚಿಕಿತ್ಸೆ ಪಡೆ​ಯು​ತ್ತಿ​ರುವ ರಿಷಭ್‌ ಪಂತ್‌ ಕೂಡಾ ಗೈರಾ​ಗ​ಲಿದ್ದು, ಡೆಲ್ಲಿಗೆ ಹಿನ್ನ​ಡೆ​ಯಾ​ಗಬಹುದು. ಇನ್ನು ರಾಜ​ಸ್ಥಾ​ನ ತಂಡದ ಪ್ರಸಿದ್‌್ಧ ಕೃಷ್ಣ, ಚೆನ್ನೈ ತಂಡದ ಮುಕೇಶ್‌ ಚೌಧರಿ, ಲಖನೌ ತಂಡದ ಮೊಹ್ಸಿನ್‌ ಖಾನ್‌ ಕೂಡಾ ಟೂರ್ನಿ​ಯಲ್ಲಿ ಆಡು​ತ್ತಿಲ್ಲ. ವಿದೇ​ಶಿ​ಯರ ಪೈಕಿ ಚೆನ್ನೈನ ಕೈಲ್‌ ಜೇಮಿ​ಸನ್‌, ಆರ್‌​ಸಿ​ಬಿಯ ವಿಲ್‌ ಜ್ಯಾಕ್ಸ್‌, ಮುಂಬೈನ ಜಾಯಿ ರಿಚ​ರ್ಡ್‌​ಸ​ನ್‌, ಪಂಜಾ​ಬ್‌ನ ಜಾನಿ ಬೇರ್‌​ಸ್ಟೋವ್‌ ಟೂರ್ನಿಗೆ ಗೈರಾ​ಗ​ಲಿ​ದ್ದಾ​ರೆ.

Follow Us:
Download App:
  • android
  • ios