ಟೀಂ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ತಂಡವು ಟೆಸ್ಟ್ ಸರಣಿಗಳಲ್ಲಿ ಕಳಪೆ ಪ್ರದರ್ಶನ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ವೈಟ್‌ವಾಷ್ ಸೋಲಿನ ಬಳಿಕ, ಮಾಜಿ ಕೋಚ್ ರವಿಶಾಸ್ತ್ರಿ ಗಂಭೀರ್ ಹಾಗೂ ಆಟಗಾರರ ಮೇಲೆ ಕಿಡಿಕಾರಿದ್ದಾರೆ.
ನವದೆಹಲಿ: ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಇದೀಗ ಭಾರತ ಕ್ರಿಕೆಟ್‌ನ ಕೇಂದ್ರ ಬಿಂದುವಾಗಿದ್ದಾರೆ. ಅದರಲ್ಲೂ ತವರಿನಲ್ಲಿ ಗಂಭೀರ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ವೈಟ್‌ವಾಷ್ ಮುಖಭಂಗ ಅನುಭವಿಸಿದ ಬಳಿಕವಂತೂ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್‌ಕೋಚ್ ಆದ ಬಳಿಕ ಒಟ್ಟು 5 ಟೆಸ್ಟ್ ಸರಣಿಯನ್ನು ಆಡಿದೆ. ಈ ಪೈಕಿ ಕೇವಲ ಒಂದು ಸರಣಿಯನ್ನಷ್ಟೇ ಗೆಲ್ಲಲು ಭಾರತಕ್ಕೆ ಸಾಧ್ಯವಾಗಿದೆ. ಅದು ತವರಿನಲ್ಲಿ ವೆಸ್ಟ್ ಇಂಡೀಸ್ ಎದುರು. ಇನ್ನುಳಿದಂತೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಎದುರು ಭಾರತ ಟೆಸ್ಟ್ ತಂಡವು ದಯನೀಯ ಸೋಲು ಕಂಡಿದ್ದರೇ, ಇಂಗ್ಲೆಂಡ್ ಸರಣಿಯನ್ನು ಡ್ರಾ ಮಾಡಿಕೊಂಡಿದೆ. ಇದೀಗ ಟೀಂ ಇಂಡಿಯಾ ಮಾಜಿ ಹೆಡ್‌ಕೋಚ್ ರವಿಶಾಸ್ತ್ರಿ, ಹಾಲಿ ಹೆಡ್‌ಕೋಚ್ ಗೌತಮ್ ಗಂಭೀರ್ ಅವರ ಮೇಲೆ ಕಿಡಿಕಾರಿದ್ದಾರೆ.
ಆಟಗಾರರು ಜವಾಬ್ದಾರಿಯಿಂದ ಆಡಬೇಕು
"ನೀವೇ ಹೇಳಿ, ಗುವಾಹಟಿಯಲ್ಲಿ ಏನಾಯ್ತು ಅಂತ? 100/1 ಇದ್ದದ್ದು 130 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತು. ಈ ತಂಡ ಇಷ್ಟೊಂದು ಕಳಪೆಯಂತೂ ಖಂಡಿತ ಅಲ್ಲ. ತಂಡದಲ್ಲಿ ಸಾಕಷ್ಟು ಪ್ರತಿಭಾನ್ವಿತರಿದ್ದಾರೆ. ಹೀಗಾಗಿ ಆಟಗಾರರು ಕೂಡಾ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ನೀವು ಚಿಕ್ಕವರಿದ್ದಾಗಿನಿಂದ ಸ್ಪಿನ್ನರ್‌ಗಳನ್ನು ಎದುರಿಸಿದ್ದೀರ ಅಲ್ಲವೇ" ಎಂದು ಪ್ರಬಾತ್ ಖಬರ್ ಅವರೊಂದಿಗಿನ ಪಾಡ್‌ಕಾಸ್ಟ್‌ನಲ್ಲಿ ರವಿಶಾಸ್ತ್ರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾನು ಗೌತಮ್ ಗಂಭೀರ್ ರಕ್ಷಣೆ ಮಾಡುತ್ತಿಲ್ಲ
ಹೀಗಂದ ಮಾತ್ರಕ್ಕೆ ನಾನು ಹೆಡ್‌ಕೋಚ್ ಗೌತಮ್ ಗಂಭೀರ್ ಅವರನ್ನು ರಕ್ಷಣೆ ಮಾಡುತ್ತಿದ್ದೇನೆ ಎಂದರ್ಥವಲ್ಲ. 100% ಅವರು ಕೂಡಾ ಈ ಸೋಲಿನ ಹೊಣೆ ಹೊರಬೇಕಾಗುತ್ತದೆ. ಒಂದ್ವೇಳೆ ಗಂಭೀರ್ ಸ್ಥಾನದಲ್ಲಿ ನಾನಿದ್ದಿದ್ದರೇ, ಖಂಡಿತವಾಗಿಯೂ ಮೊದಲಿಗನಾಗಿ ಸೋಲಿನ ಹೊಣೆ ಹೊರುತ್ತಿದ್ದೆ. ಆದರೆ ತಂಡದೊಳಗಿನ ಮೀಟಿಂಗ್‌ನಲ್ಲಿ ಆಟಗಾರರನ್ನು ಸುಮ್ಮನೆ ಬಿಡುತ್ತಿರಲಿಲ್ಲ' ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ತವರಿನಲ್ಲಿ ದಕ್ಷಿಣ ಆಫ್ರಿಕಾ ಎದುರು ವೈಟ್‌ವಾಷ್ ಅನುಭವಿಸಿದ ಬೆನ್ನಲ್ಲೇ ಇದೀಗ ಬಿಸಿಸಿಐ, ಟೀಂ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರೊಂದಿಗೆ ಚರ್ಚಿಸಲು ತುರ್ತು ಸಭೆ ಕರೆದಿದೆ. ಈ ಮೀಟಿಂಗ್‌ನಲ್ಲಿ ಹಲವು ಮಹತ್ವದ ವಿಚಾರಗಳ ಚರ್ಚೆ ನಡೆಯಲಿದ್ದು, ಈ ಟೆಸ್ಟ್ ಸರಣಿ ಸೋಲಿನ ಪರಾಮರ್ಶೆ ಹಾಗೂ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಭವಿಷ್ಯದ ಕುರಿತಂತೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.


