ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸೋತಿರುವ ಭಾರತ, ಸರಣಿ ಉಳಿಸಿಕೊಳ್ಳಲು ಗುವಾಹಟಿಯಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ನಾಯಕ ಶುಭಮನ್ ಗಿಲ್ ಗಾಯಗೊಂಡಿರುವ ಕಾರಣ, ರಿಷಭ್ ಪಂತ್ ತಂಡವನ್ನು ಮುನ್ನಡೆಸಲಿದ್ದಾರೆ.
ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ಗೆ ಭಾರತ ನಾಳೆ ಕಣಕ್ಕಿಳಿಯಲಿದ್ದು, ಪ್ಲೇಯಿಂಗ್ XIನಲ್ಲಿ ಏನೆಲ್ಲಾ ಬದಲಾವಣೆಗಳಾಗಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಮೊದಲ ಟೆಸ್ಟ್‌ನಲ್ಲಿ ಸೋತ ತಂಡದಲ್ಲಿ ಭಾರತ ಕನಿಷ್ಠ ಎರಡು ಬದಲಾವಣೆ ಮಾಡುವುದು ಖಚಿತ. ಗಾಯಗೊಂಡಿರುವ ನಾಯಕ ಶುಭಮನ್ ಗಿಲ್ ನಾಳೆ ಆಡುವ ಸಾಧ್ಯತೆ ಕಡಿಮೆ ಇರುವುದರಿಂದ, ಅವರ ಬದಲಿಗೆ ಯಾರು ತಂಡಕ್ಕೆ ಬರುತ್ತಾರೆ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಗಿಲ್ ಇಂದು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದರೂ, ಎರಡನೇ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.
ಶುಭ್‌ಮನ್ ಗಿಲ್ ಅನುಪಸ್ಥಿತಿಯಲ್ಲಿ ಉಪನಾಯಕ ರಿಷಭ್ ಪಂತ್ ನಾಳಿನ ಎರಡನೇ ಟೆಸ್ಟ್‌ನಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ. ಗಿಲ್ ಬದಲಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಅಥವಾ ದೇವದತ್ ಪಡಿಕ್ಕಲ್‌ಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ಸಾಯಿ ಸುದರ್ಶನ್‌ಗೆ ಹೆಚ್ಚಿನ ಅವಕಾಶವಿದೆ ಎನ್ನಲಾಗುತ್ತಿದೆ. ಸಾಯಿ ಸುದರ್ಶನ್ ಪ್ಲೇಯಿಂಗ್ XIಗೆ ಬಂದರೆ, ಮೂರನೇ ಕ್ರಮಾಂಕದಲ್ಲೂ ಬದಲಾವಣೆಯಾಗಲಿದೆ. ಮೊದಲ ಟೆಸ್ಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದ ವಾಷಿಂಗ್ಟನ್ ಸುಂದರ್ ಮಧ್ಯಮ ಕ್ರಮಾಂಕಕ್ಕೆ ಬದಲಾಗಲಿದ್ದಾರೆ. ಸಾಯಿ ಸುದರ್ಶನ್ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಗಿಲ್ ಆಡುತ್ತಿದ್ದ ನಾಲ್ಕನೇ ಕ್ರಮಾಂಕದಲ್ಲಿ ಧ್ರುವ್ ಜುರೆಲ್ ಕ್ರೀಸ್‌ಗೆ ಬರಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಒಂದು ಬದಲಾವಣೆ
ಕೋಲ್ಕತ್ತಾದಲ್ಲಿ ನಾಲ್ವರು ಸ್ಪಿನ್ನರ್‌ಗಳೊಂದಿಗೆ ಆಡಿದ್ದು ಈ ತಂತ್ರಗಾರಿಕೆ ವರ್ಕೌಟ್ ಆಗದ ಕಾರಣ, ಬೌಲಿಂಗ್ ವಿಭಾಗದಲ್ಲೂ ನಾಳೆ ಬದಲಾವಣೆ ಆಗಲಿದೆ. ಅಕ್ಷರ್ ಪಟೇಲ್ ಅಥವಾ ಕುಲದೀಪ್ ಯಾದವ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ನಾಳೆ ಪ್ಲೇಯಿಂಗ್ XIಗೆ ಬರುವ ಸಾಧ್ಯತೆಯಿದೆ. ಗುವಾಹಟಿ ಪಿಚ್‌ನಲ್ಲಿ ಮೊದಲ ಎರಡು ದಿನಗಳಲ್ಲಿ ವೇಗಿಗಳಿಗೆ ಉತ್ತಮ ಬೌನ್ಸ್ ಸಿಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಅಕ್ಷರ್ ಬದಲಿಗೆ ನಿತೀಶ್ ತಂಡಕ್ಕೆ ಬರುವ ಸಾಧ್ಯತೆ ಹೆಚ್ಚು. ವೇಗದ ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಮುಂದುವರಿಯುವ ನಿರೀಕ್ಷೆಯಿದೆ. ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಸೋತ ಭಾರತ, ಎರಡು ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆಯಲ್ಲಿದೆ. ನಾಳೆ ಆರಂಭವಾಗುವ ಎರಡನೇ ಟೆಸ್ಟ್‌ನಲ್ಲಿ ಗೆಲ್ಲದಿದ್ದರೆ ಭಾರತ ಸರಣಿ ಕಳೆದುಕೊಳ್ಳಲಿದೆ. ಪಂದ್ಯ ಡ್ರಾ ಆದರೂ ದಕ್ಷಿಣ ಆಫ್ರಿಕಾ ಸರಣಿ ಗೆಲ್ಲಲಿದೆ. ದಕ್ಷಿಣ ಆಫ್ರಿಕಾ ತಂಡವು ಇದುವರೆಗೂ ಭಾರತ ನೆಲದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿಲ್ಲ. ಇದೀಗ ತೆಂಬಾ ಬವುಮಾ ನೇತೃತ್ವದ ಹರಿಣಗಳ ಪಡೆ ಇತಿಹಾಸ ನಿರ್ಮಿಸಲು ಎದುರು ನೋಡುತ್ತಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ತಂಡ:
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಧ್ರುವ್ ಜುರೆಲ್, ರಿಷಭ್ ಪಂತ್ (ನಾಯಕ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

