ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಿಂದ ನಾಯಕ ಶುಭಮನ್ ಗಿಲ್ ಕುತ್ತಿಗೆ ನೋವಿನಿಂದಾಗಿ ಹೊರಗುಳಿದಿದ್ದಾರೆ. ಗಿಲ್ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ತಂಡವನ್ನು ಮುನ್ನಡೆಸಲಿದ್ದು, ಅವರ ಸ್ಥಾನಕ್ಕೆ ದೇವದತ್ ಪಡಿಕ್ಕಲ್ ಅಥವಾ ಸಾಯಿ ಸುದರ್ಶನ್ ಆಯ್ಕೆಯಾಗುವ ಸಾಧ್ಯತೆಯಿದೆ.
ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ಗೆ ಭಾರತ ತಂಡದಿಂದ, ಮೊದಲ ಟೆಸ್ಟ್‌ನಲ್ಲಿ ಗಾಯಗೊಂಡಿದ್ದ ನಾಯಕ ಶುಭಮನ್ ಗಿಲ್ ಅವರನ್ನು ಕೈಬಿಡಲಾಗಿದೆ. ಈ ಹಿಂದೆ ಮೊದಲ ಟೆಸ್ಟ್ ನಂತರ ಭಾರತ ತಂಡದೊಂದಿಗೆ ಗುವಾಹಟಿಗೆ ಬಂದಿದ್ದ ಗಿಲ್, ಇಂದು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿತ್ತು. ಇದರ ನಂತರವೇ ಗಿಲ್ ನಾಳೆ ಆಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸೂಚಿಸಲಾಗಿತ್ತು. ಆದರೆ, ಕುತ್ತಿಗೆ ನೋವಿನಿಂದ ಬಳಲುತ್ತಿರುವ ಗಿಲ್‌ಗೆ ವೈದ್ಯರು ಇನ್ನೂ 10 ದಿನಗಳ ವಿಶ್ರಾಂತಿಗೆ ಸೂಚಿಸಿದ್ದರಿಂದ ನಾಯಕನನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಗುವಾಹಟಿಯಿಂದ ಮುಂಬೈಗೆ ವಾಪಾಸ್ಸಾದ ಗಿಲ್
ಗುವಾಹಟಿಯಿಂದ ಗಿಲ್ ನೇರವಾಗಿ ಮುಂಬೈಗೆ ವಾಪಸಾಗಿದ್ದಾರೆ. ಇದರಿಂದ ನಾಳೆ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ರಿಷಭ್ ಪಂತ್ ಭಾರತವನ್ನು ಮುನ್ನಡೆಸಲಿದ್ದಾರೆ. ಗಿಲ್ ಬದಲಿಗೆ ಆಯ್ಕೆಗಾರರು ಯಾರನ್ನೂ ತಂಡಕ್ಕೆ ಸೇರಿಸಿಕೊಂಡಿಲ್ಲ. ಎರಡನೇ ಟೆಸ್ಟ್‌ನಲ್ಲಿ ಆಡಲು ಗಿಲ್ ತುಂಬಾ ಆಸೆಪಟ್ಟಿದ್ದರು, ಅದಕ್ಕಾಗಿಯೇ ಗಾಯದ ಹೊರತಾಗಿಯೂ ಮೊದಲ ಟೆಸ್ಟ್ ನಂತರ ಕೋಲ್ಕತಾದಿಂದ ತಂಡದೊಂದಿಗೆ ಗುವಾಹಟಿಗೆ ಪ್ರಯಾಣಿಸಿದ್ದರು ಎಂದು ವರದಿಯಾಗಿತ್ತು. ನಿನ್ನೆ ಒಂದು ಗಂಟೆ ಬ್ಯಾಟಿಂಗ್ ಅಭ್ಯಾಸ ಮಾಡಲು ಗಿಲ್ ಯೋಜಿಸಿದ್ದರು, ಆದರೆ ಕುತ್ತಿಗೆ ನೋವಿನ ಕಾರಣ ಅಭ್ಯಾಸಕ್ಕೆ ಇಳಿದಿರಲಿಲ್ಲ. ಹೀಗಾಗಿ ಶುಭ್‌ಮನ್ ಗಿಲ್, ಎರಡನೇ ಟೆಸ್ಟ್ ಆಡೋದು ಅನುಮಾನ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿತ್ತು.
ಎರಡನೇ ಟೆಸ್ಟ್‌ನಲ್ಲಿ ಆಡಿದರೂ ಕುತ್ತಿಗೆ ನೋವು ಮರುಕಳಿಸುವ ಸಾಧ್ಯತೆಯನ್ನು ಪರಿಗಣಿಸಿ ಗಿಲ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಕೋಲ್ಕತಾದಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದ ಕೂಡಲೇ ಗಿಲ್‌ಗೆ ಕುತ್ತಿಗೆ ನೋವಿನಿಂದಾಗಿ ಬ್ಯಾಟಿಂಗ್ ನಿಲ್ಲಿಸಿ ಪೆವಿಲಿಯನ್‌ಗೆ ಮರಳಬೇಕಾಯಿತು. ನಂತರ ಸ್ಕ್ಯಾನಿಂಗ್ ಸೇರಿದಂತೆ ಟೆಸ್ಟ್‌ಗೆ ಒಳಗಾದ ಗಿಲ್‌ಗೆ ಮತ್ತೆ ಬ್ಯಾಟಿಂಗ್‌ಗೆ ಇಳಿಯಲು ಸಾಧ್ಯವಾಗಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ 124 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 93 ರನ್‌ಗಳಿಗೆ ಆಲೌಟ್ ಆಗಿ 30 ರನ್‌ಗಳ ಸೋಲು ಅನುಭವಿಸಿದಾಗ ಗಿಲ್ ಅನುಪಸ್ಥಿತಿ ಭಾರತಕ್ಕೆ ದೊಡ್ಡ ಹೊಡೆತ ನೀಡಿತ್ತು.
ಗಿಲ್ ಬದಲಿಗೆ ಯಾರಿಗೆ ಸಿಗತ್ತೆ ಸ್ಥಾನ?
ಇದೀಗ ಶುಭ್‌ಮನ್ ಗಿಲ್ ಎರಡನೇ ಟೆಸ್ಟ್‌ಗೆ ಅಧಿಕೃತವಾಗಿ ಹೊರಬಿದ್ದ ಬೆನ್ನಲ್ಲೇ ಅವರ ಸ್ಥಾನವನ್ನು ತುಂಬುವವರು ಯಾರು ಎನ್ನುವ ಕುತೂಹಲ ಕೂಡಾ ಜೋರಾಗಿದೆ. ಗಿಲ್ ಬದಲಿಗೆ ಎರಡಗೈ ಬ್ಯಾಟರ್‌ಗಳಾದ ದೇವದತ್ ಪಡಿಕ್ಕಲ್ ಇಲ್ಲವೇ ಸಾಯಿ ಸುದರ್ಶನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ. ಒಂದು ವೇಳೆ ದೇವದತ್ ಪಡಿಕ್ಕಲ್ ಇಲ್ಲವೇ ಸಾಯಿ ಸುದರ್ಶನ್ ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದರ, ಗಿಲ್ ಆಡುತ್ತಿದ್ದ ನಾಲ್ಕನೇ ಕ್ರಮಾಂಕದಲ್ಲಿ ಧ್ರುವ್ ಜುರೆಲ್ ಕ್ರೀಸ್‌ಗೆ ಬರಲಿದ್ದಾರೆ. ಇನ್ನುಳಿದಂತೆ ಭಾರತ ತಂಡದಲ್ಲಿ ಬೌಲಿಂಗ್ ವಿಭಾಗದಲ್ಲಿ ಒಂದು ಬದಲಾವಣೆಯಾಗುವ ಸಾಧ್ಯತೆಯಿದೆ. ಗುವಾಹಟಿ ಪಿಚ್ ವೇಗದ ಬೌಲರ್‌ಗೆ ಕೊಂಚ ನೆರವು ನೀಡುವುದರಿಂದ ಅಕ್ಷರ್ ಪಟೇಲ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ತಂಡ:
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಧ್ರುವ್ ಜುರೆಲ್, ರಿಷಭ್ ಪಂತ್ (ನಾಯಕ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.


