ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಏಕದಿನ ಸರಣಿ ಆರಂಭವಾಗಲಿದ್ದು, ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಮೇಲೆ ಎಲ್ಲರ ಕಣ್ಣಿದೆ. ಗಾಯದಿಂದ ಚೇತರಿಸಿಕೊಂಡಿರುವ ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಿದ್ದು, ಅನನುಭವಿ ಕಿವೀಸ್ ತಂಡವನ್ನು ಭಾರತ ಎದುರಿಸಲಿದೆ.

ವಡೋದರಾ: ಅಭೂತಪೂರ್ವ ಲಯದಲ್ಲಿರುವ ದಿಗ್ಗಜ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಇದೀಗ ಮತ್ತೊಂದು ಮಹತ್ವದ ಸರಣಿಗೆ ಸಜ್ಜಾಗಿದ್ದು, ಇವರಿಬ್ಬರ ಅಬ್ಬರದ ಆಟ ನೋಡಲು ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ 3 ಪಂದ್ಯಗಳ ಏಕದಿನ ಸರಣಿ ಭಾನುವಾರ ಆರಂಭಗೊಳ್ಳಲಿದ್ದು, ವಿರಾಟ್‌, ರೋಹಿತ್‌ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್‌ಗೆ ಒಂದು ತಿಂಗಳಿಗಿಂತ ಕಡಿಮೆ ಸಮಯ ಇದೆ. ಹೀಗಾಗಿ ಎಲ್ಲರ ಚಿತ್ತ ವಿಶ್ವಕಪ್‌ನತ್ತ ನೆಟ್ಟಿದೆ. ಆದರೆ ಕೊಹ್ಲಿ, ರೋಹಿತ್‌ ಆಡುವ ಕಾರಣಕ್ಕೆ ಏಕದಿನ ಸರಣಿಯನ್ನು ಕೂಡಾ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಹಾಗೂ ವಿಜಯ್ ಹಜಾರೆ ಏಕದಿನ ಕ್ರಿಕೆಟ್‌ನಲ್ಲಿ ಅಬ್ಬರದ ಆಟವಾಡಿರುವ ಇವರಿಬ್ಬರು ಕಿವೀಸ್‌ ಸರಣಿಯಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲವಿದೆ.

ಶ್ರೇಯಸ್‌ ಕಮ್‌ಬ್ಯಾಕ್‌:

ಭಾರತದ ಪರ ಕಳೆದ ಅಕ್ಟೋಬರ್‌ನಲ್ಲಿ ಕೊನೆ ಬಾರಿ ಏಕದಿನ ಪಂದ್ಯವಾಡಿದ್ದ ಶ್ರೇಯಸ್ ಅಯ್ಯರ್‌, ಗಾಯದಿಂದ ಚೇತರಿಸಿಕೊಂಡು ಸದ್ಯ ಕಮ್‌ಬ್ಯಾಕ್‌ಗೆ ಸಜ್ಜಾಗಿದ್ದಾರೆ. ಅವರು 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಟಿ20 ವಿಶ್ವಕಪ್‌ ತಂಡದಿಂದ ಹೊರಬಿದ್ದಿರುವ ಏಕದಿನ ಮಾದರಿ ನಾಯಕ ಶುಭ್‌ಮನ್‌ ಗಿಲ್‌ ಕೂಡಾ ಈ ಸರಣಿಯಲ್ಲಿ ಆಡಲಿದ್ದಾರೆ. ಅವರಿಗಾಗಿ ಯಶಸ್ವಿ ಜೈಸ್ವಾಲ್‌ ಜಾಗ ಬಿಟ್ಟುಕೊಡಬೇಕಾಗಬಹುದು. ಉಳಿದಂತೆ ಕೆ.ಎಲ್‌.ರಾಹುಲ್‌ ವಿಕೆಟ್‌ ಕೀಪಿಂಗ್‌ ಜೊತೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಜವಾಬ್ದಾರಿ ನಿಭಾಯಿಸಲಿದ್ದಾರೆ. ಬೂಮ್ರಾ, ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದೆ.

ಸಂಘಟಿತ ಪ್ರದರ್ಶನಕ್ಕೆ ಸಿದ್ಧ:

ಸಂಘಟಿತ ಆಟದ ಮೇಲೆ ನಂಬಿಕೆ ಇಟ್ಟುಕೊಂಡಿರುವ ಕಿವೀಸ್‌, ತಾರಾ ಆಟಗಾರರ ಅನುಪಸ್ಥಿತಿ ನಡುವೆಯೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ತಂಡ 2024-25ರಲ್ಲಿ ಭಾರತ ಪ್ರವಾಸ ಕೈಗೊಂಡು ಟೆಸ್ಟ್‌ ಸರಣಿಯಲ್ಲಿ 3-0 ವೈಟ್‌ವಾಶ್‌ ಮಾಡಿದ ಆತ್ಮವಿಶ್ವಾಸ ಹೊಂದಿದ್ದು, ಈ ಬಾರಿ ಏಕದಿನ ಸರಣಿಯಲ್ಲೂ ಅಬ್ಬರಿಸುವ ಕಾತರದಲ್ಲಿದೆ. ಮೈಕಲ್‌ ಬ್ರೇಸ್‌ವೆಲ್‌ ತಂಡದ ನಾಯಕತ್ವ ವಹಿಸಲಿದ್ದಾರೆ.

01ನೇ ಪಂದ್ಯ: ಇದು ವಡೋದರಾದ ಕೊಟಂಬಿ ಕ್ರೀಡಾಂಗಣದಲ್ಲಿ ಪುರುಷರ ಮೊದಲ ಅಂತಾರಾಷ್ಟ್ರೀಯ ಪಂದ್ಯ.

ಭಾರತದಲ್ಲಿ ಏಕದಿನ ಸರಣಿ ಗೆದ್ದಿಲ್ಲ ಕಿವೀಸ್‌!

ಕಿವೀಸ್‌ ತಂಡ ಈವರೆಗೆ ಒಮ್ಮೆಯೂ ಭಾರತದಲ್ಲಿ ಏಕದಿನ ಸರಣಿ ಗೆದ್ದಿಲ್ಲ. 7 ಬಾರಿಯೂ ಭಾರತ ತಂಡವೇ ಗೆದ್ದಿದೆ. ಒಟ್ಟಾರೆ ಉಭಯ ತಂಡಗಳ ನಡುವೆ 17 ಬಾರಿ ಏಕದಿನ ಸರಣಿ ಆಯೋಜನೆಗೊಂಡಿವೆ. 9 ಬಾರಿ ಭಾರತ ಗೆದ್ದಿದ್ದರೆ, 2ರಲ್ಲಿ ಕಿವೀಸ್‌ ಜಯಗಳಿಸಿದೆ. 2 ಸರಣಿಗಳು ಡ್ರಾಗೊಂಡಿವೆ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌.

ಕಿವೀಸ್‌ನ 15ರಲ್ಲಿ 8 ಮಂದಿಗೆ ಭಾರತದಲ್ಲಿ ಇದೇ ಮೊದಲ ಪಂದ್ಯ!

ಈ ಬಾರಿ ಕಿವೀಸ್‌ ತಂಡದಲ್ಲಿ ಅನನುಭವಿಗಳೇ ಹೆಚ್ಚಿದ್ದಾರೆ. ತಂಡದಲ್ಲಿರುವ 15 ಮಂದಿ ಪೈಕಿ 8 ಆಟಗಾರರು ಇದೇ ಮೊದಲ ಬಾರಿ ಭಾರತದಲ್ಲಿ ಆಡಲು ಸಜ್ಜಾಗಿದ್ದಾರೆ. ಇಬ್ಬರು ಈವರೆಗೆ ಒಂದೂ ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ. ಐವರು ಆಟಗಾರರು 10ಕ್ಕಿಂತ ಕಡಿಮೆ ಪಂದ್ಯಗಳಲ್ಲಿ ಆಡಿದ್ದಾರೆ.