ವೆಲ್ಲಿಂಗ್ಟನ್(ಫೆ.29): ಭಾರತ ತಂಡವನ್ನು ಕೇವಲ 242 ರನ್‌ಗಳಿಗೆ ಆಲೌಟ್ ಮಾಡಿದ್ದ ನ್ಯೂಜಿಲೆಂಡ್ ಬ್ಯಾಟಿಂಗ್‌ನಲ್ಲೂ ಉತ್ತಮ ಆರಂಭ ಪಡೆದಿದೆ. ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ಕಿವೀಸ್ ತಂಡ ವಿಕೆಟ್ ನಷ್ಟವಿಲ್ಲದೇ 63 ರನ್ ಗಳಿಸಿದ್ದು, ಇನ್ನೂ 179 ರನ್‌ಗಳ ಹಿನ್ನಡೆಯಲ್ಲಿದೆ.

ಭಾರತವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ ಕಿವೀಸ್, ಬ್ಯಾಟಿಂಗ್‌ನಲ್ಲೂ ದಿಟ್ಟ ಹೆಜ್ಜೆಯಿಟ್ಟಿದೆ. ಮೊದಲ ವಿಕೆಟ್‌ಗೆ ಟಾಮ್ ಲಾಥಮ್(27) ಹಾಗೂ ಟಾಮ್ ಬ್ಲಂಡೆಲ್(29) ಮುರಿಯದ 63 ರನ್‌ಗಳ ಜತೆಯಾಟವಾಡಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. 

2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲೌಟ್ @243

ಇದಕ್ಕೂ ಮೊದಲು ಇಲ್ಲಿನ ಹೇಗ್ಲೆ ಓವಲ್ ಮೈದಾನದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಕಿವೀಸ್ ವೇಗಿಗಳು ಟೀಂ ಇಂಡಿಯಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಪೃಥ್ವಿ ಶಾ, ಚೇತೇಶ್ವರ್ ಪೂಜಾರ ತಲಾ 54 ಬಾರಿಸಿದರೆ, ಹನುಮ ವಿಹಾರಿ 55 ರನ್ ಬಾರಿಸಿದರು. ಈ ಮೂವರನ್ನು ಹೊರತುಪಡಿಸಿದರೆ, ಭಾರತದ ಪರ ಯಾವೊಬ್ಬ ಆಟಗಾರರೂ ಕಿವೀಸ್ ಎದುರು ಪ್ರತಿರೋಧ ತೋರಲಿಲ್ಲ. ಅಗ್ರ ಕ್ರಮಾಂಕದ ಐವರು ಆಟಗಾರರ ಪೈಕಿ ಮೂವರು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಮಯಾಂಕ್ ಹಾಗೂ ರಹಾನೆ ತಲಾ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಕೊಹ್ಲಿ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

2ನೇ ಟೆಸ್ಟ್: ಕೊಹ್ಲಿ-ಅಗರ್‌ವಾಲ್ ಫೇಲ್, ಪೃಥ್ವಿ-ಪೂಜಾರ ಫಿಫ್ಟಿ

ನಾಟಕೀಯ ಕುಸಿತ: ಒಂದು ಹಂತದಲ್ಲಿ 113 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಹಾಗೂ ವಿಹಾರಿ ಜೋಡಿ ಆಸರೆಯಾಯಿತು. ಈ ಜೋಡಿ 81 ರನ್‌ಗಳ ಜತೆಯಾಟವಾಡುವ ಭಾರತ ತಂಡಕ್ಕೆ ಆಸರೆಯಾಯಿತು. 194 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ ವಿಹಾರಿ ವಿಕೆಟ್ ಪತನದ ಬಳಿಕ ದಿಢೀರ್ ಕುಸಿತ ಕಂಡಿತು. 216 ರನ್‌ಗಳಿಸುವಷ್ಟರಲ್ಲಿ ಭಾರತ 9 ವಿಕೆಟ್ ಕಳೆದುಕೊಂಡಿತು. ಕೇವಲ 23 ರನ್‌ಗಳ ಅಂತರದಲ್ಲಿ ವಿರಾಟ್ ಪಡೆ 5 ವಿಕೆಟ್ ಕಳೆದುಕೊಳ್ಳುವ ಮೂಲಕ ನಾಟಕೀಯ ಕುಸಿತ ಕಂಡಿತು.

ಇನ್ನು ನ್ಯೂಜಿಲೆಂಡ್ ಪರ ಶಿಸ್ತುಬದ್ಧ ದಾಳಿ ನಡೆಸಿದ ಕೈಲ್ ಜಾಮಿಸನ್ 45 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಇನ್ನು ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಟ್ ತಲಾ 2 ವಿಕೆಟ್ ಪಡೆದರು. ಇನ್ನು ನೀಲ್ ವ್ಯಾಗ್ನರ್ ಒಂದು ವಿಕೆಟ್ ಕಬಳಿಸಿದರು.