Ind vs SL ಮೂರೇ ದಿನಕ್ಕೆ ಮುಗಿದ Pink Ball Test, ಸರಣಿ ಕ್ಲೀನ್‌ಸ್ವೀಪ್ ಮಾಡಿದ ಟೀಂ ಇಂಡಿಯಾ

* ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದ ಟೀಂ ಇಂಡಿಯಾ

* ಲಂಕಾ ಎದುರಿನ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ 238 ರನ್‌ಗಳ ಜಯ

* ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ರೋಹಿತ್ ಶರ್ಮಾ ಪಡೆ

Team India Thrash Sri Lanka by 238 runs in Pink Ball Test and Clean sweep Test Series kvn

ಬೆಂಗಳೂರು(ಮಾ.14): ಭಾರತ ಹಾಗೂ ಶ್ರೀಲಂಕಾ (India vs Sri Lanka) ತಂಡಗಳ ನಡುವಿನ ಪಿಂಕ್ ಬಾಲ್ ಟೆಸ್ಟ್ (Pink Ball Test) ಪಂದ್ಯದಲ್ಲಿ ಟೀಂ ಇಂಡಿಯಾ (Team India) 238 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ಭಾರತ ನೀಡಿದ್ದ 447 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು (Sri Lanka Cricket Team) 208 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ ಮಾಡಿದೆ.

ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸವಾಲಿನ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಮೂರನೇ ದಿನದಾಟವನ್ನು ಎಚ್ಚರಿಕೆಯಿಂದ ಆರಂಭಿಸಿತಾದರೂ, ಚಹಾ ವಿರಾಮದ ಬಳಿಕ ಟೀಂ ಇಂಡಿಯಾ ಮಾರಕ ದಾಳಿಯನ್ನು ಸಂಘಟಿಸುವ ಮೂಲಕ ಲಂಕಾ ಪಡೆಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಶ್ರೀಲಂಕಾ ತಂಡದ ಪರ ನಾಯಕ ದೀಮುತ್ ಕರುಣರತ್ನೆ(Dimuth Karunaratne) ಆಕರ್ಷಕ ಶತಕ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಎರಡನೇ ಇನಿಂಗ್ಸ್‌ನಲ್ಲಿ ದೀಮುತ್ ಕರುಣರತ್ನೆ, ಕುಸಾಲ್ ಮೆಂಡೀಸ್ ಹೊರತುಪಡಿಸಿ ಲಂಕಾದ ಯಾವ ಬ್ಯಾಟರ್‌ಗಳು ಕನಿಷ್ಠ 15 ರನ್ ಬಾರಿಸಲು ಯಶಸ್ವಿಯಾಗಲಿಲ್ಲ.

ಎರಡನೇ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 28 ರನ್ ಬಾರಿಸಿತ್ತು. ಎರಡನೇ ವಿಕೆಟ್‌ಗೆ ದೀಮುತ್ ಕರುಣರತ್ನೆ ಹಾಗೂ ಕುಸಾಲ್ ಮೆಂಡೀಸ್ 97 ರನ್‌ಗಳ ಜತೆಯಾಟವಾಡುವ ಮೂಲಕ ಲಂಕಾ ತಂಡಕ್ಕೆ ಉತ್ತಮ ಆರಂಭವನ್ನೇ ಒದಗಿಸಿಕೊಟ್ಟರು. ಎರಡನೇ ದಿನದಾಟದಲ್ಲಿ  ಒಟ್ಟು 13 ವಿಕೆಟ್‌ಗಳು ಪತನವಾಗಿದ್ದವು. ಸಾಕಷ್ಟು ತಿರುವು ಪಡೆಯುತ್ತಿರುವ ಪಿಚ್‌ನಲ್ಲಿ ಲಂಕಾದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಎಚ್ಚರಿಕೆಯ ಬ್ಯಾಟಿಂಗ್ ನಡೆಸುವ ಮೂಲಕ ಭಾರತೀಯ ಬೌಲರ್‌ಗಳನ್ನು ಕಾಡಿದರು. ಚುರುಕಿನ ಬ್ಯಾಟಿಂಗ್ ನಡೆಸಿದ ಕುಸಾಲ್ ಮೆಂಡೀಸ್ 60 ಎಸೆತಗಳನ್ನು ಎದುರಿಸಿ 54 ರನ್ ಬಾರಿಸಿ ರವಿಚಂದ್ರನ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಇದರ ಬೆನ್ನಲ್ಲೇ ಏಂಜಲೋ ಮ್ಯಾಥ್ಯೂಸ್ ಕೇವಲ ಒಂದು ರನ್ ಬಾರಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು. 

ಚಹಾ ವಿರಾಮದ ವೇಳೆಗೆ 4 ವಿಕೆಟ್ ಕಳೆದುಕೊಂಡು 151 ರನ್ ಬಾರಿಸಿದ್ದ ಶ್ರೀಲಂಕಾ ತಂಡವು, ಇದಾದ ಬಳಿಕ ಜಸ್ಪ್ರೀತ್ ಬುಮ್ರಾ, ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಚಹಾ ವಿರಾಮದ ಬಳಿಕ ಲಂಕಾ ತಂಡವು ತನ್ನ ಖಾತೆಗೆ 57 ರನ್ ಸೇರಿಸುವಷ್ಟರಲ್ಲಿ ಇನ್ನುಳಿದ 6 ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರೀ ಅಂತರದ ಸೋಲು ಅನುಭವಿಸಿತು. ಟೀಂ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್‌ 4 ವಿಕೆಟ್ ಪಡೆದರೆ, ವೇಗಿ ಜಸ್ಪ್ರೀತ್ ಬುಮ್ರಾ 3, ಅಕ್ಷರ್ ಪಟೇಲ್ 2 ಹಾಗೂ ರವೀಂದ್ರ ಜಡೇಜಾ ಒಂದು ವಿಕೆಟ್ ಕಬಳಿಸಿದರು.

Pink Ball Test: ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಡೇಲ್ ಸ್ಟೇನ್ ದಾಖಲೆ ಮುರಿದ ರವಿಚಂದ್ರನ್ ಅಶ್ವಿನ್‌

ನಾಯಕ ದೀಮುತ್ ಕರುಣರತ್ನೆ ಏಕಾಂಗಿ ಹೋರಾಟ: ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡದ ನಾಯಕ ದೀಮುತ್ ಕರುಣರತ್ನೆ, ಶತಯಾಗತಾಯ ತಂಡವನ್ನು ಸೋಲಿನಿಂದ ಪಾರು ಮಾಡಲು ಯತ್ನಿಸಿದರು. ಆದರೆ ಮತ್ತೊಂದು ತುದಿಯಲ್ಲಿ ನಾಯಕನಿಗೆ ಉತ್ತಮ ಸಾಥ್ ಸಿಗಲಿಲ್ಲ. ಕರುಣರತ್ನೆ ಒಟ್ಟು 174 ಎಸೆತಗಳನ್ನು ಎದುರಿಸಿ 15 ಬೌಂಡರಿ ಸಹಿತ 107 ರನ್ ಬಾರಿಸಿ ಜಸ್ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು.

ಹೀಗಿತ್ತು ಪಿಂಕ್ ಬಾಲ್ ಟೆಸ್ಟ್‌: ಬೆಂಗಳೂರು ಇದೇ ಮೊದಲ ಬಾರಿಗೆ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಆತಿಥ್ಯವನ್ನು ವಹಿಸಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ, ಶ್ರೇಯಸ್ ಅಯ್ಯರ್ ಬಾರಿಸಿದ ಸಮಯೋಚಿತ ಅರ್ಧಶತಕ(92)ದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 252 ರನ್ ಬಾರಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡವು ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿ ಕೇವಲ 109 ರನ್‌ಗಳಿಗೆ ಆಲೌಟ್ ಆಯಿತು. ಅಮೂಲ್ಯ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ, ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ 9 ವಿಕೆಟ್ ಕಳೆದುಕೊಂಡು 303 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವುದರ ಮೂಲಕ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಗೆಲ್ಲಲು ಪ್ರವಾಸಿ ಶ್ರೀಲಂಕಾ ತಂಡಕ್ಕೆ 477 ರನ್‌ಗಳ ಗುರಿ ನೀಡಿತ್ತು.

Latest Videos
Follow Us:
Download App:
  • android
  • ios