ಭಾರತ ಮತ್ತು ವೆಸ್ಟ್‌ಇಂಡೀಸ್‌ ನಡುವಿನ ಎರಡನೇ ಏಕದಿನ ಪಂದ್ಯ ಗುವಾಹಟಿಯಲ್ಲಿ ನಡೆಯಲಿದ್ದು, ಶುಭ್‌ಮನ್‌ ಗಿಲ್‌ ಪಡೆ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ವಿಂಡೀಸ್ ಆಟಗಾರ ಜಸ್ಟಿನ್ ಗ್ರೇವ್ಸ್‌ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿರುವುದು ಪ್ರವಾಸಿ ತಂಡಕ್ಕೆ ಆಘಾತ ತಂದಿದೆ.

ಗುವಾಹಟಿ: ಭಾರತ ಹಾಗೂ ವೆಸ್ಟ್‌ಇಂಡೀಸ್‌ ನಡುವಿನ 2ನೇ ಏಕದಿನ ಪಂದ್ಯ ಬುಧವಾರ ನಡೆಯಲಿದ್ದು, ಶುಭ್‌ಮನ್‌ ಗಿಲ್‌ ಪಡೆ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಹೀಗಿರುವಾಗಲೇ ಪ್ರವಾಸಿ ವೆಸ್ಟ್‌ ಇಂಡೀಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದ ಜಸ್ಟಿನ್ ಗ್ರೇವ್ಸ್‌ ಇದೀಗ ಗಾಯದ ಸಮಸ್ಯೆಯಿಮದ ತಂಡದಿಂದ ಹೊರಬಿದ್ದಿದ್ದಾರೆ.

ವೆಸ್ಟ್‌ ಇಂಡೀಸ್‌ಗೆ ಬಿಗ್ ಶಾಕ್

ತಿರುವನಂತಪುರಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಗ್ರೇವ್ಸ್‌ ಹಾಗೂ ಜಾನ್ ಕ್ಯಾಂಬೆಲ್ ಜೋಡಿ ಮೊದಲ 20 ಓವರ್‌ಗಳಲ್ಲಿ 135 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. ಭಾರತೀಯ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ್ದ ಗ್ರೇವ್ಸ್‌ 108 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ 101 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವು ಬೃಹತ್ ಮೊತ್ತ ಕಲೆಹಾಕಲು ನೆರವಾಗಿದ್ದರು.

ಇದೀಗ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಜಸ್ಟಿನ್ ಗ್ರೇವ್ಸ್‌ ಎರಡನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತ ಎದುರಿನ ಮೊದಲ ಏಕದಿನ ಪಂದ್ಯದ ವೇಳೆಯಲ್ಲಿಯೇ ಗ್ರೇವ್ಸ್ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಏಕದಿನ ಸರಣಿ ಗೆಲ್ಲಲು ತುದಿಗಾಲಲ್ಲಿ ನಿಂತ ಗಿಲ್ ಪಡೆ

ತಿರುವನಂತಪುರಂನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿತ್ತು. ಗಿಲ್‌ ಜೊತೆಗೆ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿ ಶತಕ ಸಿಡಿಸಿದ್ದರು. ಅಭಿಮಾನಿಗಳು ಅವರಿಂದ ಮತ್ತೊಂದು ಆಕರ್ಷಕ ಇನ್ನಿಂಗ್ಸ್‌ ನಿರೀಕ್ಷಿಸುತ್ತಿದ್ದಾರೆ. ರೋಹಿತ್‌ ಶರ್ಮಾ ಮೊದಲ ಪಂದ್ಯದಲ್ಲಿ ಉತ್ತಮ ಲಯದಲ್ಲಿದ್ದಂತೆ ಕಂಡುಬಂದರೂ ಅರ್ಧಶತಕದಿಂದ ವಂಚಿತರಾಗಿದ್ದರು. ಗುವಾಹಟಿಯಲ್ಲಿ ದೊಡ್ಡ ಇನ್ನಿಂಗ್ಸ್‌ ವಿಶ್ವಾಸದಲ್ಲಿದ್ದಾರೆ. ಇದೀಗ ಎರಡನೇ ಏಕದಿನ ಪಂದ್ಯವನ್ನು ಜಯಿಸುವ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಳ್ಳಲು ಗಿಲ್ ಪಡೆ ಎದುರು ನೋಡುತ್ತಿದೆ.

ಬೌಲಿಂಗ್‌ ವಿಭಾಗದಲ್ಲಿ ಕುಲ್ದೀಪ್‌ ಯಾದವ್‌ ಭಾರತಕ್ಕೆ ನೆರವಾಗಿದ್ದು, ಮತ್ತೊಂದು ವಿಂಡೀಸ್‌ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ. ಇನ್ನು, ಅನುಭವಿ ಸಿರಾಜ್‌ರನ್ನು ಮೊದಲ ಪಂದ್ಯದಿಂದ ಹೊರಗಿಟ್ಟು ಕೈಸುಟ್ಟುಕೊಂಡಿದ್ದ ತಂಡ, 2ನೇ ಪಂದ್ಯದಲ್ಲಿ ಅವರನ್ನು ಕಣಕ್ಕಿಳಿಸಲಿದೆಯೇ ಕಾದು ನೋಡಬೇಕಿದೆ.

ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆಗೆ

ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌