ಭಾರತ ಮತ್ತು ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗರ ನಡುವಿನ ಲೆಜೆಂಡ್ಸ್ ಲೀಗ್ ಪಂದ್ಯ ರದ್ದಾಗಿದೆ. ಪಹಲ್ಗಾಂ ಉಗ್ರರ ದಾಳಿಯನ್ನು ಖಂಡಿಸಿ ಭಾರತೀಯ ಆಟಗಾರರು ಪಾಕಿಸ್ತಾನ ವಿರುದ್ಧ ಆಡಲು ನಿರಾಕರಿಸಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಆಯೋಜಕರು ಕ್ಷಮೆಯಾಚಿಸಿದ್ದಾರೆ.

ಬರ್ಮಿಂಗ್‌ಹ್ಯಾಮ್: ಭಾರತ ಹಾಗೂ ಪಾಕಿಸ್ತಾನ ತಂಡಗಳ ದಿಗ್ಗಜ ಕ್ರಿಕೆಟಿಗರ ನಡುವೆ ಭಾನುವಾರ ನಡೆಯಬೇಕಿದ್ದ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಲೀಗ್‌ ಟಿ20 ಪಂದ್ಯ ರದ್ದುಗೊಂಡಿದೆ. ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂ ಎಂಬಲ್ಲಿ ಉಗ್ರರು ನಡೆಸಿದ ಭೀಕರ ಹತ್ಯಾಕಾಂಡ ಖಂಡಿಸಿ ಭಾರತೀಯ ಕ್ರಿಕೆಟಿಗರು ಪಾಕಿಸ್ತಾನ ವಿರುದ್ಧ ಆಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪಂದ್ಯವನ್ನು ಆಯೋಜಕರು ರದ್ದುಗೊಳಿಸಿದ್ದಾರೆ.

ಬಾಲಿವುಡ್ ನಟ ಅಜಯ್ ದೇವಗನ್ ಸಹ ಮಾಲಿಕತ್ವ ಹೊಂದಿರುವ, ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುವ 2ನೇ ಆವೃತ್ತಿಯ ಟೂರ್ನಿಯಲ್ಲಿ ಭಾನುವಾರ ಭಾರತ-ಪಾಕ್ ಮುಖಾಮುಖಿಯಾಗಬೇಕಿದ್ದವು. ಯುವರಾಜ್ ಸಿಂಗ್ ನಾಯಕತ್ವದ ಭಾರತ ತಂಡದಲ್ಲಿ ಶಿಖರ್ ಧವನ್, ಹರ್ಭಜನ್ ಸಿಂಗ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಸುರೇಶ್ ರೈನಾ, ರಾಬಿನ್ ಉತ್ತಪ್ಪ, ವಿನಯ್ ಕುಮಾರ್‌ಸೇರಿ ಹಲವರಿದ್ದರು. ಶಾಹಿದ್ ಅಫ್ರಿದಿ ನಾಯಕತ್ವದ ಪಾಕ್ ತಂಡದಲ್ಲಿ ಯೂನಿಸ್ ಖಾನ್, ಕಮ್ರಾನ್ ಅಕಲ್ ಸೇರಿ ಪ್ರಮುಖರಿದ್ದರು. ಆದರೆ ಉಗ್ರರ ದಾಳಿ ಖಂಡಿಸಿ ಹಾಗೂ ಅಭಿಮಾನಿಗಳ ಒತ್ತಡಕ್ಕೆ ಮಣಿದು ಪಾಕ್ ವಿರುದ್ಧ ಆಡಲು ಭಾರತ ನಿರಾಕರಿಸಿತು. ಹೀಗಾಗಿ ಅನಿವಾರ್ಯವಾಗಿ ಪಂದ್ಯ ರದ್ದುಗೊಳಿಸಲಾಯಿತು.

ಆಯೋಜಕರಿಂದ ಕ್ಷಮೆಯಾಚನೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಆಯೋಜಕರು, 'ಪಾಕ್ ತಂಡ ಮುಂಬರುವ ಹಾಕಿ ಟೂರ್ನಿಗಳಲ್ಲಿಆಡಲು ಭಾರತಕ್ಕೆ ಆಗಮಿಸುವುದರಿಂದ ಮತ್ತು ಇತ್ತೀಚೆಗೆ ಭಾರತ-ಪಾಕ್ ತಂಡಗಳು ವಾಲಿಬಾಲ್ ಟೂರ್ನಿಯಲ್ಲಿ ಪರಸ್ಪರ ಆಡಿದ್ದರಿಂದ ಭಾರತ-ಪಾಕ್ ನಡುವೆ ಕ್ರಿಕೆಟ್ ಪಂದ್ಯ ನಡೆಸಲು ನಿರ್ಧರಿಸಿದ್ದೆವು. ಜಾಗತಿಕ ಮಟ್ಟದ ಕ್ರೀಡಾಭಿಮಾನಿ ಗಳಿಗೆ ಸಂಭ್ರಮದ ಕ್ಷಣಗಳನ್ನು ನೀಡಲು ಪಂದ್ಯ ಆಯೋಜಿಸಲಾಗಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ನಾವು ಹಲವರ ಭಾವನೆಗಳನ್ನು ನೋಯಿಸಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ, ತಮ್ಮ ದೇಶಕ್ಕೆ ಹೆಮ್ಮೆ ತಂಡ ಭಾರತದ ದಿಗ್ಗಜ ಕ್ರಿಕೆಟಿಗರು ಮುಜುಗರ ಅನುಭವಿಸಿದ್ದಾರೆ. ಹೀಗಾಗಿ ಭಾರತ-ಪಾಕಿಸ್ತಾನ ಪಂದ್ಯವನ್ನು ರದ್ದುಗೊಳಿಸಿದ್ದೇವೆ. ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ನಾವು ಮತ್ತೊಮ್ಮೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ' ಎಂದು ತಿಳಿಸಿದ್ದಾರೆ.

ಏನಿದು ಲೆಜೆಂಡ್ಸ್ ಲೀಗ್ ಟಿ20 ಕ್ರಿಕೆಟ್?

ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಆಟಗಾರರ ನಡುವೆ ನಡೆಯುವ ಟೂರ್ನಿ. ಕಳೆದ ವರ್ಷ ನಡೆದಿದ್ದ ಚೊಚ್ಚಲ ಆವೃತ್ತಿಯಲ್ಲಿ ಭಾರತ ತಂಡ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದು ಚಾಂಪಿಯನ್ ಆಗಿತ್ತು. ಈ ಬಾರಿ ಟೂರ್ನಿ ಶುಕ್ರವಾರ ಆರಂಭಗೊಂಡಿದ್ದು, ಆ.2ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ಭಾರತ, ಪಾಕ್ ಮಾತ್ರವಲ್ಲದೇ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ತಂಡಗಳಿವೆ. ಇಂಗ್ಲೆಂಡ್‌ನ 4 ನಗರಗಳಲ್ಲಿ ಟೂರ್ನಿಯ ಪಂದ್ಯಗಳು ನಡೆಯುತ್ತಿವೆ. ಭಾರತ ತನ್ನ ಮುಂದಿನ ಪಂದ್ಯದಲ್ಲಿ ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಬೇಕಿದೆ.

ಭಾರೀ ಟೀಕೆ, ಒತ್ತಡಕ್ಕೆ ಮಣಿದ ಭಾರತ ತಂಡ

ಪಹಲ್ಗಾಂ ಉಗ್ರರ ದಾಳಿ ಬಳಿಕ ಸೌರವ್ ಗಂಗೂಲಿ ಸೇರಿ ಕೆಲ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಪಾಕ್ ಜೊತೆಗಿನ ಕ್ರಿಕೆಟ್ ಸಂಬಂಧವನ್ನು ಮುರಿಯಲು ಆಗ್ರಹಿಸಿದ್ದರು. ಈ ನಡುವೆ ವಾಲಿವಾಲ್, ಸ್ಕ್ಯಾಶ್ ಸೇರಿದಂತೆ ಕೆಲ ಕ್ರೀಡೆಗಳಲ್ಲಿ ಉಭಯ ದೇಶಗಳ ಆಟಗಾರರು ಪರಸ್ಪರ ಆಡಿದ್ದರು. ಹೀಗಾಗಿ ಬಹುರಾಷ್ಟ್ರೀಯ

ದೇಶಗಳು ಪಾಲ್ಗೊಳ್ಳುವ ಟೂರ್ನಿಯಲ್ಲಿ ಭಾರತ-ಪಾಕ್ ಕ್ರಿಕೆಟ್ ಪಂದ್ಯ ನಡೆಯಲಿದೆ ಎಂದೇ ಭಾವಿಸಲಾಗಿತ್ತು. ಅಲ್ಲದೆ ಕೇಂದ್ರ ಕ್ರೀಡಾ ಸಚಿವ ಮಾನ್ಸುಖ್ ಮಾಂಡವೀಯ ಇತ್ತೀಚೆಗಷ್ಟೇ ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದರು. 'ಕ್ರಿಕೆಟ್, ಹಾಕಿ ಸೇರಿ ಯಾವುದೇ ಕ್ರೀಡೆಗಳ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪಾಕಿಸ್ತಾನದೊಂದಿಗೆ ಆಡುವುದರಲ್ಲಿ ನಮಗೆ ಯಾವುದೇ ಸಮಸ್ಯೆಗಳಿಲ್ಲ ಎಂದಿದ್ದರು. ಆದರೆ ಲೆಜೆಂಡ್ಸ್‌ ಲೀಗ್‌ನಲ್ಲಿ ಭಾರತ ತಂಡ ಪಾಕ್ ವಿರುದ್ಧ ಆಡುವ ಬಗ್ಗೆ ಕಳೆದೆರಡು ದಿನಗಳಿಂದ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದ್ದವು. ಪಾಕ್ ವಿರುದ್ಧ ಪಂದ್ಯ ಬಹಿಷ್ಕರಿಸುವಂತೆ ಕೂಗಿ ಕೇಳಿಬಂದಿದ್ದವು.

ಪ್ರಾಯೋಜಕರಿಂದ ಪಾಕ್‌ಗೆ ಬಹಿಷ್ಕಾರ!

ಭಾರತ-ಪಾಕ್ ಪಂದ್ಯ ರದ್ದುಗೊಂಡ ಬೆನ್ನಲ್ಲೇ ಟೂರ್ನಿಯ ಪ್ರಾಯೋಜಕರು ಪಾಕ್ ತಂಡದ ಎಲ್ಲಾ ಪಂದ್ಯಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಭಾರತ ಮೂಲದ ಟ್ರಾವೆಲ್ ಸಂಸ್ಥೆಯಾಗಿರುವ ಈಸ್‌ಮೈಟ್ರಿಪ್ (EaseMyTrip) ಟೂರ್ನಿಯಲ್ಲಿ ಇನ್ನು ಪಾಕಿಸ್ತಾನದ ಪಂದ್ಯಗಳಿಗೆ ಪ್ರಾಯೋಜಕತ್ವ ವಹಿಸುವುದಿಲ್ಲ ಎಂದಿದೆ. 'ಲೆಜೆಂಡ್ ಲೀಗ್ ಜೊತೆ 5 ವರ್ಷಗಳ ಪ್ರಾಯೋಜಕತ್ವ ಒಪ್ಪಂದವನ್ನು ಮಾಡಿಕೊಂಡಿದ್ದರೂ, ನಮ್ಮ ನಿಲುವು ಯಾವಾಗಲೂ ಸ್ಪಷ್ಟವಾಗಿದೆ. ಲೀಗ್‌ನಲ್ಲಿ ಪಾಕಿಸ್ತಾನ ಒಳಗೊಂಡ ಯಾವುದೇ ಪಂದ್ಯದ ಜೊತೆ ನಮ್ಮ ಸಂಸ್ಥೆಗೆ ಸಂಬಂಧವಿಲ್ಲ ಮತ್ತು ಪ್ರಾಯೋಜಕತ್ವ ವಹಿಸುವುದಿಲ್ಲ. ನಾವು ಭಾರತವನ್ನು ಹೆಮ್ಮೆಯಿಂದ ಬೆಂಬಲಿಸುವುದನ್ನು ಮುಂದುವರಿಸುತ್ತೇವೆ ಮತ್ತು ನಮ್ಮ ತಂಡದ ಪರ ದೃಢವಾಗಿ ನಿಲ್ಲುತ್ತೇವೆ. ನಮಗೆ ಭಾರತವೇ ಮೊದಲು' ಎಂದಿದೆ.