ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 13 ರನ್‌ಗಳ ರೋಚಕ ಜಯ ಸಾಧಿಸಿದ ಭಾರತೀಯ ಮಹಿಳಾ ತಂಡವು ಸರಣಿಯನ್ನು ವಶಪಡಿಸಿಕೊಂಡಿತು. ಹರ್ಮನ್‌ಪ್ರೀತ್ ಕೌರ್ ಅವರ ಶತಕ ಮತ್ತು ಕ್ರಾಂತಿ ಗೌಡ ಅವರ ಐದು ವಿಕೆಟ್‌ಗಳ ಸಾಧನೆಯಿಂದ ಭಾರತ ಐತಿಹಾಸಿಕ ಗೆಲುವು ದಾಖಲಿಸಿತು.
ಚೆಸ್ಟರ್-ಲಿ-ಸ್ಟ್ರೀಟ್: ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 13 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಭಾರತೀಯ ಮಹಿಳಾ ತಂಡವು ಸರಣಿಯನ್ನು ವಶಪಡಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಭಾರತೀಯ ಮಹಿಳಾ ತಂಡವು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಶತಕದ ನೆರವಿನಿಂದ 50 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 318 ರನ್‌ಗಳಿಸಿತು. ಇಂಗ್ಲೆಂಡ್ ಮಹಿಳಾ ತಂಡ 49.5 ಓವರ್‌ಗಳಲ್ಲಿ 305 ರನ್‌ಗಳಿಗೆ ಆಲೌಟ್ ಆಯಿತು. ನಾಯಕಿ ನಾಟ್ ಸ್ಕೈವರ್ (98) ಮತ್ತು ಎಮ್ಮಾ ಲ್ಯಾಂಬ್ (ಅರ್ಧಶತಕ) ಹೊರತಾಗಿಯೂ ಇಂಗ್ಲೆಂಡ್‌ಗೆ ಗೆಲುವು ಸಾಧ್ಯವಾಗಲಿಲ್ಲ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಭಾರತ ನಾಲ್ಕು ವಿಕೆಟ್‌ಗಳಿಂದ ಗೆದ್ದಿತ್ತು. ಮಳೆಯಿಂದಾಗಿ ಎರಡನೇ ಪಂದ್ಯವನ್ನು ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಇಂಗ್ಲೆಂಡ್ ಎಂಟು ವಿಕೆಟ್‌ಗಳಿಂದ ಗೆದ್ದಿತ್ತು. ಟಿ20 ಸರಣಿಯನ್ನು ಗೆದ್ದಿದ್ದ ಭಾರತೀಯ ಮಹಿಳಾ ತಂಡವು ಏಕದಿನ ಸರಣಿಯನ್ನೂ ಗೆದ್ದು ಐತಿಹಾಸಿಕ ಸಾಧನೆ ಮಾಡಿ ಇಂಗ್ಲೆಂಡ್‌ನಿಂದ ತವರಿಗೆ ವಾಪಾಸ್ಸಾಗುತ್ತಿದೆ.
ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಪ್ರಿಯಾಂಕಾ ರಾವತ್ (26) ಮತ್ತು ಸ್ಮೃತಿ ಮಂಧಾನ (45) ಉತ್ತಮ ಆರಂಭ ಒದಗಿಸಿದರು. ಆರಂಭಿಕ ವಿಕೆಟ್‌ಗೆ ಇಬ್ಬರೂ 64 ರನ್‌ಗಳ ಜೊತೆಯಾಟ ನೀಡಿದರು. ಇಬ್ಬರೂ 17 ರನ್‌ಗಳ ಅಂತರದಲ್ಲಿ ಔಟಾದ ನಂತರ ಹರ್ಲೀನ್ ಡಿಯೋಲ್ (45) ಮತ್ತು ಹರ್ಮನ್‌ಪ್ರೀತ್ ಭಾರತವನ್ನು 100 ರನ್‌ಗಳ ಗಡಿ ದಾಟಿಸಿದರು. 33ನೇ ಓವರ್‌ನಲ್ಲಿ ಹರ್ಲೀನ್ ಡಿಯೋಲ್ ಔಟಾದ ನಂತರ ಜೆಮಿಮಾ ರೋಡ್ರಿಗಸ್ (45 ಎಸೆತಗಳಲ್ಲಿ 50) ಮತ್ತು ರಿಚಾ ಘೋಷ್ (18 ಎಸೆತಗಳಲ್ಲಿ 38) ಹರ್ಮನ್‌ಪ್ರೀತ್ ಜೊತೆಗೆ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೊನೆಯ 10 ಓವರ್‌ಗಳಲ್ಲಿ ಭಾರತ 120 ರನ್‌ಗಳಿಸಿತು. ತನ್ನ ಏಳನೇ ಏಕದಿನ ಶತಕ ಬಾರಿಸಿದ ಹರ್ಮನ್‌ಪ್ರೀತ್ 49ನೇ ಓವರ್‌ನಲ್ಲಿ ಔಟಾದರು.
ಗೆಲುವಿಗೆ 319 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ಗೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಆಟಗಾರ್ತಿಯರಾದ ಆಮಿ ಜೋನ್ಸ್ (4) ಮತ್ತು ಟ್ಯಾಮಿ ಬ್ಯೂಮಾಂಟ್ (2) ಬೇಗನೆ ಔಟಾದರು. ಎಮ್ಮಾ ಲ್ಯಾಂಬ್ ಮತ್ತು ನಾಟ್ ಸ್ಕೈವರ್ ಇಂಗ್ಲೆಂಡ್‌ಗೆ ಗೆಲುವಿನ ಆಸೆ ಹುಟ್ಟಿಸಿದರು. ಆದರೆ ಐದು ಓವರ್‌ಗಳ ಅಂತರದಲ್ಲಿ ಸ್ಕೈವರ್ ಅವರನ್ನು ದೀಪ್ತಿ ಶರ್ಮಾ ಮತ್ತು ಲ್ಯಾಂಬ್ ಅವರನ್ನು ಶ್ರೀ ಚರಣಿ ಔಟ್ ಮಾಡಿದರು. ಸೋಫಿ ಡಂಕ್ಲಿ (34), ಆಲಿಸ್ ಡೇವಿಡ್ಸನ್ (44) ಮತ್ತು ಚಾರ್ಲೊಟ್ ಡೀನ್ (21) ಹೋರಾಡಿದರೂ ಪ್ರಯೋಜನವಾಗಲಿಲ್ಲ. 52 ರನ್‌ಗಳಿಗೆ ಆರು ವಿಕೆಟ್ ಪಡೆದ ಕ್ರಾಂತಿ ಗೌಡ ಅವರ ಬೌಲಿಂಗ್ ಪ್ರದರ್ಶನದಿಂದಾಗಿ ಭಾರತ ಗೆಲುವು ಸಾಧಿಸಿತು.
ಅಂಕಿ-ಅಂಶ:
* 18 ವರ್ಷದ ಕ್ರಾಂತಿ ಗೌಡ ಏಕದಿನ ಕ್ರಿಕೆಟ್‌ನಲ್ಲಿ ಐದು ವಿಕೆಟ್ ಪಡೆದ ಎರಡನೇ ಕಿರಿಯ ಭಾರತೀಯ ಮಹಿಳಾ ಆಟಗಾರ್ತಿ.
* ಇಂಗ್ಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಗಳನ್ನು ಒಟ್ಟಿಗೆ ಗೆದ್ದದ್ದು ಇದೇ ಮೊದಲು.
* ಇಂಗ್ಲೆಂಡ್‌ನಲ್ಲಿ ಮೂರು ಏಕದಿನ ಶತಕಗಳನ್ನು ಬಾರಿಸಿದ ಮೊದಲ ವಿದೇಶಿ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಹರ್ಮನ್‌ಪ್ರೀತ್ ಪಾತ್ರರಾದರು.
* ವಿದೇಶದಲ್ಲಿ ಏಕದಿನ ಪಂದ್ಯಗಳಲ್ಲಿ ಆರು ವಿಕೆಟ್ ಪಡೆದ ಮೂರನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆ ಕ್ರಾಂತಿ ಗೌಡ ಅವರದ್ದು.
⦁ ಭಾರತ ತಂಡ ವಿದೇಶಿ ಪ್ರವಾಸದಲ್ಲಿ 5ನೇ ಬಾರಿ ಟಿ20 ಹಾಗೂ ಏಕದಿನ ಸರಣಿ ಎರಡನ್ನೂ ಗೆದ್ದ ಸಾಧನೆ ಮಾಡಿದೆ.
