Pink Ball Test: ನಾಲ್ಕು ಹಾಗೂ ಐದನೇ ದಿನದ ಟಿಕೆಟ್ ಹಣ ವಾಪಾಸ್ ಪಡೆಯಲು ನೀವು ಹೀಗೆ ಮಾಡಿ..!
* ಭಾರತ ಹಾಗೂ ಲಂಕಾ ನಡುವಿನ ಪಿಂಕ್ ಬಾಲ್ ಟೆಸ್ಟ್ ಮೂರೇ ದಿನಕ್ಕೆ ಮುಕ್ತಾಯ
* ಮೊದಲ ಬಾರಿಗೆ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಆತಿಥ್ಯವಹಿಸಿದ್ದ ಬೆಂಗಳೂರು
* 4 ಹಾಗೂ 5ನೇ ದಿನದ ಟಿಕೆಟ್ ಖರೀದಿಸಿದವರಿಗೆ ಹಣ ವಾಪಾಸ್ ಮಾಡಲಿದೆ ಕೆಎಸ್‌ಸಿಎ
ಬೆಂಗಳೂರು(ಮಾ.15): ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ 2ನೇ ಟೆಸ್ಟ್ ಮೂರು ದಿನಗಳೊಳಗೆ ಮುಕ್ತಾಯಗೊಂಡ ಕಾರಣ, 4 ಹಾಗೂ 5ನೇ ದಿನದಾಟವನ್ನು ವೀಕ್ಷಿಸಲು ಟಿಕೆಟ್ ಖರೀದಿಸಿದ್ದವರಿಗೆ ಹಣ ವಾಪಸ್ ನೀಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ನಿರ್ಧರಿಸಿದೆ. ಪಿಂಕ್ ಬಾಲ್ ಟೆಸ್ಟ್‌ಗಾಗಿ(Pink Ball Test) 100 ರು., 500 ರು., 750 ರು. ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಟಿಕೆಟ್ ಖರೀದಿ ಮಾಡಿದ್ದವರಿಗೆ ಶನಿವಾರ ಮತ್ತು ಭಾನುವಾರ(ಮಾ.19 ಮತ್ತು 20)ದಂದು ಹಣ ವಾಪಸ್ ಸಿಗಲಿದೆ.
100 ರು. ಟಿಕೆಟ್ ಪಡೆದಿದ್ದವರು ಗೇಟ್ ನಂ.2, 500 ರು., ಟಿಕೆಟ್ ಪಡೆದಿದ್ದವರು ಗೇಟ್ ನಂ.19, 750 ರು., ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಟಿಕೆಟ್ ಖರೀದಿಸಿದ್ದವರು ಗೇಟ್ ನಂ.18ರ ಬಳಿ ಇರುವ ಕೌಂಟರ್‌ಗಳಿಗೆ ತೆರಳಿ ಮೂಲ ಟಿಕೆಟ್ ಹಿಂದಿರುಗಿಸಿ ಹಣ ವಾಪಸ್ ಪಡೆಯಬಹುದು ಎಂದು ಕೆಎಸ್‌ಸಿಎ ಪ್ರಕಟಣೆ ತಿಳಿಸಿದೆ.
2ನೇ ಟೆಸ್ಟ್: ಒಟ್ಟು 55000+ ಪ್ರೇಕ್ಷಕರಿಂದ ಕ್ರೀಡಾಂಗಣದಲ್ಲಿ ವೀಕ್ಷಣೆ
ಬೆಂಗಳೂರು: ಭಾರತ ಹಾಗೂ ಶ್ರೀಲಂಕಾ ನಡುವಿನ 2ನೇ ಟೆಸ್ಟ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೆಲುವಿನ ಬಳಿಕ ಸ್ವತಃ ಭಾರತದ ನಾಯಕ ರೋಹಿತ್ ಶರ್ಮಾ (Rohit Sharma) ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ತಿಳಿಸಿದರು. ಪಂದ್ಯ ವೀಕ್ಷಣೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ದಿನ 20,525, 2ನೇ ದಿನ 23,385 ಹಾಗೂ 3ನೇ ದಿನ 13,000ಕ್ಕೂ ಹೆಚ್ಚು ಪ್ರೇಕ್ಷಕರು ನೆರೆದಿದ್ದರು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.
ತವರಿನಲ್ಲಿ ಭಾರತಕ್ಕೆ ಸತತ 15ನೇ ಟೆಸ್ಟ್ ಸರಣಿ ಜಯ
3ನೇ ದಿನ ಶ್ರೀಲಂಕಾ ಅನಿರೀಕ್ಷಿತ ಹೋರಾಟ ಪ್ರದರ್ಶಿಸಿದರೂ ಪ್ರಾಬಲ್ಯ ಮರೆಯುವಲ್ಲಿ ಹಿಂದೆ ಬೀಳದ ಭಾರತ, ನಿರೀಕ್ಷೆಯಂತೆಯೇ 2ನೇ ಟೆಸ್ಟ್ ಪಂದ್ಯವನ್ನು ಮೂರು ದಿನಗಳೊಳಗೆ ಗೆದ್ದು 2 ಪಂದ್ಯಗಳ ಸರಣಿಯನ್ನು 2-0ಯಲ್ಲಿ ತನ್ನದಾಗಿಸಿಕೊಂಡಿದೆ. 447 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದ ಲಂಕಾ, 2ನೇ ಇನ್ನಿಂಗ್ಸಲ್ಲಿ 208 ರನ್‌ಗೆ ಆಲೌಟ್ ಆಗಿ, 238 ರನ್‌ಗಳ ದೊಡ್ಡ ಗೆಲುವನ್ನು ಭಾರತಕ್ಕೆ ಬಿಟ್ಟುಕೊಟ್ಟಿತು. ಟೀಂ ಇಂಡಿಯಾ (Team India) ತವರಿನಲ್ಲಿ ಸತತ 15ನೇ ಟೆಸ್ಟ್ ಸರಣಿ ಗೆಲುವು ದಾಖಲಿಸಿತು. 2012ರಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಬಳಿಕ ಭಾರತ ತವರಿನಲ್ಲಿ ಒಂದೂ ಸರಣಿ ಸೋತಿಲ್ಲ. ಸರಣಿಯುದ್ದಕ್ಕೂ ಭಾರತದ ಅಬ್ಬರಕ್ಕೆ ನಲುಗಿದ ಲಂಕಾ ತನ್ನ ಹೋರಾಟವನ್ನು ಕೈಚೆಲ್ಲಿತು
ಶ್ರೇಯಸ್ ಪಂದ್ಯ ಶ್ರೇಷ್ಠ, ಪಂತ್‌ಗೆ ಸರಣಿಶ್ರೇಷ್ಠ ಗೌರವ
ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿದ ಶ್ರೇಯಸ್ ಅಯ್ಯರ್ (Shreyas Iyer ) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಸರಣಿಯಲ್ಲಿ 3 ಇನ್ನಿಂಗ್ಸ್‌ಗಳಲ್ಲಿ 185 ರನ್, 5 ಕ್ಯಾಚ್, 3 ಸ್ಟಂಪಿಂಗ್ ಮಾಡಿದ ರಿಷಭ್ ಪಂತ್‌ಗೆ (Rishabh Pant) ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತು.
Ind vs SL ಮೂರೇ ದಿನಕ್ಕೆ ಮುಗಿದ Pink Ball Test, ಸರಣಿ ಕ್ಲೀನ್‌ಸ್ವೀಪ್ ಮಾಡಿದ ಟೀಂ ಇಂಡಿಯಾ
ಅತಿಹೆಚ್ಚು ವಿಕೆಟ್: 8ನೇ ಸ್ಥಾನಕ್ಕೇರಿದ ಆರ್.ಅಶ್ವಿನ್
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ಆರ್.ಅಶ್ವಿನ್ (Ravichandran Ashwin) 442 ವಿಕೆಟ್‌ಗಳೊಂದಿಗೆ 8ನೇ ಸ್ಥಾನಕ್ಕೇರಿದ್ದಾರೆ. ಲಂಕಾ ವಿರುದ್ಧ 2ನೇ ಇನ್ನಿಂಗ್ಸಲ್ಲಿ 4 ವಿಕೆಟ್ ಪಡೆಯುವ ಮೂಲಕ, ದ.ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೈನ್(439 ವಿಕೆಟ್)ರನ್ನು ಅಶ್ವಿನ್ ಹಿಂದಿಕ್ಕಿದರು. ಪಟ್ಟಿಯಲ್ಲಿ ಮುರಳಿಧರನ್(800 ವಿಕೆಟ್) ಮೊದಲ ಸ್ಥಾನದಲ್ಲಿದ್ದರೆ, ವಾರ್ನ್(708), ಆ್ಯಂಡರ್‌ಸನ್(640), ಕುಂಬ್ಳೆ(619), ಮೆಗ್ರಾಥ್(563), ಬ್ರಾಡ್(537) ಹಾಗೂ ಕೌಟ್ರ್ನಿ ವಾಲ್ಷ್ಯ್(519) ಕ್ರಮವಾಗಿ 2ರಿಂದ 7ನೇ ಸ್ಥಾನ ಪಡೆದಿದ್ದಾರೆ.
ಟೆಸ್ಟ್ ವಿಶ್ವಕಪ್: 4ನೇ ಸ್ಥಾನಕ್ಕೇರಿದ ಭಾರತ
ಲಂಕಾ ವಿರುದ್ಧ 2 ಪಂದ್ಯಗಳನ್ನು ಗೆಲ್ಲುವ ಮೂಲಕ 24 ಅಂಕ ಗಳಿಸಿದ ಭಾರತ, 2021-23ರ ಅವಧಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಒಟ್ಟು 77 ಅಂಕಗಳೊಂದಿಗೆ 4ನೇ ಸ್ಥಾನಕ್ಕೇರಿದೆ. ಭಾರತ ಒಟ್ಟು 11 ಪಂದ್ಯಗಳನ್ನಾಡಿದ್ದು 6ರಲ್ಲಿ ಗೆದ್ದು 3ರಲ್ಲಿ ಸೋತಿದೆ. 2 ಪಂದ್ಯ ಡ್ರಾ ಆಗಿದೆ. ತಂಡದ ಗೆಲುವಿನ ಪ್ರತಿಶತ ಶೇ.58.33ರಷ್ಟಿದೆ. ಭಾರತಕ್ಕೆ ಇನ್ನು ಒಟ್ಟು 7 ಟೆಸ್ಟ್ ಬಾಕಿ ಇದ್ದು, ತಂಡ ಒಂದರಲ್ಲಿ ಸೋತರೂ ಫೈನಲ್ ಹಾದಿ ಕಠಿಣಗೊಳ್ಳಲಿದೆ. ಇದೇ ವೇಳೆ ಶ್ರೀಲಂಕಾ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ.